ನಿರ್ಜೀವ ವಸ್ತುಗಳಲ್ಲೂ ಜೀವ ಕಂಡದ್ದು ಜೈನ ಧರ್ಮ: ಸುತ್ತೂರು ಶ್ರೀ

KannadaprabhaNewsNetwork |  
Published : Nov 02, 2025, 02:45 AM IST
ನಿರ್ಜೀವ ವಸ್ತುಗಳಲ್ಲೂ ಜೀವವನ್ನು ಕಂಡ ಧರ್ಮ ಜೈನ ಧರ್ಮ-ಸುತ್ತೂರು ಶ್ರೀ | Kannada Prabha

ಸಾರಾಂಶ

೧೨ನೇ ಶತಮಾನದಲ್ಲಿ ಬಸವಣ್ಣನವರು ಹೇಳಿದಂತೆ ದಯವೇ ಧರ್ಮದ ಮೂಲವಯ್ಯ ಎಂಬ ತತ್ವವನ್ನು ಪ್ರಾಚೀನ ಕಾಲದಲ್ಲೇ ಸಾರಿದ ಜೈನ ಧರ್ಮ, ಅಹಿಂಸಾ ಪರಮೋಧರ್ಮ ತತ್ವವನ್ನು ಅಳವಡಿಸಿಕೊಂಡು ಅದನ್ನು ನಿಯಮದಂತೆ ನಡೆಯುತ್ತಾ ಎಲ್ಲರಲ್ಲೂ ಬೆರೆಯುತ್ತಾ ಬಂದಿದ್ದಾರೆ.

ಕನ್ನಡಪ್ರಭ ವಾರ್ತೆ,ಚಾಮರಾಜನಗರ

ಸಕಲ ಜೀವ ರಾಶಿಗಳಿಗೂ ಯಾವುದೇ ರೀತಿ ತೊಂದರೆ ಕೊಡದೇ, ನಿರ್ಜೀವ ವಸ್ತುಗಳಲ್ಲೂ ಜೀವ ಕಂಡ ಧರ್ಮ ಎಂದರೆ ಅದು ಜೈನ ಧರ್ಮ ಎಂದು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಹೇಳಿದರು.

ತಾಲೂಕಿನ ಮಲೆಯೂರು ಗ್ರಾಮದಲ್ಲಿ ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್, ಪ್ರಾಚ್ಯ ವಸ್ತು ಸಂಗ್ರಹಾಲಯ, ಪರಂಪರೆ ಇಲಾಖೆ, ಧಾರ್ಮಿಕದತ್ತಿ ಇಲಾಖೆ, ಭಕ್ತಾದಿಗಳ ಸಹಕಾರದೊಂದಿಗೆ ಜೀರ್ಣೋದ್ದಾರಗೊಂಡಿರುವ ಪ್ರಾಚೀನ ಶಿಲಾಬಸದಿ ಭಗವಾನ್ ೧೦೦೮ ಆದಿನಾಥ ತೀರ್ಥಂಕರರ ಶಿಲಾ ಜಿನಬಿಂಬ ಪುನರ್ ಪ್ರತಿಷ್ಠಾಪನೆ ಹಾಗೂ ಧಾಮಸಂಪ್ರೋಕ್ಷಣೆ, ಪಂಚಕಲ್ಯಾಣ ಪೂರ್ವಕ ಎರಡನೇ ದಿನದ ಪೂಜಾಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

೧೨ನೇ ಶತಮಾನದಲ್ಲಿ ಬಸವಣ್ಣನವರು ಹೇಳಿದಂತೆ ದಯವೇ ಧರ್ಮದ ಮೂಲವಯ್ಯ ಎಂಬ ತತ್ವವನ್ನು ಪ್ರಾಚೀನ ಕಾಲದಲ್ಲೇ ಸಾರಿದ ಜೈನ ಧರ್ಮ, ಅಹಿಂಸಾ ಪರಮೋಧರ್ಮ ತತ್ವವನ್ನು ಅಳವಡಿಸಿಕೊಂಡು ಅದನ್ನು ನಿಯಮದಂತೆ ನಡೆಯುತ್ತಾ ಎಲ್ಲರಲ್ಲೂ ಬೆರೆಯುತ್ತಾ ಬಂದಿದ್ದಾರೆ ಎಂದರು.

