ಜೈನ್‌ ಮುನಿ, ಸಾಧ್ವಿಗಳಿಗೆ ರಕ್ಷಣೆ ನೀಡಿ

KannadaprabhaNewsNetwork |  
Published : Jun 04, 2026, 02:00 AM IST
ಜೈನ್‌ ಮುನಿಗಳ, ಸಾಧ್ವಿಗಳ ಸಂಚಾರದ ವೇಳೆ ರಕ್ಷಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹುಬ್ಬಳ್ಳಿಯಲ್ಲಿ ಸಕಲ ಜೈನ ಸಮಾಜ ಬಾಂಧವರು ಬೃಹತ್‌ ಮೌನ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಅಹಿಂಸೆ, ಶಾಂತಿ ಮತ್ತು ಆಧ್ಯಾತ್ಮಿಕ ಶಿಸ್ತಿನ ಶಾಶ್ವತ ತತ್ವಗಳಿಂದ ಪ್ರೇರಿತರಾದ ಜೈನ ಮುನಿಗಳು ಯಾಂತ್ರಿಕ ಸಾರಿಗೆಯನ್ನು ತ್ಯಜಿಸಿ ಕರುಣೆ, ಸಾಮರಸ್ಯ ಮತ್ತು ನೈತಿಕ ಪ್ರಜ್ಞೆಯ ಸಂದೇಶಗಳನ್ನು ಪ್ರಚಾರ ಮಾಡಲು ದೇಶಾದ್ಯಂತ ಬರಿಗಾಲಿನಲ್ಲಿ ಸಂಚಾರಿಸುತ್ತಾರೆ.

ಹುಬ್ಬಳ್ಳಿ:

ಜೈನ ಮುನಿಗಳು ಮತ್ತು ಸಾಧ್ವಿಗಳಿಗೆ ಸಂಚಾರದ ವೇಳೆ ಸೂಕ್ತ ರಕ್ಷಣೆ, ಪ್ರತ್ಯೇಕ ಪಾದಚಾರಿ ಕಾರಿಡಾರ್ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸಕಲ ಜೈನ ಸಮಾಜ ಬಾಂಧವರು ಬುಧವಾರ ಕೈಗೆ ಕಪ್ಪುಪಟ್ಟಿ ಕಟ್ಟಿಕೊಂಡು ನಗರದಲ್ಲಿ ಬೃಹತ್‌ ಮೌನ ಪ್ರತಿಭಟನೆ ನಡೆಸಿದರು.

