ಜಮೀರ್‌-ಸಿರಾಜ್ ಆಡಿಯೋ: ಕಾಂಗ್ರೆಸ್ಸಲ್ಲಿ ಹೆಚ್ಚಿದ ತಳಮಳ!

KannadaprabhaNewsNetwork |  
Published : Jun 02, 2026, 01:30 AM IST
(ಫೋಟೋಗಳು)  ಅಹಮದ್‌ ಸಿರಾಜ್‌ಸಮರ್ಥ ಶಾಮನೂರು  | Kannada Prabha

ಸಾರಾಂಶ

ಅಲ್ಪಸಂಖ್ಯಾತರ ಟಿಕೆಟ್ ವಿಚಾರ ಮುಂದಿಟ್ಟುಕೊಂಡು ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆ ಮುನ್ನ ಸಾಕಷ್ಟು ಸಮಸ್ಯೆ ಎದುರಾದರೂ ಅಜ್ಜ ಶಾಮನೂರು ಶಿವಶಂಕರಪ್ಪ ಅವರಂತೆಯೇ ಮೊಮ್ಮಗ ಸಮರ್ಥ ಎಂ.ಶಾಮನೂರು ಕ್ಷೇತ್ರ ಗೆಲ್ಲುವ ಮೂಲಕ ಇದು ಕಾಂಗ್ರೆಸ್ಸಿನ ಭದ್ರಕೋಟೆ ಅನ್ನೋದನ್ನು ರುಜುವಾತುಪಡಿಸಿದ್ದ ಬೆನ್ನಲ್ಲೇ ಮಾಜಿ ಸಚಿವ ಜಮೀರ್ ಅಹಮ್ಮದ್‌ ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡ ಮಹಮ್ಮದ್ ಸಿರಾಜ್ ಮಧ್ಯೆ ಆದ ಸಂಭಾಷಣೆ ಎನ್ನಲಾದ ಆಡಿಯೋ ಈಗ ಪಕ್ಷದಲ್ಲಿ ಬಿರುಗಾಳಿ ಎಬ್ಬಿಸಿದೆ.

- ಸತ್ಯಕ್ಕೆ ದೂರವಾದ ಸಂಗತಿಯೆಂದ ಜಮೀರ್ ಆಪ್ತ ಸಿರಾಜ್‌ । ಕಾನೂನು ಸಲಹೆ ಪಡೆದು ಮುಂದಿನ ಹೋರಾಟ- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಅಲ್ಪಸಂಖ್ಯಾತರ ಟಿಕೆಟ್ ವಿಚಾರ ಮುಂದಿಟ್ಟುಕೊಂಡು ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆ ಮುನ್ನ ಸಾಕಷ್ಟು ಸಮಸ್ಯೆ ಎದುರಾದರೂ ಅಜ್ಜ ಶಾಮನೂರು ಶಿವಶಂಕರಪ್ಪ ಅವರಂತೆಯೇ ಮೊಮ್ಮಗ ಸಮರ್ಥ ಎಂ.ಶಾಮನೂರು ಕ್ಷೇತ್ರ ಗೆಲ್ಲುವ ಮೂಲಕ ಇದು ಕಾಂಗ್ರೆಸ್ಸಿನ ಭದ್ರಕೋಟೆ ಅನ್ನೋದನ್ನು ರುಜುವಾತುಪಡಿಸಿದ್ದ ಬೆನ್ನಲ್ಲೇ ಮಾಜಿ ಸಚಿವ ಜಮೀರ್ ಅಹಮ್ಮದ್‌ ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡ ಮಹಮ್ಮದ್ ಸಿರಾಜ್ ಮಧ್ಯೆ ಆದ ಸಂಭಾಷಣೆ ಎನ್ನಲಾದ ಆಡಿಯೋ ಈಗ ಪಕ್ಷದಲ್ಲಿ ಬಿರುಗಾಳಿ ಎಬ್ಬಿಸಿದೆ.