ನಿರ್ಜೀವ ವಸ್ತುಗಳಲ್ಲೂ ಜೀವವಿದೆ. ಅದಕ್ಕೂ ಹಿಂಸೆ ನೀಡಬಾರದು ಎಂದು ಜಗತ್ತಿಗೆ ಸಾರಿದ ಜೈನ ಧರ್ಮ ೫ನೇ ಶತಮಾನದಲ್ಲಿ ಮಹಾ ತಪಸ್ವಿ ಪೂಜ್ಯ ಪಾದರಿಂದ ಸ್ಥಾಪಿತವಾದ ಕನಕಗಿರಿ ಜೈನ ಧರ್ಮದ ಪವಿತ್ರ ಕ್ಷೇತ್ರವಾಗಿ ಬೆಳೆದಿದೆ ಎಂದರು.

ಮನುಷ್ಯನಿಗೆ ಆಂತರಿಕ ಶಾಂತಿ, ನೆಮ್ಮದಿ ಕೊಡುವುದು ಧರ್ಮಾಚರಣೆ. ದೇವನೋಬ್ಬ ನಾಮ ಹಲವು ಎಂಬಂತೆ, ಒಂದೊಂದು ಧರ್ಮದಲ್ಲಿ ವಿವಿಧ ರೂಪದಲ್ಲಿ ದೇವರನ್ನು ಕಾಣುತ್ತಾರೆ. ಧರ್ಮಾಚರಣೆ ನಿಷ್ಠೆಯಿಂದ ಮಾಡಬೇಕು ಎಂದರು.

ಮನುಷ್ಯನಿಗೆ ಧರ್ಮ ಮುಖ್ಯವಲ್ಲ. ಅದನ್ನು ಹೇಗೆ ಆಚರಣೆ ಮಾಡುತ್ತಾನೆ ಎಂಬುದು ಮುಖ್ಯ. ಲೌಕಿಕ ಸಂತೋಷಗಳು ತಾತ್ಕಾಲಿಕ. ಆದರೆ ಆಧ್ಯಾತ್ಮಿಕ ಚಿಂತನೆ ನಿರಂತರ ಸಂತೋಷವನ್ನು ನೀಡುತ್ತದೆ. ಆದ್ದರಿಂದಲೇ ಯಾವ ದರ್ಮದವರೇ ಇರಲಿ. ಮೊದಲು ದೇವರನ್ನು ನೆನೆದು ಮುಂದವರಿಯುತ್ತಾರೆ ಎಂದರು.

ನೋಡುವ ದೃಷ್ಟಿ ಶುದ್ಧವಾಗಿರಬೇಕು. ಜಿನ ದೇವಾಲಯಕ್ಕೆ ಹೋಗಿ, ಶುದ್ಧ ಮನಸ್ಸಿನಿಂದ ಶಿವನನ್ನು ಕಾಣಬಹುದು. ಶಿವ ದೇವಾಲಯಕ್ಕೆ ಹೋಗಿ ಜಿನನನ್ನು ನೆನಪಿಸಿಕೊಂಡರೆ ಜಿನನನ್ನು ಕಾಣಬಹುದು. ಈ ಗುಣ ಮನಸ್ಸಿನಲ್ಲಿ ಬಂದರೆ ಮನಸ್ಸು ವಿಶಾಲವಾಗಿ ಮನುಷ್ಯತ್ವ ಬೆಳದು ಪರಸ್ಪರ ಸಹಬಾಳ್ವೆ ಹೆಚ್ಚುತ್ತದೆ. ಇದಕ್ಕೆ ಪೂರಕವಾಗಿ ಮಲೆಯೂರಿನಲ್ಲಿ ಪ್ರಾಚೀನ ಶಿಲಾಬಸದಿ ಭಗವಾನ್ ೧೦೦೮ ಆದಿನಾಥತೀರ್ಥಂಕರರ ಶಿಲಾಜಿನಬಿಂಬ ಪುನರ್ ಪ್ರತಿಷ್ಠಾಪನೆಯಾಗುತ್ತಿದೆ ಎಂದರು.

