ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳು ಭಯೋತ್ಪಾದಕರನ್ನು ವಿದ್ಯಾರ್ಥಿಗಳೆಂದು ಬಿಂಬಿಸಿ, ಸಂಸತ್ ಚಲೋ ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ ಸಮಾಜಘಾತುಕ ಶಕ್ತಿಗಳಿಗೆ ಕುಮ್ಮಕ್ಕು ನೀಡುತ್ತಿವೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.
ಹಾವೇರಿ: ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳು ಭಯೋತ್ಪಾದಕರನ್ನು ವಿದ್ಯಾರ್ಥಿಗಳೆಂದು ಬಿಂಬಿಸಿ, ಸಂಸತ್ ಚಲೋ ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ ಸಮಾಜಘಾತುಕ ಶಕ್ತಿಗಳಿಗೆ ಕುಮ್ಮಕ್ಕು ನೀಡುತ್ತಿವೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿನವರಿಗೆ ನರೇಂದ್ರ ಮೋದಿಯವರನ್ನು ಎದುರಿಸುವ ಶಕ್ತಿ ಇಲ್ಲ. ಪ್ರತಿಭಟನೆ ನಡೆಸುವ ಮೂಲಕ ಪ್ರಧಾನಿ ಮೋದಿಯವರ ಮುಖಕ್ಕೆ ಮಸಿ ಬಳಿಯುವ ಪ್ರಯತ್ನ ಮಾಡಿದ್ದಾರೆ. ಆದರೆ ಈ ಪ್ರಯತ್ನವೇ ನಿಮ್ಮ ಮುಖಕ್ಕೆ ಮಸಿ ಬಳಿಯುತ್ತದೆ ಎಂದು ಹೇಳಿದರು.ಪ್ರಶ್ನೆಪತ್ರಿಕೆ ಸೋರಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಜಾರ್ಖಂಡ, ತೆಲಂಗಾಣ, ತಮಿಳುನಾಡು, ಪಶ್ಚಿಮಬಂಗಾಳ, ಕರ್ನಾಟಕ, ಕೇರಳ ಹೀಗೆ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ಆಡಳಿತದಲ್ಲಿರುವ ಎಲ್ಲಾ ರಾಜ್ಯಗಳಲ್ಲೂ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ. ಅಲ್ಲಿಯೂ ರಾಜೀನಾಮೆ ಕೊಟ್ಟಿದ್ದೀರಾ ಎಂದು ಪ್ರಶ್ನಿಸಿದರು.
ಕರ್ನಾಟಕದಲ್ಲಿ ಕೆಪಿಎಸ್‌ಸಿಯಲ್ಲಿ ನಡೆಯಬಾರದಂತಹ ಕರ್ಮಕಾಂಡ ನಡೆಯುತ್ತಿದೆ. ಅದರ ಬಗ್ಗೆ ಸಿಎಂ ಡಿ.ಕೆ. ಶಿವಕುಮಾರ ಆಗಲಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗಲಿ ಯಾರೂ ಮಾತನಾಡುತ್ತಿಲ್ಲ, ಅದನ್ನು ಬಿಟ್ಟು ವಿಶ್ವ ನಾಯಕ ನರೇಂದ್ರ ಮೋದಿಯವರ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್‌ನವರಿಗೆ ನೇರವಾಗಿ ಹೋರಾಟ ಮಾಡಲಿಕ್ಕೆ ಬರಲ್ಲ, ದೇಶದ್ರೋಹಿಗಳು, ಭಯೋತ್ಪಾದಕರಿಂದ ಕಟ್ಟಿದ `ಜಿರಳೆ ಪಕ್ಷ''''''''ವನ್ನು ಮುಂದಿಟ್ಟುಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ " ಎಂದು ಆರೋಪಿಸಿದರು.ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆ ಈಗಾಗಲೇ ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಕ್ರಿಯಿಸಿದ್ದಾರೆ. "ನಾವು ಯುವಕರ ಪರ ಇದ್ದೇವೆ. ಯುವ ಜನತೆಯ ಭವಿಷ್ಯ ಹಾಳಾಗಲು ಬಿಡುವುದಿಲ್ಲ. ನೀಟ್ ಪರೀಕ್ಷೆ ಸೋರಿಕೆಯಲ್ಲಿ ಯಾರು ಭಾಗಿಯಾಗಿದ್ದರೋ ಅವರೆಲ್ಲರನ್ನು ಅರೆಸ್ಟ್ ಮಾಡಿದ್ದೇವೆ. ಮರು ಪರೀಕ್ಷೆ ನಡೆಸುವ ಮೂಲಕ ಯಾವ ವಿದ್ಯಾರ್ಥಿಗೂ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ ಎಂದು ಹೇಳಿದರು.
ರಾಜ್ಯ ಸರಕಾರದ ಖರ್ಚಿನಲ್ಲಿ ಸಿಎಂ, ಶಾಸಕರು ಸ್ವಂತ ವಿಮಾನ ಮಾಡಿಕೊಂಡು ದೆಹಲಿಗೆ ಹೋಗಿ ಪ್ರಧಾನಿಯವರ ಮನೆ ಮುಂದೆ ಪ್ರತಿಭಟನೆ ಮಾಡುತ್ತಿದ್ದಾರೆ. ಸಂಪುಟ ವಿಸ್ತರಣೆ ನೆಪದಲ್ಲಿ ಜನಸಾಮಾನ್ಯರ ದುಡ್ಡನ್ನು ದುಂದು ವೆಚ್ಚ ಮಾಡುತ್ತಿದ್ದಾರೆ. ರಾಜ್ಯದ ಕೆಪಿಎಸ್‌ಸಿಯಲ್ಲೂ ಭ್ರಷ್ಟಾಚಾರದ ಕರ್ಮಕಾಂಡ ನಡೆದಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಕೂಡ ರಾಜೀನಾಮೆ ನೀಡಲಿ. ಸ್ವಚ್ಛ, ಪ್ರಾಮಾಣಿಕ ಆಡಳಿತ ನಡೆಸಲಿ. ರಾಜ್ಯದ ಪಶು ಇಲಾಖೆಯಲ್ಲಿ ನೌಕರಿ ಪಡೆಯಬೇಕಾದರೆ 80 ಲಕ್ಷ ರು. ಕೊಡಬೇಕಂತೆ. ಇಂತಹ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದ್ದರೂ, ಪ್ರಧಾನಿ ಮನೆಯ ಮುಂದೆ ಪ್ರತಿಭಟನೆ ನಡೆಸಲು ಹೋಗುವುದು ನಾಚಿಕೆಗೇಡಿನ ಸಂಗತಿ ಎಂದು ವಾಗ್ದಾಳಿ ನಡೆಸಿದರು.