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆ ವೇಳೆಯದ್ದು ಎನ್ನಲಾದ ಆಗಿನ ಸಚಿವ ಜಮೀರ್ ಅಹಮ್ಮದ್ ಹಾಗೂ ಎಂಎಲ್ಸಿ ಕೆ.ಅಬ್ದುಲ್ ಜಬ್ಬಾರ್ ಕಟ್ಟಾ ಬೆಂಬಲಿಗನಾದ ಮಹಮ್ಮದ್ ಸಿರಾಜ್ ಮಧ್ಯೆ ಆದ ಕೆಲವಾರು ನಿಮಿಷಗಳ ಆಡಿಯೋ ಈಗ ವೈರಲ್ ಆಗಿದ್ದಲ್ಲದೇ, ಕಾಂಗ್ರೆಸ್ ಪಕ್ಷನಿಷ್ಠರು, ಶಾಮನೂರು ಮಲ್ಲಿಕಾರ್ಜುನ ಪರ ನಿಷ್ಠರ ಅಲ್ಪಸಂಖ್ಯಾತ ಮುಖಂಡರು, ವಿವಿಧ ಸಮುದಾಯಗಳ ಮುಖಂಡರಿಗೆ ಸಾಕ್ಷ್ಯದ ಅಸ್ತ್ರವೇ ಸಿಕ್ಕಂತಾಗಿದ್ದು, ಇದೇ ಆಡಿಯೋ ಸಂಭಾಷಣೆ ಮುಂದಿಟ್ಟುಕೊಂಡು ಜಮೀರ್ ವಿರುದ್ಧ ಕ್ರಮಕ್ಕೆ ಕೂಗೆಬ್ಬಿಸಿದ್ದಾರೆ.

- - -

* ಕಾನೂನು ಹೋರಾಟ ಮಾಡುವೆ: ಮಹಮ್ಮದ್ ಸಿರಾಜ್‌ ವೈರಲ್ ಆದ ಆಡಿಯೋ ಕುರಿತಂತೆ ಮಾಜಿ ಸಚಿವ ಜಮೀರ್ ಅಹಮ್ಮದ್ ಹಾಗೂ ಎಂಎಲ್‌ಸಿ ಕೆ.ಅಬ್ದುಲ್ ಜಬ್ಬಾರ್ ಆಪ್ತರಾದ ಮಹಮ್ಮದ್ ಸಿರಾಜ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಜಮೀರ್ ಅಹಮ್ಮದ್ ಹಾಗೂ ತಾವು ಮಾತನಾಡಿದ್ದು ಎನ್ನಲಾದ ಆಡಿಯೋ ಸತ್ಯಕ್ಕೆ ದೂರವಾದ ಸಂಗತಿಯಾಗಿದೆ. ಒಂದು ವೇಳೆ ಆ ಸಂಭಾಷಣೆ ಆಡಿಯೋ ಇದ್ದಿದ್ದರೆ ಚುನಾವಣೆಯ ವೇಳೆಯೇ ಬಿಡುಗಡೆ ಮಾಡಬೇಕಿತ್ತು. ಆದರೆ, ಈಗ ಜಮೀರ್‌ ವಿರುದ್ಧ ಕೆಲವರು ಷಡ್ಯಂತ್ರ ಮಾಡುತ್ತಿದ್ದಾರೆ. ಕಾನೂನು ಸಲಹೆ ಪಡೆದು, ಈ ಬಗ್ಗೆ ಮುಂದಿನ ಹೋರಾಟವನ್ನು ಮಾಡುತ್ತೇನೆ ಎಂದು ಹೇಳಿದ್ದಾರೆ.

