- ಚಾಮರಾಜನಗರ ಹಿರಿಯ ಶಾಸಕಗೆ ಸಂಪುಟದಲ್ಲಿ ಅವಕಾಶ ಕೊಡಲಿ: ಎಂ.ಸಿ.ರಮೇಶ ಹದಡಿ, ನಲ್ಕುಂದ ಹಾಲೇಶ - - -
ಹಳೇ ಮೈಸೂರು ಭಾಗದ ಚಾಮರಾಜನಗರದ ಹಿರಿಯ ಶಾಸಕ, ಮಾಜಿ ಸಚಿವ ಸಿ.ಪುಟ್ಟರಂಗ ಶೆಟ್ಟಿ ಅವರಿಗೆ ಸಚಿವ ಸ್ಥಾನ ಹಾಗೂ ಉಪ್ಪಾರ ಸಮುದಾಯಕ್ಕೆ ಕನಿಷ್ಠ 3-4 ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನಗಳನ್ನು ನೀಡುವಂತೆ ಜಿಲ್ಲಾ ಭಗೀರಥ ಉಪ್ಪಾರ ಸಂಘವು ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ಗೆ ಒತ್ತಾಯಿಸಿದೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಎಂ.ಸಿ.ರಮೇಶ ಹದಡಿ, ಕಾರ್ಯಾಧ್ಯಕ್ಷ ನಲ್ಕುಂದ ಎಚ್.ಎಸ್. ಹಾಲೇಶ, ರಾಜ್ಯದಲ್ಲಿ ಸುಮಾರು 25-30 ಲಕ್ಷ ಜನಸಂಖ್ಯೆ ಹೊಂದಿರುವ ಉಪ್ಪಾರ ಸಮಾಜದ ಏಕೈಕ ಶಾಸಕ, ಸಮಾಜದ ಹಿರಿಯ ನಾಯಕ ಸಿ.ಪುಟ್ಟರಂಗಶೆಟ್ಟಿಗೆ ನೂತನ ಸಿಎಂ ಆಗಲಿರುವ ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು ಎಂದರು.ಚಾಮರಾಜನಗರ ಕ್ಷೇತ್ರದಿಂದ 4 ಬಾರಿ ಶಾಸಕ, ಒಮ್ಮೆ ಸಚಿವ, ಉಪ್ಪಾರ ಸಮಾಜದ ರಾಜ್ಯಾಧ್ಯಕ್ಷರಾಗಿ ಸಿ.ಪುಟ್ಟರಂಗಶೆಟ್ಟಿ ಕೆಲಸ ಮಾಡಿದ್ದಾರೆ. ಹಗಲಿರುಳು ಸಮಾಜ ಸಂಘಟನೆ, ಹೋರಾಟ ಮಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬರಲು ಶ್ರಮಿಸಿದವರು ಪುಟ್ಟರಂಗಶೆಟ್ಟಿ. ಈ ಹಿಂದೆ ಸಚಿವ ಸ್ಥಾನ ನೀಡುತ್ತೇವೆಂದು ಆಶ್ವಾಸನೆ ನೀಡಿದರೂ ಪುಟ್ಟರಂಗಶೆಟ್ಟಿ ಅವರಿಗೆ ಸಚಿವರಾಗಿ ಮಾಡಲಿಲ್ಲ. ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಪುಟ್ಟರಂಗಶೆಟ್ಟಿಗೆ ಸಚಿವ ಸ್ಥಾನ ನೀಡಬೇಕು. ಉಪ್ಪಾರ ಸಮಾಜಕ್ಕೆ ಕನಿಷ್ಠ 3-4 ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡಬೇಕು. ಈ ಮೂಲಕ ಹಿಂದುಳಿದ ವರ್ಗಗಳಲ್ಲಿ 2ನೇ ಅತೀ ದೊಡ್ಡ ಸಮಾಜವಾದ ಉಪ್ಪಾರರಿಗೆ ಗುರುತಿಸಿ, ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.
ಸಂಘದ ಪದಾಧಿಕಾರಿಗಳಾದ ಹೊಸನಾಯ್ಕನಹಳ್ಳಿ ಶಿವಮೂರ್ತಿ, ಮಾಜಿ ಉಪ ಮೇಯರ್ ಜಿ.ಮಂಜಮ್ಮ ಹನುಮಂತಪ್ಪ, ರಾಮಪ್ಪ, ರೇವಣಸಿದ್ದಪ್ಪ, ಮಾರುತಿ, ಲೋಕೇಶ ಇತರರು ಇದ್ದರು.
-1ಕೆಡಿವಿಜಿ2: