ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಜೈಲ್ ಭರೋ ಚಳವಳಿ

KannadaprabhaNewsNetwork |  
Published : Nov 14, 2025, 01:00 AM IST
13ಕೆಆರ್ ಎಂಎನ್ 1.ಜೆಪಿಜಿಜೆಡಿಎಸ್ ಜಿಲ್ಲಾಧ್ಯಕ್ಷರಾದ ಮಾಜಿ ಶಾಸಕ ಎ.ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ರಾಮನಗರ: ಬಿಡದಿ ಟೌನ್ ಶಿಪ್ ಯೋಜನೆಗಾಗಿ ಭೂ ಸ್ವಾಧೀನ ಮತ್ತು ರೈತರ ಮೇಲೆ ಪ್ರಕರಣ ದಾಖಲಿಸಿರುವ ಕ್ರಮ ಖಂಡಿಸಿ ಶೀಘ್ರದಲ್ಲಿಯೇ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಜೈಲ್ ಭರೋ ಚಳವಳಿ ನಡೆಸಲಾಗುವುದು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷರಾದ ಮಾಜಿ ಶಾಸಕ ಎ.ಮಂಜುನಾಥ್ ಎಚ್ಚರಿಕೆ ನೀಡಿದರು.

ರಾಮನಗರ: ಬಿಡದಿ ಟೌನ್ ಶಿಪ್ ಯೋಜನೆಗಾಗಿ ಭೂ ಸ್ವಾಧೀನ ಮತ್ತು ರೈತರ ಮೇಲೆ ಪ್ರಕರಣ ದಾಖಲಿಸಿರುವ ಕ್ರಮ ಖಂಡಿಸಿ ಶೀಘ್ರದಲ್ಲಿಯೇ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಜೈಲ್ ಭರೋ ಚಳವಳಿ ನಡೆಸಲಾಗುವುದು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷರಾದ ಮಾಜಿ ಶಾಸಕ ಎ.ಮಂಜುನಾಥ್ ಎಚ್ಚರಿಕೆ ನೀಡಿದರು.

ಬಿಡದಿ ಹೋಬಳಿಯ ಬೈರಮಂಗಲ ವೃತ್ತದಲ್ಲಿ ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿಗಳ ರೈತರ ಭೂ ಹಿತ ರಕ್ಷಣಾ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿಯಲ್ಲಿ ಪಾಲ್ಗೊಂಡ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಬೈರಮಂಗಲದಿಂದ ಸಹಸ್ರಾರು ರೈತರು ಎತ್ತಿನ ಗಾಡಿ, ಟ್ರ್ಯಾಕ್ಟರ್, ಜಾನುವಾರುಗಳ ಸಮೇತ ಬಿಡದಿ ಮಾರ್ಗವಾಗಿ ರಾಮನಗರಕ್ಕೆ ತೆರಳಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕುತ್ತೇವೆ. ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಕೂಡ ಜೈಲ್ ಭರೋ ಚಳವಳಿಯಲ್ಲಿ ಭಾಗಿಯಾಗುತ್ತಾರೆ. 3600 ರೈತ ಕುಟುಂಬ ಜೈಲಿಗೆ ಹೋಗಲು ಸಿದ್ಧವಾಗಿದ್ದು, ತಾಕತ್ತಿದ್ದರೆ ಬಂಧಿಸಿ ತೋರಿಸಲಿ ಎಂದು ಸವಾಲು ಹಾಕಿದರು.

25 ರೈತರ ಮೇಲೆ ಎಫ್ ಐಆರ್ ದಾಖಲು:

ಬಿಡದಿ ಟೌನ್ ಶಿಪ್ ಯೋಜನೆಗಾಗಿ ಸ್ವಾಧೀನ ಪಡಿಸಿಕೊಳ್ಳಲು ಭೂ ದರ ನಿಗದಿ ಸಭೆಯನ್ನು ಜಿಲ್ಲಾಧಿಕಾರಿಗಳು ನ.6ರಂದು ದಿನಾಂಕ ಗೊತ್ತು ಪಡಿಸಿದ್ದರು. ಇದಕ್ಕಾಗಿ ರಾಮನಗರ ಮತ್ತು ಹಾರೋಹಳ್ಳಿ ತಹಸೀಲ್ದಾರ್ ರವರ ಮೂಲಕ ಸಭೆ ನೋಟಿಸ್ ಗಳನ್ನು ನ.3ರಂದು ಡೇರಿ, ಗ್ರಾಪಂ ಕಚೇರಿ, ಸರ್ಕಾರಿ ಕಚೇರಿ ಗೋಡೆಗಳ ಮೇಲೆ ಅಂಟಿಸಿದ್ದರು.

