ನರೇಗಲ್ಲ: ಸಮೀಪದ ಜಕ್ಕಲಿಯ ಶ್ರೀ ಮಾರುತೇಶ್ವರ ಹೊಂಡ ತುಳುಕಿಸುವ ಕಾರ್ಯಕ್ರಮದ ಅಂಗವಾಗಿ ಹಾಗೂ ದಿ. ಪೈಲ್ವಾನ್ ಮೂಕಪ್ಪಜ್ಜ ಸಂಕನೂರ ಇವರ ೧೬ನೇ ವರ್ಷದ ಪುಣ್ಯಸ್ಮರಣೋತ್ಸವದ ನೆನಪಿಗಾಗಿ ಎರಡು ದಿನಗಳವರೆಗೆ ನಡೆದ ಪ್ರಖ್ಯಾತ ಪೈಲ್ವಾನರ ಬಯಲು ಕುಸ್ತಿ ಸ್ಪರ್ಧೆಯಲ್ಲಿ ಕೊನೆ ದಿನ ಜಕ್ಕಲಿಯ ಪೈಲ್ವಾನ್ ಬಸವರಾಜ ಹಡಪದ ಪ್ರತಿಸ್ಪರ್ಧಿ ಬೆಳಗಾವಿಯ ಹನಮಂತ ಪೈಲ್ವಾನ್‌ನನ್ನು ಚಿತ್ ಮಾಡುವ ಮೂಲಕ ವಿರುಪಾಕ್ಷಪ್ಪ ಅಜ್ಜಪ್ಪ ಪಲ್ಲೇದ ನೀಡಿದ ನಗದು ₹೭೦೦೧ ಬಹುಮಾನ ತಮ್ಮದಾಗಿಸಿಕೊಂಡರು.
ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಪ್ರಾಚಾರ್ಯ ಎಸ್.ಎಂ. ಕೋರಿ ಮಾತನಾಡಿ, ಗ್ರಾಮೀಣ ಸೊಗಡಿನ ಈ ಕ್ರೀಡೆಯನ್ನು ಉಳಿಸಿ ಬೆಳೆಸುವುದು ಇಂದು ಅಗತ್ಯವಾಗಿದೆ. ಎಲ್ಲರೂ ಕ್ರಿಕೆಟ್ ಮತ್ತಿತರ ಆಟಗಳನ್ನೇ ಆಡುತ್ತ ಹೋದರೆ ಮೈಗೆ ಕಸುವನ್ನು, ಬುದ್ಧಿಗೆ ಬಲವನ್ನು ನೀಡಿ ಸದೃಢರನ್ನಾಗಿ ಮಾಡುವ ಈ ಕುಸ್ತಿ ಕ್ರೀಡೆ ಆಡುವವರು ಯಾರು? ಆದ್ದರಿಂದ ಪಾಲಕರು ತಮ್ಮ ಮಕ್ಕಳಿಗೆ ಕುಸ್ತಿ ಕ್ರೀಡೆಯ ಕಡೆಗೆ ಗಮನ ನೀಡುವಂತೆ ಪ್ರೋತ್ಸಾಹಿಸಬೇಕೆಂದು ಅವರು ಕರೆ ನೀಡಿದರು.
ಇಂದಿನ ದಿನಗಳಲ್ಲಿ ಕುಸ್ತಿ ನಶಿಸಿ ಹೋಗುತ್ತಿದೆ. ಇದಕ್ಕಾಗಿ ಯುವಕರು ನನ್ನ ನಡಿಗೆ ಕುಸ್ತಿಯೆಡೆಗೆ ಎಂಬ ಪ್ರತಿಜ್ಞೆ ಮಾಡಿ ಕುಸ್ತಿ ಜತೆಗೆ ಗರಡಿ ಮನೆಗಳನ್ನು ಉಳಿಸುವ ಕಾರ್ಯಕ್ಕೆ ಮುಂದಾಗಬೇಕು. ಕಾಮನ್‌ವೆಲ್ತ್ ಕ್ರೀಡೆಗಳಲ್ಲಿ ಓಲಿಂಪಿಕ್ ಕ್ರೀಡೆಗಳಲ್ಲಿ ಕುಸ್ತಿಗೆ ಮಾನ್ಯತೆ ಇರುವುದನ್ನು ನೀವು ಗಮನಿಸಬೇಕು. ಈಗಾಗಲೇ ವಿಶ್ವ ಮಟ್ಟದಲ್ಲಿ ಪ್ರೊ.ಕಬಡ್ಡಿಗೆ ಸಾಕಷ್ಟು ಮನ್ನಣೆ ಸಿಕ್ಕಿದೆ. ಹಾಗೆಯೇ ಒಂದಿಲ್ಲೊಂದು ದಿನ ಪ್ರೊ ಕುಸ್ತಿ ಪಂದ್ಯಗಳೂ ಬರಬಹುದು. ಅದಕ್ಕೆ ನೀವುಗಳು ಈಗಿನಿಂದಲೇ ಸಿದ್ಧರಾಗಿ ಎಂದು ಹೇಳಿದರು.ಧಾರವಾಡದ ಅಭಿಷೇಕ ಪೈಲ್ವಾನ್, ಬೆಳಗಾವಿಯ ಪರಶುರಾಮ ಪೈಲ್ವಾನ್‌ನನ್ನು ಚಿತ್ ಮಾಡುವ ಮೂಲಕ ದ್ವಿತೀಯ ಬಹುಮಾನ ಗಳಿಸಿ. ಗಂಗವ್ವ ದ್ಯಾಮಪ್ಪ ಜಂಗಣ್ಣವರ ನೀಡಿದ ನಗದು ₹೫೦೦೧ಗಳನ್ನು ಪಡೆದುಕೊಂಡರು.