ಆಚಾರ್ಯ ಭಗವಂತ ಶ್ರೀಚಂದ್ರಭೂಷಣ ಸುರೀಶ್ವರ ಮಹಾರಾಜರ ನೇತೃತ್ವದಲ್ಲಿ ನಗರದ ಕಂಚಗಾರ ಗಲ್ಲಿಯ ಶ್ರೀಶಾಂತಿನಾಥ ಜೈನ ದೇವಸ್ಥಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಶಂಕರಮಠ, ದುರ್ಗದ ಬೈಲ್, ಬ್ರಾಡ್‌ವೇ, ಕೊಪ್ಪಿಕರ್ ರಸ್ತೆ ಮಾರ್ಗವಾಗಿ ತಹಸೀಲ್ದಾರ್ ಕಚೇರಿ ಸೇರಿ ಸಮಾರೋಪಗೊಂಡಿತು. ಬಳಿಕ ತಹಸೀಲ್ದಾರ್ ಹಾಗೂ ಶಾಸಕ ಮಹೇಶ ಟೆಂಗಿನಕಾಯಿ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಆಚಾರ್ಯ ಭಗವಂತ ಶ್ರೀ ಚಂದ್ರಭೂಷಣ ಸುರೀಶ್ವರ ಮಹಾರಾಜ್, ಅಹಿಂಸೆ, ಶಾಂತಿ ಮತ್ತು ಆಧ್ಯಾತ್ಮಿಕ ಶಿಸ್ತಿನ ಶಾಶ್ವತ ತತ್ವಗಳಿಂದ ಪ್ರೇರಿತರಾದ ಜೈನ ಮುನಿಗಳು ಯಾಂತ್ರಿಕ ಸಾರಿಗೆಯನ್ನು ತ್ಯಜಿಸಿ ಕರುಣೆ, ಸಾಮರಸ್ಯ ಮತ್ತು ನೈತಿಕ ಪ್ರಜ್ಞೆಯ ಸಂದೇಶಗಳನ್ನು ಪ್ರಚಾರ ಮಾಡಲು ದೇಶಾದ್ಯಂತ ಬರಿಗಾಲಿನಲ್ಲಿ ಸಂಚಾರಿಸುತ್ತಾರೆ. ಅವರ ಪಾದಯಾತ್ರೆಯು ಕೇವಲ ಒಂದು ಸ್ಥಳದಿಂದ ಮತ್ತೊಂದು ಸ್ಥಳದ ಪ್ರಯಾಣವಲ್ಲ, ಬದಲಿಗೆ ಅದು ಭಾರತದ ಸಾಂಸ್ಕೃತಿಕ ಪರಂಪರೆ. ಹೀಗಾಗಿ ಜೈನ ಮುನಿಗಳು ಹಾಗೂ ಸಾಧ್ವಿಗಳು ಸಂಚರಿಸುವಾಗ ಅನೇಕ ಅಪಘಾತಗಳಾಗಿವೆ. ಇದನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರಗಳು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಹೆದ್ದಾರಿಯ ಆಯಕಟ್ಟಿನ ಸ್ಥಳಗಳಲ್ಲಿ ಪಾದಚಾರಿ, ಸನ್ಯಾಸಿಗಳ ದಾಟುವಿಕೆ ವಲಯ ಎಂದು ಸೂಚಿಸುವ ಎಚ್ಚರಿಕೆ ಫಲಕ ಅಳವಡಿಸಬೇಕು. ಸಂಚಾರದ ಸಮಯದಲ್ಲಿ ಈ ಹಿಂದೆ ನಡೆದ ಜೈನ ಸನ್ಯಾಸಿಗಳ ಮತ್ತು ಸಾಧ್ವಿಗಳ ಸಾವಿನ ಬಗ್ಗೆ ಪಾರದರ್ಶಕ ತನಿಖೆ ನಡೆಸಬೇಕು. ಜೈನ ಸನ್ಯಾಸಿಗಳು ಕಾಲ್ನಡಿಗೆ ಪ್ರಯಾಣ ಹೆಚ್ಚಾಗಿ ಕೈಗೊಳ್ಳುವ ಬೆಳಗ್ಗೆ ಮತ್ತು ಸಂಜೆಯ ಅವಧಿಯಲ್ಲಿ ವಿಶೇಷ ಹೆದ್ದಾರಿ ಗಸ್ತು ಮತ್ತು ಮೇಲ್ವಿಚಾರಣಾ ವ್ಯವಸ್ಥೆ ಕೈಗೊಳ್ಳುವಂತೆ ಮನವಿ ಮಾಡಿದರು.

ಸಮಾಜದ ಮುಖಂಡರಾದ ಶಾಂತಿನಾಥ ಹೋತಪೇಟೆ, ಜಯಂತಿಲಾಲ್‌ ಪರಮಾರ್, ಓಕಚಂದ್ ಜೈನ್, ಅಮೃತ ಜೈನ್, ರಾಜೇಂದ್ರ ಬೀಳಗಿ, ಇಂದ್ರಮಲ್ ಜೈನ್, ಮಹೇಂದ್ರ ಸಿಂಘಿ, ವಿಮಲ್ ತಾಳಿಕೋಟಿ, ಒಂಪ್ರಕಾಶ ಛೋಪ್ರಾ, ಕಾಂತಿಲಾಲ್ ಜೈನ್, ಶಾಂತಿಲಾಲ್ ಜೈನ್, ಭವರಲಾಲ್‌ ಜೈನ್, ರಿಕಬ್ ಚಂದ, ಶೈಲೇಶ್‌ ಜೈನ್, ನೀಲೇಶ್‌ ಜೈನ್, ಸುಭಾಷ ಡಂಕ್ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಖಂಡ ಧಾರವಾಡ ಜಿಲ್ಲೆಗೆ ಸಿಗದ ಸಚಿವಗಿರಿ!
ಇಂಧನ ಅಭಾವದ ವದಂತಿಗೆ ಕಿವಿಗೊಡದಿರಿ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