ಕಾನೂನು ಪ್ರಕಾರ ಏಳು ದಿನಗಳ ನೋಟಿಸ್ ನೀಡಿ ಸಭೆ ಕರೆಯಬೇಕು. ಆದರೆ, ಜಿಲ್ಲಾಧಿಕಾರಿಗಳು ಯಾರದೊ ಮರ್ಜಿಗೆ ಒಳಗಾಗಿ ಒಂದು ದಿನದ ಗಡುವಿನಲ್ಲಿ ಸಭೆ ಕರೆದಿದ್ದರು. ಹೋರಾಟ ಸಮಿತಿಯವರು ಜಿಲ್ಲಾಧಿಕಾರಿಗಳು ಸಭೆ ಕರೆದಾಗ ಹೋಗದಿದ್ದರೆ ತಪ್ಪಾಗುತ್ತದೆ ಎಂಬ ಕಾರಣಕ್ಕೆ ಸಹಸ್ರಾರು ಭೂ ಮಾಲೀಕರು ಸಭೆಗೆ ತೆರಳಿದ್ದರು ಎಂದು ಹೇಳಿದರು.

3600 ಕುಟುಂಬಗಳ ರೈತರು ಸಭೆಗೆ ಹಾಜರಾದರೆ ಎಲ್ಲಿ ಜಾಗದ ವ್ಯವಸ್ಥೆ ಮಾಡಬೇಕು. ಎಲ್ಲಿ ಸಭೆ ನಡೆಸಬೇಕು ಎಂಬ ಸಾಮಾನ್ಯ ಪರಿಜ್ಞಾನ ಜಿಲ್ಲಾಧಿಕಾರಿಗಳಿಗೆ ಇಲ್ಲ. ರೈತರ ಸಭೆ ಕರೆದ ಜಿಲ್ಲಾಧಿಕಾರಿಗಳು ತಮಗೆ ಬೇಕಾದ 30 ಮಂದಿ ರೈತರನ್ನು ಮಾತ್ರ ಸಭೆಯಲ್ಲಿ ಕೂರಿಸಿಕೊಂಡಿದ್ದರು. ಉಳಿದ ರೈತರನ್ನು ಸಭೆಗೆ ಬಿಡದೆ ತಡೆದು ನಿಲ್ಲಿಸಿದರು. ಅಷ್ಟೇ ಅಲ್ಲದೆ, ರೈತರನ್ನು ಪೊಲೀಸ್ ವಾಹನಕ್ಕೆ ತುಂಬಿ, 25ಮಂದಿ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ ಎಂದು ದೂರಿದರು.

ಬಡ ರೖತರಿಗೆ ನ್ಯಾಯ ದೊರಕಿಸದ ಬೇಕಾದ ಜಿಲ್ಲಾಧಿಕಾರಿಗಳೇ ಕಬಳಿಸುವವರ ಪರವಾಗಿ ನಿಂತಿದ್ದಾರೆ. ಅವರ ಏಕ ಪಕ್ಷೀಯವಾದ ನಡವಳಿಕೆಯನ್ನು ರೈತರು ಯಾರು ಪ್ರಶ್ನೆ ಮಾಡಬಾರದಾ. ರೈತರನ್ನು ಬಂಧಿಸಿ ಪ್ರಕರಣ ದಾಖಲಿಸಿದರೆ ಹೆದರುತ್ತಾರೆ ಎಂಬುದು ನಿಮ್ಮ ಭ್ರಮೆ. ರೈತರು ಹೆದರುವ ಜಾಯಮಾನದವರಲ್ಲ ಎಂದು ಕಿಡಿಕಾರಿದರು.

ಇಲ್ಲಿನ ಜಿಲ್ಲಾಧಿಕಾರಿಗಳು ಕಚೇರಿ ಸುತ್ತಲು ನಿಷೇಧಾಜ್ಞೆ ಹಾಕಿಕೊಂಡು ಆಡಳಿತ ನಡೆಸುತ್ತಿದ್ದಾರೆ. ಇದು ರಾಜ್ಯದ ಬೇರೆ ಯಾವ ಜಿಲ್ಲೆಗಳಲ್ಲು ಇಲ್ಲ. ಜಿಲ್ಲಾಧಿಕಾರಿಗಳಿಗೆ ರೈತರು ಇಲ್ಲಿವರೆಗೆ ಗೌರವ ಕೊಟ್ಟಿಕೊಂಡು ಬಂದಿದ್ದಾರೆ. ಇನ್ನು ಮುಂದೆ ಜಿಲ್ಲಾಧಿಕಾರಿಗಳ ದೌರ್ಜನ್ಯ ಮತ್ತು ಪೊಲೀಸರ ಬಲ ಪ್ರಯೋಗಕ್ಕೆ ಹೆದರುವುದಿಲ್ಲ.