ಒಂದು ವೇಳೆ ನಾನು, ಜಮೀರ್ ಅಹಮ್ಮದ್‌ ಮಾತನಾಡಿದ್ದಿದ್ದರೆ ಒಂದು ಜಮೀರ್‌ರ ಮೊಬೈಲ್‌ನಿಂದ ಆ ಆಡಿಯೋ ವೈರಲ್ ಆಗಬೇಕಾಗಿತ್ತು. ಇಲ್ಲವೇ, ನನ್ನ ಮೊಬೈಲಿಂದ ಅದೆಲ್ಲಾ ವೈರಲ್ ಆಗಬೇಕು. ಆ ಆಡಿಯೋದಲ್ಲಿ ಮಾತನಾಡಿದ್ದು ನಾನಲ್ಲ. ಒಂದುವೇಳೆ ಅದು ನಮ್ಮಿಬ್ಬರ ಸಂಭಾಷಣೆಯೇ ಆಗಿದ್ದರೆ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆ ವೇಳೆಯಲ್ಲಿಯೇ ಬಿಡುಗಡೆ ಮಾಡಬೇಕಿತ್ತು. ಈಗ ನೂತನ ಸಂಪುಟ ಅಸ್ತಿತ್ವಕ್ಕೆ ಬರುತ್ತಿದೆ. ಜೂ.3ನೇ ತಾರೀಖು ನೂತನ ಮುಖ್ಯಮಂತ್ರಿ ಪ್ರಮಾಣ ವಚನವಿದೆ. ಹಾಗಾಗಿ ಜಮೀರ್ ಅಹಮ್ಮದ್ ವಿರುದ್ಧ ಯಾರೋ ಷಡ್ಯಂತ್ರ ಮಾಡಿದ್ದಾರೆ. ಷಡ್ಯಂತ್ರ ಮಾಡಿದ್ದು ಯಾರೆಂದು ಗೊತ್ತಿದ್ದರೆ ಬಹಿರಂಗವಾಗಿಯೇ ಹೇಳುತ್ತಿದ್ದೆ. ವೈರಲ್ ಆದ ಆಡಿಯೋ ಸತ್ಯಕ್ಕೆ ದೂರವಾಗಿದ್ದು, ಅದು ನಮ್ಮ ಸಂಭಾಷಣೆಯೇ ಅಲ್ಲ. ಕಾನೂನು ಸಲಹೆಯನ್ನು ಪಡೆದು, ಮುಂದಿನ ಹೋರಾಟ ಮಾಡಲಿದ್ದೇನೆ ಎಂದು ಮಹಮ್ಮದ್ ಸಿರಾಜ್ ಮಾಧ್ಯಮಗಳ ಮುಂದೆ ಸ್ಪಷ್ಟಪಡಿಸಿದರು.

- - -

* ಎಕ್ಸ್ ಖಾತೆ ತೆರೆದು, ಆಡಿಯೋ ಅಪ್ ಲೋಡ್‌

- ನಸುಕಿನ ವೇಳೆ ಕನ್ನಡ ಕಾಕ್ರೋಚ್ ಹೆಸರಿನ ಖಾತೆ ತೆರೆದಿದ್ದಾರೆ: ಸಿರಾಜ್‌ ಕನ್ನಡಪ್ರಭ ವಾರ್ತೆ ದಾವಣಗೆರೆ

ಜಮೀರ್ ಅಹಮ್ಮದ್ ಹಾಗೂ ಆಪ್ತ ಮಹಮ್ಮದ್ ಸಿರಾಜ್ ಮಧ್ಯೆ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆ ವೇಳೆ ನಡೆದಿದ್ದು ಎನ್ನಲಾದ ಆಡಿಯೋ ವೈರಲ್ ಆದ ಬೆನ್ನಲ್ಲೇ ಕನ್ನಡ ಕಾಕ್ರೋಚ್ ಹೆಸರಿನಲ್ಲಿ ಸೋಮವಾರ ನಸುಕಿನ ವೇಳೆ ಎಕ್ಸ್ ಖಾತೆ ತೆರೆದು, ಅದೇ ಖಾತೆ ಮೂಲಕ ನಸುಕಿನ 3.50ಕ್ಕೆ ಆಡಿಯೋ ಅಪ್ ಲೋಡ್ ಮಾಡಲಾಗಿದೆ.

ಕಾಂಗ್ರೆಸ್ ಹೈಕಮಾಂಡ್ ಜಮೀರ್ ಅಹಮ್ಮದ್ ವಿರುದ್ಧ ಕ್ರಮ ಕೈಗೊಳ್ಳುತ್ತದಾ ಎಂಬ ತಲೆ ಬರಹದಡಿ ಆಡಿಯೋ ಅಪ್‌ಲೋಡ್ ಮಾಡಲಾಗಿದೆ. ಎಡಿಟ್ ಮಾಡಿ, ಆಡಿಯೋ ಅಪ್‌ ಲೋಡ್ ಮಾಡಿದ್ದಾರೆ ಎಂದು ಜಮೀರ್ ಅಹಮ್ಮದ್ ಆಪ್ತ ಮಹಮ್ಮದ್ ಸಿರಾಜ್ ಸುದ್ದಿಗಾರರಿಗೆ ತಿಳಿಸಿದರು.

