ಜೈಲ್ ಜಾಮರ್‌ ಜಂಜಾಟ; ನಿಂತಿಲ್ಲ ಸಾರ್ವಜನಿಕರ ಪರದಾಟ !

KannadaprabhaNewsNetwork |  
Published : Sep 24, 2026, 02:00 AM IST
ಬಳ್ಳಾರಿ ಕಾರಾಗೃಹ | Kannada Prabha

ಸಾರಾಂಶ

ಇಂದಿನ ದಿನಗಳಲ್ಲಿ ಸಣ್ಣಪುಟ್ಟ ಅಂಗಡಿಗಳಿಂದ ಹಿಡಿದು ದೊಡ್ಡ ವ್ಯಾಪಾರ ಮಳಿಗೆಗಳವರೆಗೆ ಬಹುತೇಕ ವಹಿವಾಟು ಡಿಜಿಟಲ್‌ ಆಗಿದೆ. ಯುಪಿಐ, ಕ್ಯೂಆರ್‌ ಕೋಡ್‌, ಮೊಬೈಲ್‌ ಬ್ಯಾಂಕಿಂಗ್‌ ಮತ್ತಿತರ ಸೇವೆ ಗ್ರಾಹಕರು ವ್ಯಾಪಕವಾಗಿ ಬಳಸುತ್ತಿದ್ದಾರೆ.

ಮಂಜುನಾಥ ಕೆ.ಎಂ. ಬಳ್ಳಾರಿ

ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಅಳವಡಿಸಿರುವ ಮೊಬೈಲ್ ಜಾಮರ್‌ ಇದೀಗ ಕಾರಾಗೃಹದ ಭದ್ರತೆಯ ಜತೆಗೆ ಸುತ್ತಮುತ್ತಲಿನ ಜನರಿಗೂ ತಲೆನೋವಾಗಿ ಪರಿಣಮಿಸಿದೆ. ಜಾಮರ್‌ನ ವ್ಯಾಪ್ತಿಯಿಂದ ಕಾರಾಗೃಹದ ಸುತ್ತಮುತ್ತಲಿನ ಕಾಲನಿಗಳ ನಿವಾಸಿಗಳು, ಆಸ್ಪತ್ರೆಗಳು, ಖಾಸಗಿ ಕಚೇರಿಗಳು ಹಾಗೂ ಸಣ್ಣಪುಟ್ಟ ವ್ಯಾಪಾರಸ್ಥರು ಮೊಬೈಲ್ ಸಂಪರ್ಕಕ್ಕಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಾರಾಗೃಹದೊಳಗೆ ಅಕ್ರಮವಾಗಿ ಮೊಬೈಲ್‌ ಬಳಕೆಯಾಗದಂತೆ ತಡೆಯುವ ಉದ್ದೇಶದಿಂದ ಜಾಮರ್ ಅಳವಡಿಸಲಾಗಿದೆ. ಆದರೆ ಅದರ ಪರಿಣಾಮ ಕಾರಾಗೃಹದ ಸುತ್ತಮುತ್ತಲಿನ ಪ್ರದೇಶಗಳಿಗೂ ವ್ಯಾಪಿಸುತ್ತಿದ್ದು, ಮೊಬೈಲ್ ಕರೆ, ಇಂಟರ್‌ನೆಟ್‌ ಹಾಗೂ ಡಿಜಿಟಲ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗುತ್ತಿದೆ.

ಕರೆ ಮಾಡಲೂ ಕಷ್ಟ: ಕಾಲನಿಗಳಲ್ಲಿ ವಾಸಿಸುವ ಜನರು ತಮ್ಮ ಕುಟುಂಬದ ಸದಸ್ಯರು, ಸಂಬಂಧಿಕರು ಹಾಗೂ ಕಚೇರಿಗಳೊಂದಿಗೆ ಮೊಬೈಲ್ ಮೂಲಕ ಸಂಪರ್ಕ ಸಾಧಿಸಲು ಪರದಾಡುತ್ತಿದ್ದಾರೆ. ಹಲವು ಬಾರಿ ಕರೆ ಸಂಪರ್ಕವಾಗದೆ ಹೋಗುವುದು, ಸಂಪರ್ಕವಾದರೂ ಧ್ವನಿ ಸ್ಪಷ್ಟವಾಗಿ ಕೇಳಿಸದಿರುವುದು, ಕರೆ ಮಧ್ಯದಲ್ಲೇ ಕಡಿತಗೊಳ್ಳುವುದು ಸಾಮಾನ್ಯವಾಗಿದೆ. ತುರ್ತು ಸಂದರ್ಭಗಳಲ್ಲಿ ಮೊಬೈಲ್ ಸಂಪರ್ಕದ ಕೊರತೆ ಆತಂಕಕ್ಕೆ ಕಾರಣವಾಗುತ್ತಿದೆ ಎಂದು ಕಾರಾಗೃಹ ಸುತ್ತಮುತ್ತಲ ಪ್ರದೇಶಗಳ ನಿವಾಸಿಗಳು ಬೇಸರ ವ್ಯಕ್ತಪಡಿಸುತ್ತಾರೆ. ಮೊಬೈಲ್‌ ಇಂಟರ್‌ನೆಟ್‌ ಅವಲಂಬಿಸಿರುವ ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಮನೆಯಿಂದಲೇ ಕೆಲಸ ಮಾಡುವವರಿಗೂ ಸಮಸ್ಯೆ ಎದುರಾಗಿದೆ. ಆನ್‌ಲೈನ್‌ ಸಭೆಗಳು, ಸಂದೇಶ ಕಳುಹಿಸುವುದು, ದಾಖಲೆಗಳನ್ನು ಡೌನ್‌ಲೋಡ್‌ ಮಾಡುವುದು ಸೇರಿದಂತೆ ಹಲವು ಕಾರ್ಯಗಳಿಗೆ ಅಡಚಣೆ ಉಂಟಾಗುತ್ತಿದೆ.