ಈ ಯೋಜನೆ ವಿರೋಧಿಸಿ 3200 ರೈತರು ತಕರಾರು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿಗಳು ಎಷ್ಟು ರೈತರು ತಕರಾರು ಅರ್ಜಿ ಹಾಕಿದ್ದಾರೆ, ಎಷ್ಟು ರೈತರು ಭೂಮಿ ಕೊಡಲು ಮುಂದೆ ಬಂದಿದ್ದಾರೆ ಎಂಬುದನ್ನು ಬಹಿರಂಗ ಪಡಿಸಲಿ. ಜಮೀನು ಉಳಿಸಿಕೊಳ್ಳಲು ಯಾವ ಹಂತದ ಹೋರಾಟಕ್ಕೂ ರೈತರೊಂದಿಗೆ ನಾವೆಲ್ಲರು ಸಿದ್ಧರಾಗಿದ್ದೇವೆ ಎಂದು ಎ.ಮಂಜುನಾಥ್ ಹೇಳಿದರು.

ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿಗಭ ರೖತರ ಭೂ ಹಿತ ರಕ್ಷಣಾ ಸಂಘದ ಅಧ್ಯಕ್ಷ ಅರಳಾಳಸಂದ್ರ ಕೆ.ರಾಮಯ್ಯ, ನಾಗರಾಜು, ಆನಂದ್ ಮತ್ತಿತರರು ಇದ್ದರು.

ಬಾಕ್ಸ್‌...............

ಜಿಲ್ಲಾಧಿಕಾರಿಗಳಿಂದ ಬೇನಾಮಿ ಹೆಸರಿನಲ್ಲಿ ಭೂಮಿ ಖರೀದಿ: ಆರೋಪ

- ರಾಜ್ಯಪಾಲರು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ಲೋಕಾಯುಕ್ತರಿಗೆ ದೂರು ಸಲ್ಲಿಕೆ

ರಾಮನಗರ: ಬಿಡದಿ ಟೌನ್ ಶಿಪ್ ಯೋಜನೆಗಾಗಿ ಭೂ ಸ್ವಾಧೀನ ಪಡಿಸುತ್ತಿರುವ ಭಾಗಗಳಲ್ಲಿ ಜಿಲ್ಲಾಧಿಕಾರಿಗಳೇ ಬೇನಾಮಿ ಹೆಸರಿನಲ್ಲಿ ಭೂಮಿ ಖರೀದಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ರಾಜ್ಯಪಾಲರು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ಲೋಕಾಯುಕ್ತರಿಗೆ ದೂರು ಸಲ್ಲಿಸುವುದಾಗಿ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಮಾಜಿ ಶಾಸಕ ಎ.ಮಂಜುನಾಥ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳು 300 ರಿಂದ 400 ಎಕರೆ ಭೂಮಿಯನ್ನು ಬೇನಾಮಿ ಹೆಸರಿನಲ್ಲಿ ಖರೀದಿ ಮಾಡಿರುವ ದಾಖಲೆಗಳಿವೆ. ಲೋಕಾಯುಕ್ತರಿಂದ ತನಿಖೆಯಾದರೆ ಸತ್ಯಾಂಶ ಬಹಿರಂಗವಾಗುತ್ತದೆ ಎಂದರು.

ರಾಜಕಾರಣಿಗಳು 1 ಸಾವಿರ ಎಕರೆಗೂ ಹೆಚ್ಚಿನ ಭೂಮಿಯನ್ನು ಬೇನಾಮಿ ಹೆಸರಿನಲ್ಲಿ ಖರೀದಿ ಮಾಡಿದ್ದಾರೆ. ಇನ್ನು ಜಿಲ್ಲಾಧಿಕಾರಿಗಳಿಗೆ ಜಮೀನು ಕೊಡಿಸಿರುವ ಏಜೆಂಟ್ ಗಳೇ ನಮಗೆ ದಾಖಲೆಗಳನ್ನು ನೀಡಿದ್ದಾರೆ. ರೈತರ ಮೂಲಕವೇ ಜಿಲ್ಲಾಧಿಕಾರಿಗಳ ವಿರುದ್ಧ ಲೋಕಾಯುಕ್ತರಿಗೆ ದೂರು ಸಲ್ಲಿಸುತ್ತೇನೆ ಎಂದು ಹೇಳಿದರು.