ವೈರಲ್ ಆಡಿಯೋ ಅಪ್‌ಲೋಡ್ ಮಾಡಿದವರ ವಿರುದ್ಧ ದೂರು ನೀಡಲು ಚಿಂತನೆ ನಡೆಸಿದ್ದು, ಕಾನೂನು ಸಲಹೆ ಪಡೆದು, ಮುಂದಿನ ನಿರ್ಧಾರ ಕೈಗೊಳ್ಳಲಿದ್ದೇನೆ. ಇನ್ನು 2 ದಿನ (ಜೂ.3)ದಲ್ಲೇ ನೂತನ ಮುಖ್ಯಮಂತ್ರಿಗಳು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಜಮೀರ್ ಅಹಮ್ಮದ್‌ ಹೆಸರು ಡಿಸಿಎಂ ಹುದ್ದೆಗಾಗಿ ಪೈಪೋಟಿಯಲ್ಲಿದೆ. ಹಾಗಾಗಿಯೇ ನಮ್ಮ ಪಕ್ಷದವರೇ, ನಮ್ಮ ಸ್ನೇಹಿತರೇ ಆಡಿಯೋ ವೈರಲ್ ಮಾಡಿದ್ದಾರೆ ಎಂದು ಆರೋಪಿಸಿದರು.

ಯಾರೇ ಷಡ್ಯಂತ್ರ ಮಾಡಿದ್ದರೂ ಸಹ ಜೂ.3ರಂದು ಜಮೀರ್ ಅಹಮ್ಮದ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಷಡ್ಯಂತ್ರ ಮಾಡಿದವರನ್ನು ದೇವರು ನೋಡಿಕೊಳ್ಳುತ್ತಾನೆ ಎಂದು ಮಹಮ್ಮದ್ ಸಿರಾಜ್ ಹೇಳಿದರು.

