ಕನ್ನಡಪ್ರಭ ವಾರ್ತೆ, ಔರಾದ್
ತಾಲೂಕಿನ ಕೌಡಗಾಂವ್ ಗ್ರಾಮದಲ್ಲಿ 80 ಲಕ್ಷ ರು. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾದ ಎರಡನೇಯ ಹಂತದ ಜಲ ಜೀವನ ಮಿಶನ್ ಯೋಜನೆಯ ನೀರು ಸರಬ ರಾಜು ಕಾಮಗಾರಿಗಳು ಕಾಟಾಚಾರಕ್ಕೆ ಮುಗಿಸಿ ಮಹತ್ವಕಾಂಕ್ಷಿ ಯೋಜನೆಯೊಂದು ಜನರಿಂದ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮನೆಯಂಗಳದಲ್ಲಿ ನೀರು ಕೋಡಬೇಕಾದ ಗುತ್ತಿಗೆದಾರ ಊರ ರಸ್ತೆಯಲ್ಲಿ ಒಂದೇ ಕಡೆಯಲ್ಲಿ ಸಾಮೂಹಿಕವಾಗಿ ನಳಗಳು ಸ್ಥಾಪಿಸಿ ನಾಪತ್ತೆಯಾಗಿದ್ದಾರೆ. ನಮ್ಮ ಮನೆಗೆ ನಳಸಂಪರ್ಕ ಕೊಡಿ ಎಂದ್ರೆ ಗ್ರಾಮದ ಬಡಾವಣೆಯೊಂದರಲ್ಲಿ ಸಾಮೂಹಿಕವಾಗಿ 5 ನಳಗಳು ಒಂದೇ ಕಡೆ ಸ್ಥಾಪಿಸಿದ್ದಾರೆ. ಅಲ್ಲದೆ, ಅದಕ್ಕೆ ಪೈಪ್‌ಲೈನ್ ಕನೆಕ್ಷನ್ ಕೂಡ ನೀಡಿಲ್ಲ. ಗ್ರಾಮದ ಬಹುತೇಕರ ಮನೆಗಳ ಮುಂದೆ ಇದೇ ರೀತಿ ಮಾಡಿದ್ದಾರೆ. ಇದರಿಂದ ಈ ಯೋಜನೆಯಿಂದ ನಮಗೆ ಮತ್ತೆ ಬಿಂದಿಗೆ ತೆಗೆದು ಕೊಂಡು ನೀರು ತರುವಂಥ ಸ್ಥಿತಿಯನ್ನು ಗುತ್ತಿಗೆದಾರ ನಿರ್ಮಾಣ ಮಾಡಿದ್ದಾರೆ ಎಂದು ಸ್ಥಳೀಯರಾದ ಜ್ಞಾನೇಶ್ವರ ಬಿರಾದಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಯೋಜನೆಯ ನಿರ್ವಹಣೆ ಹೊಣೆಗಾರಿಕೆ ಹೊತ್ತ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಗುತ್ತಿಗೆದಾರರ ಕಾಮಗಾರಿಯನ್ನು ಕಂಡೂ ಕಾಣದಂತೆ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ದೇಶವೇ ಜಲ ಜೀವನ ಮಶಿನ್ ಯೋಜನೆಯ ಮಹತ್ವ ಸಾರುತ್ತಿರುವಾಗ ತಾಲೂಕಿನಲ್ಲಿ ಕಾಟಾಚಾರ ಯೋಜನೆಯಾಗಿ ಎದ್ದು ಕಾಣುತ್ತಿದ್ದು, ಹಿರಿಯ ಅಧಿಕಾರಿ ಗಳು ಸಮಗ್ರ ತನಿಖೆ ನಡೆಸುವ ಅಗತ್ಯವಿದೆ ಎಂಬ ವಿಶ್ವಾಸ ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.