ಭೂ ದರ ನಿಗದಿ ಸಂಬಂಧ ಜಿಲ್ಲಾಧಿಕಾರಿಗಳು ಮೂವತ್ತು ಮಂದಿಯನ್ನು ಕೂರಿಸಿಕೊಂಡು ಸಭೆ ನಡೆಸಿದರು. ಆದರೆ, ಅವರ್ಯಾರು ರೈತರೇ ಅಲ್ಲ. ಅವರೆಲ್ಲರು ಆರು ತಿಂಗಳ ಹಿಂದೆ ಜಿಲ್ಲಾಧಿಕಾರಿಗಳಿಗೆ ಬೇನಾಮಿ ಹೆಸರಿನಲ್ಲಿ ಭೂಮಿ ಕೊಡಿಸಿದ ಏಜೆಂಟ್ ಗಳು. ಯಾರ್ಯಾರ ಹೆಸರಿನಲ್ಲಿ ಜಿಲ್ಲಾಧಿಕಾರಿಗಳು ಭೂಮಿ ಖರೀದಿಸಿದ್ದಾರೊ ಅದರ ದಾಖಲೆಗಳಿವೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿಗಳ ಪಾರದರ್ಶಕವಾಗಿ ಆಡಳಿತ ನಡೆಸುತ್ತಿಲ್ಲ. ಯಾರದೊ ಕೈಗೊಂಬೆಯಾಗಿ ಆಡಳಿತ ನಡೆಸುತ್ತಿದ್ದು, ರೈತರ ಎದೆ ಮೇಲೆ ಸಮಾಧಿ ಕಟ್ಟಲು ಬಂದಿದ್ದಾರೆ. 9 ಸಾವಿರ ಎಕರೆ ಭೂಮಿಯಲ್ಲಿ 2700 ಎಕರೆ ಸರ್ಕಾರಿ ಭೂಮಿ ಇದೆಯೆಂದು ಹೇಳಿದ್ದರು. ಈಗ 750 ಎಕರೆ ಮಾತ್ರ ಸರ್ಕಾರಿ ಭೂಮಿ ಇದೆ ಎಂದು ಹೇಳುತ್ತಿದ್ದಾರೆ. ಉಳಿದ ಭೂಮಿ ಏನಾಯಿತು, ಯಾರ ಹೆಸರಿಗೆ ಹೋಯಿತು ಎಂದು ಪ್ರಶ್ನಿಸಿದರು.

ಜಿಬಿಎ ಅಧ್ಯಕ್ಷರಿಗೂ ಸನ್ಮಾನ:

ಶಾಸಕ ಬಾಲಕೃಷ್ಣರವರು ಅರಳಾಳುಸಂದ್ರಕ್ಕೆ ಬಂದಾಗ ರೈತರು ಗೌರವ ಕೊಟ್ಟು ಕಳುಹಿಸಿದ್ದಾರೆ. ಶೀಘ್ರದಲ್ಲಿಯೇ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರ ಮನೆಗೂ ಹೋಗಿ ರೖತರು ಸನ್ಮಾನ ಮಾಡುತ್ತಾರೆ ಎಂದು ಮಂಜುನಾಥ್ ಹೇಳಿದರು.

ಕೋಟ್ .................

ಬಿಡದಿ ಟೌನ್ ಶಿಪ್ ಯೋಜನೆಗೆ ಭೂಮಿ ಕೊಡಲು ರೈತರು ವಿರೋಧಿಸುತ್ತಿರುವ ವಿಚಾರವಾಗಿ ವಿಪಕ್ಷ ನಾಯಕ ಆರ್. ಅಶೋಕ್ ಮತ್ತು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬುರವರು

ಬೆಳಗಾವಿ ಅಧಿವೇಶನದಲ್ಲಿ ಕೂಲಂಕಷವಾಗಿ ಚರ್ಚೆ ಮಾಡಲಿದ್ದಾರೆ.

-ಎ.ಮಂಜುನಾಥ್ , ಮಾಜಿ ಶಾಸಕರು

13ಕೆಆರ್ ಎಂಎನ್ 1.ಜೆಪಿಜಿ

ಜೆಡಿಎಸ್ ಜಿಲ್ಲಾಧ್ಯಕ್ಷರಾದ ಮಾಜಿ ಶಾಸಕ ಎ.ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