- - -

(ಬಾಕ್ಸ್‌) * ಚುನಾವಣೆ ವೇಳೆಯೇ ಷಡ್ಯಂತ್ರ ಎಂಬುದು ಓಪನ್ ಸೀಕ್ರೆಟ್ ಆಗಿತ್ತು

- ಸತ್ಯ ಯಾವ ರೀತಿ ಷಡ್ಯಂತ್ರವಾಗುತ್ತದೆ?, ಆಡಿಯೋ ಸತ್ಯಾಸತ್ಯತೆ ತನಿಖೆಗೆ ಸಮರ್ಥ ಒತ್ತಾಯ ಕನ್ನಡಪ್ರಭ ವಾರ್ತೆ ದಾವಣಗೆರೆ ಚುನಾವಣೆ ವೇಳೆಯೇ ಇದೆಲ್ಲವೂ ಓಪನ್ ಸೀಕ್ರೆಟ್ ಆಗಿತ್ತು. ಸತ್ಯ ಯಾವ ರೀತಿ ಷಡ್ಯಂತ್ರವಾಗುತ್ತದೆ ಎಂದು ದಾವಣಗೆರೆ ದಕ್ಷಿಣದ ಶಾಸಕ ಸಮರ್ಥ ಎಂ.ಶಾಮನೂರು ಮಾಜಿ ಸಚಿವ ಜಮೀರ್ ಅಹಮ್ಮದ್‌ ಷಡ್ಯಂತ್ರ ನಡೆದಿದೆಯೆಂಬ ಜಮೀರ್‌ ಆಪ್ತ ಮಹಮ್ಮದ್‌ ಸಿರಾಜ್‌ ಆರೋಪಕ್ಕೆ ತಣ್ಣನೆಯ ಪ್ರತಿಕ್ರಿಯೆ ನೀಡಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸತ್ಯವಾಗಿರುವುದು ಯಾವ ರೀತಿ ಷಡ್ಯಂತ್ರವಾಗುತ್ತದೆ? ಪ್ರತಿ ಚುನಾವಣೆಯಲ್ಲಿ ಎಲ್ಲ ಪಕ್ಷಗಳಲ್ಲಿಯೂ ಎ ಟೀಂ, ಬಿ ಟೀಂ ಅಂತಾ ಇದ್ದೇ ಇರುತ್ತದೆ. ಒಮ್ಮೆ ಅಭ್ಯರ್ಥಿ ಘೋಷಣೆಯಾದ ನಂತರ ಎಲ್ಲರೂ ಒಗ್ಗೂಡಿ ಅಭ್ಯರ್ಥಿ ಪರ ಕೆಲಸ ಮಾಡುತ್ತಾರೆ ಎಂದರು. ವೈರಲ್ ಆಡಿಯೋ ಕ್ಲಿಪ್‌ನಲ್ಲಿ ದಾವಣಗೆರೆ ದಕ್ಷಿಣದ ಬಿಜೆಪಿ ಅಭ್ಯರ್ಥಿ ಹೆಸರನ್ನು ಹೇಳಿ ಮಾತನಾಡಿದ್ದಾರೆ. ನಮಗೆ ಚುನಾವಣೆ ಆರಂಭದಿಂದಲೂ ಷಡ್ಯಂತ್ರ ನಡೆಯುತ್ತಿದೆಯೆಂಬುದು ಸ್ಪಷ್ಟವಾಗಿತ್ತು. ಎಸ್‌ಡಿಪಿಐ, ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳನ್ನು ಸಮರ್ಥ ಶಾಮನೂರು ಒಗ್ಗೂಡುವಂತೆ ಮಾಡಿದನಾ? ಎಲ್ಲರೂ ಒಗ್ಗೂಡಿಯೇ ಬರಬೇಕಿತ್ತಲ್ಲವೇ ಎಂದು ಅವರು ಪ್ರಶ್ನಿಸಿದರು.

ಷಡ್ಯಂತ್ರದಿಂದಲೇ ಇಂತಹವರು ಗೆಲ್ಲುವುದಕ್ಕೆ ಸಾಧ್ಯ. ವೈರಲ್ ಆಗಿರುವ ಜಮೀರ್ ಅಹಮ್ಮದ್‌-ಮಹಮ್ಮದ್ ಸಿರಾಜ್‌ರ ಆಡಿಯೋ ಸತ್ಯಾಸತ್ಯತೆ ಬಗ್ಗೆ ತನಿಖೆಯಾಗಲಿ. ಆಡಿಯೋದ ಬಗ್ಗೆ ವೆರಿಫೈ ಮಾಡಲಿ. ವಿಧಿವಿಜ್ಞಾನ ಪ್ರಯೋಗಾಲದಲ್ಲೂ ತನಿಖೆಯಾಗಲಿ. ತನಿಖೆ ಮಾಡಿದ ನಂತರವೇ ಹೈಕಮಾಂಡ್ ಸೂಕ್ತ ಕ್ರಮ ಕೈಗೊಳ್ಳಲಿ. ಇಂತಹ ವಿಚಾರದಲ್ಲಿ ನಮ್ಮ ಹೈಕಮಾಂಡ್ ಸೂಕ್ತ ನಿರ್ಧಾರವನ್ನು ಕೈಗೊಳ್ಳುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜಕೀಯಕ್ಕೆ ನಾನು ಹೊಸಬನೇ ಇರಬಹುದು. ಆದರೆ, ಹೀಗೆಲ್ಲಾ ಷಡ್ಯಂತ್ರ ಮಾಡುವುದನ್ನು ಬಿಡಿ. ಆರಂಭದಲ್ಲೇ ಹೀಗೆಲ್ಲಾ ಮಾಡಿದರೆ ಯಾರಿಗೇ ಆದರೂ ಡಿಸ್‌ಕರೇಜಿಂಗ್ ಆಗುತ್ತದೆ. ಏನೇ ಮಾಡಿದರೂ ನಮ್ಮ ಊರಿನ ತಾಯಿ ದುಗ್ಗಮ್ಮನೇ ನೋಡಿಕೊಂಡಳು ಎಂದು ಸಮರ್ಥ ಶಾಮನೂರು ಪ್ರತಿಕ್ರಿಯಿಸಿದರು.

