ನಿತ್ಯ ನಡೆದು ಶಾಲೆಗೆ ತೆರಳುವ ಜಳಕಟ್ಟಿ ವಿದ್ಯಾರ್ಥಿಗಳು

KannadaprabhaNewsNetwork | Published : Dec 24, 2023 1:45 AM

ಸಾರಾಂಶ

೨ ವರ್ಷಗಳ ಹಿಂದೆ ಇದೇ ಹೆದ್ದಾರಿಯಲ್ಲಿ ಶಿಕ್ಷಕಿ ಒಬ್ಬರನ್ನು ದರೋಡೆ ಮಾಡಲಾಗಿತ್ತು. ಜಳಕಟ್ಟಿ ಗ್ರಾಮದಿಂದ ರಾಮನಗರ, ಅನಮೊಡಗಳಿಗೆ ಪ್ರತಿ ದಿನ ೪೦ಕ್ಕೂ ಅಧಿಕ ವಿದ್ಯಾರ್ಥಿಗಳು ಸಂಚಾರ ಮಾಡುತ್ತಾರೆ.ಆದರೆ ಈ ಮಾರ್ಗದಲ್ಲಿ ಓಡಾಡುವ ಬಸ್‌ಗಳು ತಡೆ ರಹಿತ (ಎಕ್ಸಪ್ರೆಸ್) ಎಂದು ಬೋರ್ಡ್ ಹಾಕಿ ಓಡಾಡುತ್ತವೆ

ಜೊಯಿಡಾ: ನಮ್ಮ ಮಕ್ಕಳು ಕಲಿಯಬೇಕು. ನಮಗಿಲ್ಲದ ಶಿಕ್ಷಣ ಅವರಿಗಾದರೂ ಸಿಗಲಿ ಎಂಬ ಹಂಬಲ ಪಾಲಕರಿಗೆ ಇರುವುದು ಸಹಜ. ಆದರೆ ಹತ್ತಿರ ಶಾಲೆಗಳಿಲ್ಲದೇ ಇಲ್ಲಿನ ಜನರ ಕನಸು ಕಮರುತ್ತಿದೆ.

ತಾಲೂಕಿನ ಜಳಕಟ್ಟಿ ಗ್ರಾಮದಲ್ಲಿ ಹಿರಿಯ ಪ್ರಾಥಮಿಕ, ಪ್ರೌಢ ಶಾಲೆಯಿಲ್ಲದೇ ಮಕ್ಕಳು ವಿದ್ಯಾರ್ಜನೆ ಮಾಡಲಿ ಎನ್ನುವ ಪಾಲಕರ ಕನಸು ಕನಸಾಗಿಯೇ ಉಳಿದಿದೆ. ವಿದ್ಯಾರ್ಥಿಗಳ ಉನ್ನತ ವ್ಯಾಸಂಗದ ಗುರಿ ತಲುಪಲು ಸಾಧ್ಯವಾಗುತ್ತಿಲ್ಲ. ಮಳೆ, ಚಳಿ, ಬಿಸಿಲನ್ನು ಲೆಕ್ಕಿಸದೇ ಪ್ರತಿ ದಿನ ೪ ರಿಂದ ೮ ಕಿಮಿ ನಡೆದರೆ ಮಾತ್ರ ಶಾಲೆ ತಲುಪಬಹುದಾಗಿದೆ. ರಾಮನಗರ-ಅನಮೊಡ-ಗೋವಾ ಮಾರ್ಗದಲ್ಲಿ ಜಳಕಟ್ಟಿ ಗ್ರಾಮವಿದೆ. ಇಲ್ಲಿ ೧ ರಿಂದ ೪ ನೇ ತರಗತಿಯವರೆಗಿನ ಕಿರಿಯ ಪ್ರಾಥಮಿಕ ಶಾಲೆಯಿದ್ದು, ೫ನೇ ತರಗತಿಯಿಂದ ಮುಂದಿನ ವ್ಯಾಸಂಗಕ್ಕೆ ೪ ಕಿಮೀ ದೂರದ ಅನಮೊಡ ಅಥವಾ ೨೦ಕಿಮೀ ದೂರದ ರಾಮನಗರಕ್ಕೆ ಹೋಗಬೇಕಾದ ಅನಿವಾರ್ಯತೆಯಿದೆ.

