ಜೈನ ಬಸದಿ-ಶಿಲ್ಪಗಳು ಭಾರತದ ಬಹುತ್ವ ಸಂಸ್ಕೃತಿಯ ಜೀವಂತ ದಾಖಲೆಗಳು: ಡಾ.ಅಪ್ಪಣ್ಣ ಹಂಜೆ

KannadaprabhaNewsNetwork |  
Published : Feb 07, 2026, 03:30 AM IST
ಫೋಟೋವಿವರ- (6ಎಚ್‌ಪಿಟಿ1) ಹಂಪಿ ಕನ್ನಡ ವಿಶ್ವವಿದ್ಯಾಲಯದ ತ್ರಿಪದಿ ಸಭಾಂಗಣದಲ್ಲಿ ಅಭೇರಾಜ್ ಬಲ್ಡೋಟ ಜೈನಸಂಸ್ಕೃತಿ ಅಧ್ಯಯನ ಪೀಠದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಜೈನ ಬಸದಿ ಮತ್ತು ಶಿಲ್ಪಗಳ ಪರಿಕಲ್ಪನೆಗಳು ವಿಶೇಷ ಉಪನ್ಯಾಸದಲ್ಲಿ ಡಾ. ಅಪ್ಪಣ್ಣ ಹಂಜೆ ಮಾತನಾಡಿದರು | Kannada Prabha

ಸಾರಾಂಶ

ಬೌದ್ಧ, ಜೈನ, ಶೈವ, ವೈಷ್ಣವ ಸೇರಿದಂತೆ ವಿವಿಧ ಧರ್ಮಗಳು ಭಾರತದ ಪರಂಪರೆ ಮತ್ತು ಸಂಸ್ಕೃತಿಯ ಅಡಿಪಾಯಗಳಾಗಿವೆ.

ಹೊಸಪೇಟೆ: ಭಾರತವನ್ನು ಬಹುತ್ವದ ದೃಷ್ಟಿಕೋನದಿಂದ ಅಧ್ಯಯನ ಮಾಡದೆ ಅದರ ಆತ್ಮವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಗದಗ ಜಿಲ್ಲೆಯ ಹುಲಕೋಟಿಯ ಕೆ.ಎಚ್. ಪಾಟೀಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ಅಪ್ಪಣ್ಣ ಹಂಜೆ ಹೇಳಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ತ್ರಿಪದಿ ಸಭಾಂಗಣದಲ್ಲಿ ಅಭೇರಾಜ್ ಬಲ್ಡೋಟ ಜೈನಸಂಸ್ಕೃತಿ ಅಧ್ಯಯನ ಪೀಠದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಜೈನ ಬಸದಿ ಮತ್ತು ಶಿಲ್ಪಗಳ ಪರಿಕಲ್ಪನೆಗಳು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬೌದ್ಧ, ಜೈನ, ಶೈವ, ವೈಷ್ಣವ ಸೇರಿದಂತೆ ವಿವಿಧ ಧರ್ಮಗಳು ಭಾರತದ ಪರಂಪರೆ ಮತ್ತು ಸಂಸ್ಕೃತಿಯ ಅಡಿಪಾಯಗಳಾಗಿವೆ. ಜೈನ ಬಸದಿಗಳು ಮತ್ತು ಶಿಲ್ಪಗಳು ಕೇವಲ ಧಾರ್ಮಿಕ ಕಟ್ಟಡಗಳಲ್ಲ, ಅವು ಧರ್ಮದ ಬೌದ್ಧಿಕ ಮತ್ತು ಬೌತಿಕ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಮಹತ್ವದ ಐತಿಹಾಸಿಕ ದಾಖಲೆಗಳಾಗಿವೆ.

ಇವುಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡುವುದರಿಂದ ಸಮಾಜದ ಮೌಲ್ಯಗಳು, ಚಿಂತನೆ ಮತ್ತು ಜೀವನ ಕ್ರಮವನ್ನು ತಿಳಿದುಕೊಳ್ಳಬಹುದು. ಜೈನ ಧರ್ಮದಲ್ಲಿನ ಅನೇಕಾಂತವಾದ ಎಲ್ಲ ಜೀವಿಗಳ ಗೌರವ ಮತ್ತು ಸಹಿಷ್ಣುತೆಯ ಸಂದೇಶವನ್ನು ಸಾರುತ್ತದೆ ಎಂದು ಅವರು ವಿವರಿಸಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಸಮಾರಂಭದ ಅಧ್ಯಕ್ಷತೆವಹಿಸಿಕೊಂಡು ಅವರು ಮಾತನಾಡಿ, ಕನ್ನಡ ಸಾಹಿತ್ಯ ಚರಿತ್ರೆಯ ಆರಂಭವೇ ಜೈನ ಪರಂಪರೆಯಿಂದ ಆಗಿದೆ. ಕನ್ನಡದ ಪ್ರಾಚೀನ ಸಾಹಿತ್ಯಕ್ಕೆ ಜೈನ ಧರ್ಮ ನೀಡಿರುವ ಕೊಡುಗೆ ಅನನ್ಯವಾಗಿದ್ದು, ಕರ್ನಾಟಕದ ಸಾಹಿತ್ಯ ಚರಿತ್ರೆಯಲ್ಲಿ ಅದರ ಪಾತ್ರ ಅಪಾರವಾಗಿದೆ ಎಂದು ಅವರು ತಿಳಿಸಿದರು.

ಜೈನ ಧರ್ಮ ಸಾರುವ ತ್ಯಾಗ, ವೈರಾಗ್ಯ ಮತ್ತು ಅಹಿಂಸೆಯ ಮೌಲ್ಯಗಳು ಇಂದಿನ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿವೆ ಎಂದು ಅವರು ಅಭಿಪ್ರಾಯಪಟ್ಟರು.

ಹಂಪಿ ವಿವಿಯ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಪ್ರಾಧ್ಯಾಪಕ ಡಾ. ವಾಸುದೇವ ಬಡಿಗೇರ, ಡಾ. ಎಸ್.ವೈ. ಸೋಮಶೇಖರ್, ಡಾ. ಮೋಹನ್‌ ರಾವ್ ಬಿ. ಪಂಚಾಳ, ಡಾ.ಎ ರ‍್ರಿಸ್ವಾಮಿ ಈ. ಸೇರಿದಂತೆ ವಿವಿಧ ವಿಭಾಗಗಳ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಅಭೇರಾಜ್ ಬಲ್ಡೋಟ ಜೈನಸಂಸ್ಕೃತಿ ಅಧ್ಯಯನ ಪೀಠದ ಸಂಚಾಲಕ ಡಾ. ರಮೇಶ ನಾಯ್ಕ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಶೋಧನಾರ್ಥಿ ನಾಗರಾಜ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೆಟ್ರೋ ದರ ಏರಿಸಿದ್ದು ನಾವಲ್ಲ, ಕೇಂದ್ರ : ಸಿಎಂ ಸಿದ್ದರಾಮಯ್ಯ
ಕಾಂಗ್ರೆಸ್ಸಲ್ಲಿ ಯತೀಂದ್ರ ಕಿಚ್ಚು : '5 ವರ್ಷವೂ ನಮ್ಮ ತಂದೆ ಸಿಎಂ, ಇದು ಈಗ ಸೆಟಲ್ಡ್‌ ವಿಚಾರ'