- - -

* ಸಚಿವ ಸ್ಥಾನ ಸಿಕ್ಕರೆ ನಾನು ಹಿಂದೆ ಸರಿಯಲ್ಲ: ಸಮರ್ಥ - ಇನ್ನೂ ಹೆಚ್ಚು ಕೆಲಸ ಮಾಡಲು ಶಕ್ತಿ ಸಿಕ್ಕಂತಾಗುತ್ತದೆ ದಾವಣಗೆರೆ: ರಾಜ್ಯದಲ್ಲಿ ನೂತನ ಕ್ಯಾಬಿನೆಟ್‌ ರಚನೆ ವೇಳೆ ನನಗೆ ಸಚಿವ ಸ್ಥಾನ ಸಿಕ್ಕರೆ ನಾನು ಹಿಂದೆ ಸರಿಯುವುದಿಲ್ಲ ಎಂದು ದಾವಣಗೆರೆ ದಕ್ಷಿಣದ ನೂತನ ಶಾಸಕ, ಶಾಮನೂರು ಶಿವಶಂಕರಪ್ಪ ಮೊಮ್ಮಗ ಸಮರ್ಥ ಎಂ.ಶಾಮನೂರು ಹೇಳಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ಸಿಕ್ಕರೆ ಸರ್ಕಾರದಿಂದ ಇನ್ನೂ ಹೆಚ್ಚಿನ ಅನುದಾನವನ್ನು ತಂದು ಕೆಲಸ ಮಾಡುವುದಕ್ಕೆ ಅನುಕೂಲ ಆಗುತ್ತದೆ. ಮೊದಲ ಸಲ ಶಾಸಕರಾಗಿ ಆಯ್ಕೆಯಾದವರಿಗೆ ಸಚಿವ ಸ್ಥಾನ ನೀಡಲೆಂಬ ಕೂಗು ಇದೆ. ಸಚಿವ ಸ್ಥಾನವನ್ನು ಕೊಡುವುದು, ಬಿಡುವುದು ಕಾಂಗ್ರೆಸ್ ಹೈಕಮಾಂಡ್‌, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ ಅವರಿಗೆ ಬಿಟ್ಟಿದ್ದು. ನನಗೆ ಸಚಿವ ಸ್ಥಾನವನ್ನು ಕೊಟ್ಟರೆ ನಾನು ಹಿಂದೆ ಸರಿಯಲ್ಲ. ಸಚಿವನಾಗಿ ಕೆಲಸ ಮಾಡಲು ಮತ್ತಷ್ಟು ಸಹಕಾರಿಯಾಗುತ್ತದೆ. ಸಚಿವ ಸ್ಥಾನ ಕೊಟ್ಟರೆ ಚನ್ನಾಗಿಲ್ಲ ಅಂತಾ ಯಾರು ಹೇಳ್ತಾರೆ ಹೇಳಿ ಎಂದು ಮಾಧ್ಯಮಗಳಿಗೆ ಸಮರ್ಥ ಮರುಪ್ರಶ್ನಿಸಿದರು.

- - -

(ಫೋಟೋಗಳು.)

-1ಕೆಡಿವಿಜಿ4, 5: ಅಹಮ್ಮದ್ ಸಿರಾಜ್‌

-ಸಮರ್ಥ.ಜೆಪಿಜಿ: ಸಮರ್ಥ ಶಾಮನೂರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಟ್ಟುಹಬ್ಬಗಳು ಸಾರ್ವಜನಿಕರಿಂದ ಆಚರಣೆಗೊಂಡಾಗ ಸಾರ್ಥಕತೆ
ಸರ್ಕಾರಿ ಶಾಲೆಯಲ್ಲೂ ಎಲ್‌ಕೆಜಿ ಆರಂಭ: ಮಂಜುಳಾ