ಡಿಜಿಟಲ್ ವಹಿವಾಟಿಗೂ ಹೊಡೆತ: ಇಂದಿನ ದಿನಗಳಲ್ಲಿ ಸಣ್ಣಪುಟ್ಟ ಅಂಗಡಿಗಳಿಂದ ಹಿಡಿದು ದೊಡ್ಡ ವ್ಯಾಪಾರ ಮಳಿಗೆಗಳವರೆಗೆ ಬಹುತೇಕ ವಹಿವಾಟು ಡಿಜಿಟಲ್‌ ಆಗಿದೆ. ಯುಪಿಐ, ಕ್ಯೂಆರ್‌ ಕೋಡ್‌, ಮೊಬೈಲ್‌ ಬ್ಯಾಂಕಿಂಗ್‌ ಮತ್ತಿತರ ಸೇವೆ ಗ್ರಾಹಕರು ವ್ಯಾಪಕವಾಗಿ ಬಳಸುತ್ತಿದ್ದಾರೆ. ಆದರೆ ಮೊಬೈಲ್‌ ಇಂಟರ್‌ನೆಟ್‌ ಸಿಗ್ನಲ್‌ ದುರ್ಬಲವಾಗಿರುವುದರಿಂದ ಹಣ ಪಾವತಿ ವಿಫಲವಾಗುವ ಸಂದರ್ಭಗಳು ಹೆಚ್ಚಾಗಿದ್ದು ವ್ಯಾಪಾರಸ್ಥರಿಗೂ ವಹಿವಾಟು ಪೂರ್ಣಗೊಳ್ಳದೆ ಗ್ರಾಹಕರನ್ನು ಕಾಯಿಸಬೇಕಾಗುತ್ತಿದೆ. ಡಿಜಿಟಲ್‌ ಆರ್ಥಿಕ ವ್ಯವಸ್ಥೆಯತ್ತ ಸಾಗುತ್ತಿರುವ ಸಂದರ್ಭದಲ್ಲಿ ಇಂತಹ ತಾಂತ್ರಿಕ ಅಡಚಣೆಗಳು ಸಣ್ಣ ವ್ಯಾಪಾರಸ್ಥರ ದಿನನಿತ್ಯದ ವಹಿವಾಟಿನ ಮೇಲೂ ಪರಿಣಾಮ ಬೀರುತ್ತಿವೆ.

ಜನರಿಗೂ ಸಂಪರ್ಕ ಸಿಗಲಿ: ಕಾರಾಗೃಹದ ಭದ್ರತೆ ದೃಷ್ಟಿಯಿಂದ ಮೊಬೈಲ್‌ ಜಾಮರ್‌ ಅಗತ್ಯವಿದ್ದರೂ ಅದರ ಪರಿಣಾಮ ಸುತ್ತಮುತ್ತಲಿನ ಜನಜೀವನದ ಮೇಲೆ ಬೀಳದಂತೆ ತಾಂತ್ರಿಕ ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಒತ್ತಾಯ. ಜಾಮರ್‌ನ ವ್ಯಾಪ್ತಿ ನಿಯಂತ್ರಿಸುವುದು, ಅಗತ್ಯವಿರುವ ಪ್ರದೇಶಗಳಿಗೆ ಮೊಬೈಲ್‌ ಸಿಗ್ನಲ್‌ ಲಭ್ಯವಾಗುವಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಹಾಗೂ ತುರ್ತು ಸೇವೆಗಳಿಗೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳುವುದು ಅಗತ್ಯ. ಕಾರಾಗೃಹದ ಭದ್ರತೆ ಮುಖ್ಯವೇ ಸರಿ, ಆದರೆ ಅದರ ಸುತ್ತಲಿನ ನಾಗರಿಕರ ಸಂಪರ್ಕ, ಆರೋಗ್ಯ ಸೇವೆ ಹಾಗೂ ದೈನಂದಿನ ಬದುಕಿಗೂ ಸಮಾನ ಮಹತ್ವವಿದೆ. ಜಾಮರ್‌ ಸಮಸ್ಯೆಗೆ ಶಾಶ್ವತ ತಾಂತ್ರಿಕ ಪರಿಹಾರ ಕಂಡುಕೊಂಡು ಸಾರ್ವಜನಿಕರಿಗೆ ನೆಮ್ಮದಿ ನೀಡಬೇಕಿದೆ.

ಜೈಲ್ ಜಾಮರ್‌ನಿಂದ ಮೊಬೈಲ್ ಸಿಗ್ನಲ್ ಸಿಗದೆ ಪರದಾಡುವಂತಾಗಿದೆ. ವ್ಯಪಾರ ವಹಿವಾಟಿನ ಮೇಲೆ ಹೊಡೆತ ಬಿದ್ದಿದೆ. ಜೈಲು ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುವಂತಾಗಬೇಕು ಎಂದು ಬಳ್ಳಾರಿ ದುರ್ಗಮ್ಮ ದೇವಸ್ಥಾನ ರಸ್ತೆಯ ವ್ಯಾಪಾರಿ ಪಿ.ಎನ್. ಮೋಹನ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಸುರಕ್ಷತೆ ಶಿಕ್ಷಕರ ಮೂಲ ಕರ್ತವ್ಯ: ಸಿದ್ರಾಮೇಶ್ವರ
ಕೊಪ್ಪಳದಲ್ಲಿ ಆಧಾರ್ ತಿದ್ದುಪಡಿಗೆ ಬೆಳಗಿನ ಜಾವವೇ ಕ್ಯೂ