೧೦೮ ಪುಣ್ಯಸಾಗರಮುನಿ ಮಹಾರಾಜರು ಆಶೀರ್ವಚನ ನೀಡಿದರು, ಮಂಡ್ಯ ಜಿಲ್ಲೆ ಆರತಿಪುರ ಜೈನಮಠದ ಸಿದ್ದಾಂತಕೀರ್ತಿ ಭಟ್ಟಾರಕ ಸ್ವಾಮೀಜಿ, ಹರವೆ ವಿರಕ್ತ ಮಠದ ಸರ್ಪಭೂಷಣ ಸ್ವಾಮೀಜಿ, ಮಲೆಯೂರು ಕನಕಗಿರಿ ಕ್ಷೇತ್ರದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿದರು.

ರಾಷ್ಟ್ರಿಯ ಜೈನ್ ಮಿಲನ್ ಅಧ್ಯಕ್ಷ ಡಿ.ಸುರೇಂದ್ರಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಪೂಜ್ಯ ಡಾ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ರಾಜ್ಯದಲ್ಲಿ ೨೯೬ ದೇವಾಲಯ, ಬಸದಿಗಳನ್ನು ಪುನರ್ ನಿರ್ಮಾಣ ಮಾಡಿದ್ದು, ಮಲೆಯೂರಿನ ಪ್ರಾಚೀನ ಶಿಲಾಬಸದಿ ಭಗವಾನ್ ೧೦೦೮ ಆದಿನಾಥತೀರ್ಥಂಕರರ ಬಸದಿ ಎಲ್ಲರ ಸಹಕಾರದಿಂದ ೮೦ ಲಕ್ಷ ವೆಚ್ಚದಲ್ಲಿ ಭವ್ಯವಾಗಿ ಪುನರ್ ನಿರ್ಮಾಣವಾಗಿದೆ ಎಂದರು .

ಧರ್ಮಸ್ಥಳ ಧರ್ಮೊತ್ಥಾನ ಟ್ರಸ್ಟ್ ನ ನೇಮಿರಾಜ್, ಅನಿತಾ ಭಗವಾನ್ ೧೦೦೮ ಆದಿನಾಥತೀರ್ಥಂಕರ ದಿಗಂಬರ ಜೈನಸೇವಾ ಟ್ರಸ್ಟ್ ಅಧ್ಯಕ್ಷ ವಸುಪಾಲ್ ಹಾಗೂ ಪದಾಧಿಕಾರಿಗಳು, ಪಂಚಕಲ್ಯಾಣ ಮಹೋತ್ಸವ ಸಮಿತಿ ಹಾಗೂ ಮಲೆಯೂರು ಗ್ರಾಮಸ್ಥರು, ರಾಜ್ಯದ ವಿವಿಧ ಜಿಲ್ಲೆಗಳ ಜೈನ ಸಮಾಜದವರು ಇದ್ದರು

PREV

Recommended Stories

ಪಾಳು ಬಿದ್ದ ರೈತ ಸಭಾ ಭವನ ಕಟ್ಟಡ
ಕೊಂಕಣಿ ನೆಲದಲ್ಲಿ ಕನ್ನಡದಲ್ಲಿ ಸಹಿ ಸಂಗ್ರಹ, ಕದಂಬ ವೃಕ್ಷ ಪೂಜಿಸಿ ರಾಜ್ಯೋತ್ಸವ ಆಚರಣೆ