ಗೋವಾ ಜೊಯಿಡಾ ಹೆದ್ದಾರಿಯಲ್ಲಿ ಸಾಕಷ್ಟು ವಾಹನಗಳು ಓಡಾಡುತ್ತಿದ್ದರೂ ಮಕ್ಕಳಿಗೆ ಪ್ರಯೋಜನಕ್ಕೆ ಬಾರದಾಗಿದೆ. ಕಂಡ ಕಂಡ ವಾಹನಗಳಿಗೆ ಕೈ ಮಾಡಿ ಶಾಲೆಗೆ ಬಿಡಲು ಬೇಡುವ ಸ್ಥಿತಿ ಇಲ್ಲಿನ ಮಕ್ಕಳದ್ದಾಗಿದೆ.

ಈ ಮಾರ್ಗದಲ್ಲಿ ವಿದ್ಯಾರ್ಥಿಗಳಿಗಾಗಿ ಸಾರಿಗೆ ಸಂಸ್ಥೆಯಿಂದ ಬಸ್ ಕೂಡಾ ಬಿಡುತ್ತಿಲ್ಲ. ಕೆಡಿಪಿ ಸಭೆಗಳಲ್ಲಿ ಪ್ರಸ್ತಾಪ ಬಂದರೂ ಪ್ರಯೋಜನವಾಗದಂತಾಗಿದೆ. ದಾಂಡೇಲಿ ಘಟಕ ಜೊಯಿಡಾ ತಾಲೂಕಿಗೆ ಮಲತಾಯಿ ಧೋರಣೆ ತೋರುತ್ತಿದ್ದು, ಪ್ರತಿ ದಿನ ಶಾಲೆಗಾಗಿ ಹೋಗುವ ಮಕ್ಕಳ ಗೋಳಾಟ ಹೇಳಿತೀರದಾಗಿದೆ. ತಾಲೂಕಿಗೆ ಪ್ರತ್ಯೇಕ ಸಾರಿಗೆ ಘಟಕವಿಲ್ಲ.

೨ ವರ್ಷಗಳ ಹಿಂದೆ ಇದೇ ಹೆದ್ದಾರಿಯಲ್ಲಿ ಶಿಕ್ಷಕಿ ಒಬ್ಬರನ್ನು ದರೋಡೆ ಮಾಡಲಾಗಿತ್ತು. ಜಳಕಟ್ಟಿ ಗ್ರಾಮದಿಂದ ರಾಮನಗರ, ಅನಮೊಡಗಳಿಗೆ ಪ್ರತಿ ದಿನ ೪೦ಕ್ಕೂ ಅಧಿಕ ವಿದ್ಯಾರ್ಥಿಗಳು ಸಂಚಾರ ಮಾಡುತ್ತಾರೆ.ಆದರೆ ಈ ಮಾರ್ಗದಲ್ಲಿ ಓಡಾಡುವ ಬಸ್‌ಗಳು ತಡೆ ರಹಿತ (ಎಕ್ಸಪ್ರೆಸ್) ಎಂದು ಬೋರ್ಡ್ ಹಾಕಿ ಓಡಾಡುತ್ತವೆ. ಹೀಗಾಗಿ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಬಸ್ ಏರಲು ಆಗುತ್ತಿಲ್ಲ. ಸಾರಿಗೆ ಇಲಾಖೆ ಜೊಯಿಡಾ ತಾಲೂಕಿನ ಎಲ್ಲ ಭಾಗಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್ ವ್ಯವಸ್ಥೆ ಮಾಡಿಕೊಡಬೇಕೆಂದು ನಾಗರಿಕರ ಬೇಡಿಕೆಯಾಗಿದೆ.

ವಿದ್ಯಾರ್ಥಿಗಳ ಕಷ್ಟ ನನ್ನ ಗಮನಕ್ಕಿದೆ. ಹಾಗಾಗಿ ಕಳೆದ ೧೯ರಂದು ನಡೆದ ಜಿಲ್ಲಾಧಿಕಾರಿ ಜನತಾ ದರ್ಶನದಲ್ಲಿ ಕೂಡ ಸಾರಿಗೆ ವ್ಯವಸ್ಥಾಪಕರೊಂದಿಗೆ ಚರ್ಚಿಸಿ ಅಗತ್ಯ ಕ್ರಮಕ್ಕೆ ಕೇಳಿಕೊಂಡಿದ್ದೇನೆ. ಅವರು ಕೂಡ ಕ್ರಮ ಕೈಕೊಳ್ಳುವ ಭರವಸೆ ನೀಡಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಶೀರ್ ಅಹ್ಮದ್ ಶೇಖ್ ತಿಳಿಸಿದ್ದಾರೆ.

Share this article