ಹುಬ್ಬಳ್ಳಿ:
ನೇಕಾರ ನಗರದಲ್ಲಿ ಮನೆ ನಿರ್ಮಾಣಕ್ಕಾಗಿ ಪಡೆದಿರುವ ಜಾಗದಲ್ಲಿ ಅನಧಿಕೃತವಾಗಿ ಮಸೀದಿ, ಮದರಸಾ ನಿರ್ಮಿಸಿ ನಿತ್ಯ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ. ಸ್ಥಳೀಯ ನಿವಾಸಿಗಳು ಹಾಗೂ ಶ್ರೀರಾಮಸೇನೆ ಕಾರ್ಯಕರ್ತರು ಈ ಮಸೀದಿ ತೆರವಿಗೆ ಪೊಲೀಸರು ಹಾಗೂ ಪಾಲಿಕೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಈ ವರೆಗೂ ಕ್ರಮಕೈಗೊಂಡಿಲ್ಲ. ಇದನ್ನು ತಡೆಯಬೇಕಾಗಿರುವ ಪಾಲಿಕೆ ಅಧಿಕಾರಿಗಳು ನೋಡಿಯೂ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಹುಬ್ಬಳ್ಳಿ-ಧಾರವಾಡ ಮಹಾನಗರ ಸೇರಿದಂತೆ ಹಲವೆಡೆ ಅನಧಿಕೃತವಾಗಿ ಮಸೀದಿ, ಚರ್ಚ್‌ಗಳು ತಲೆ ಎತ್ತುತ್ತಿವೆ. ಇಂಥವರ ಮೇಲೆ ಕ್ರಮ ಕೈಗೊಳ್ಳಬೇಕಾಗಿದ್ದ ಪೊಲೀಸರು ಹಾಗೂ ಪಾಲಿಕೆ ಅಧಿಕಾರಿಗಳು ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ. ಈ ಮಸೀದಿಯಲ್ಲಿ ಸ್ಥಳೀಯ ಮುಸಲ್ಮಾನ್ ಬಾಂಧವರು ಪ್ರಾರ್ಥನೆ ಸಲ್ಲಿಸುವುದಿಲ್ಲ. ಬದಲಾಗಿ ಅನ್ಯ ಕಡೆಗಳಿಂದ ಪ್ರಾರ್ಥನೆಗಾಗಿ ಆಗಮಿಸುತ್ತಿರುವುದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಅಲ್ಲಿ ಪ್ರಾರ್ಥನೆ ನಡೆಯುತ್ತಿದೆಯೋ ಅಥವಾ ಬೇರೆ ಭಯೋತ್ಪಾದನಾ ಚಟುವಟಿಕೆಗಳು ನಡೆಯುತ್ತಿದೆಯೋ ಎಂಬ ಆತಂಕ ನಿರ್ಮಾಣವಾಗಿದೆ ಎಂದ ಪ್ರತಿಭಟನಾಕಾರರು, ಜ. 1ರೊಳಗೆ ಈ ಮಸೀದಿ ತೆರವುಗೊಳಿಸಬೇಕು. ಇಲ್ಲದಿದ್ದರೆ ಜ. 2ರಂದು ಹೋರಾಟ ನಡೆಸುತ್ತೇವೆಂದು ಎಚ್ಚರಿಸಿದರು.ಈ ವೇಳೆ ಪ್ರತಿಭಟನಾಕಾರರು ತಹಸೀಲ್ದಾರ್ ಮೂಲಕ ರಾಜ್ಯಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ವೇಳೆ ಸಂಘಟನೆಯ ಪ್ರಮುಖರಾದ ಶ್ರೀಧರ ಕಲಬುರ್ಗಿ, ಮಂಜು ಕಾಟ್ಕರ್, ಬಸವರಾಜ ಗೌಡರ, ವೆಂಕಟೇಶ ಕಾಟವೆ, ಮಂಜುನಾಥ ತೇರದಾಳ, ಮಹಾಂತೇಶ ಉಮ್ಮಣ್ಣವರ, ಶಿವಾನಂದ ಸತ್ತಿಗೇರಿ, ರಮೇಶ ಕದಂ ಸೇರಿದಂತೆ ಹಲವರಿದ್ದರು.