ಎರಡು ದಿನಗಳವರೆಗೆ ನಡೆದ ಸ್ಪರ್ಧೆಯಲ್ಲಿ ನೂರಕ್ಕೂ ಹೆಚ್ಚು ಕುಸ್ತಿಪಟುಗಳು ಪಾಲ್ಗೊಂಡಿದ್ದರು, ಪರ ಊರಿನ ಕುಸ್ತಿಪಟುಗಳಿಗೆ ಊಟ ಮತ್ತು ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಪ್ರೇಕ್ಷಕರು ಸಿಳ್ಳೆ, ಕೇಕೆ, ಚಪ್ಪಾಳೆ ತಟ್ಟಿ ಕುಸ್ತಿಪಟುಗಳನ್ನು ಹುರುದುಂಬಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಬೆಳಗಾವಿ, ಚಿಕ್ಕನಾಳ, ಮಿಟ್ಲಕೋಡ್, ಕಲಘಟಗಿ, ಧಾರವಾಡ, ಕರಡಿಕೊಪ್ಪ, ಹಾತಲಗೇರಿ, ಶಿರೂಳ, ಶಲವಡಿ, ಪಡಚಿಂತಿ, ರೋಣ, ಹಳ್ಯಾಳ, ಲಕ್ಕುಂಡಿ, ಬೊಮ್ಮನಹಳ್ಳಿ, ಹುಯಿಲಗೋಳ ಬಹು ದೂರದ ಊರುಗಳಿಂದ ಆಗಮಿಸಿದ್ದ ೫೦ಕ್ಕೂ ಹೆಚ್ಚು ಜೋಡಿಗಳು ರೋಮಾಂಚನಕಾರಿ ಆಟ ಪ್ರದರ್ಶಿಸಿದರು.ಬಹುಮಾನ ವಿತರಣಾ ಸಮಯದಲ್ಲಿ ಉಮೇಶ ಮೇಟಿ, ಪ್ರಕಾಶ ಕೋರಿ, ಮಲ್ಲಪ್ಪ ಪಲ್ಲೇದ, ಬಸಪ್ಪ ಕೊಪ್ಪದ, ಬಸವರಾಜ ಶ್ಯಾಶೆಟ್ಟಿ, ಭೀಮಪ್ಪ ತಳವಾರ, ಮುತ್ತಣ್ಣ ಕಮ್ಮಾರ, ಬಸವರಾಜ ಕಡಗದ, ವಿರುಪಾಕ್ಷಪ್ಪ ಪಲ್ಲೇದ, ರಾಮಣ್ಣ ಮಾಸ್ತಾರ ತಳವಾರ, ದ್ಯಾಮಣ್ಣ ಜಂಗಣ್ಣವರ, ಹನಮಪ್ಪ ಜೋಗಿ, ಲಕ್ಷ್ಮಣ ಕುಲಕರ್ಣಿ, ಕಲ್ಲಪ್ಪ ಮರಬಸಪ್ಪನವರ ಇನ್ನಿತರರು ಉಪಸ್ಥಿತರಿದ್ದರು.
ಹಿರಿಯ ಕುಸ್ತಿ ಪಟುಗಳಾದ ಸಣ್ಣದ್ಯಾಮಣ್ಣ ಮಡಿವಾಳರ, ಚನ್ನಬಸಪ್ಪ ಸೂಡಿ, ಗಾಂಧೆಪ್ಪ ಕುರಿ, ಯಲ್ಲಪ್ಪ ಮಡಿವಾಳರ ಪಂದ್ಯಗಳ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದರು. ಪ್ರಕಾಶ ವಾಲಿ ಪಂದ್ಯಗಳ ವೀಕ್ಷಕ ವಿವರಣೆ ನೀಡಿದರು.