- ಶ್ರೀ ಕ್ಷೇತ್ರ ಧರ್ಮಸ್ಥಳ ಅಭಿಮಾನಿಗಳ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ । ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಪ್ರತಿಭಟನಾಕಾರರು,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಅನಾಮಿಕ ವ್ಯಕ್ತಿಯನ್ನು ಬಳಸಿಕೊಂಡು ಶ್ರೀ ಕ್ಷೇತ್ರ ಧರ್ಮಸ್ಥಳ ದೇವಾಲಯದ ಪಾವಿತ್ರ್ಯತೆಗೆ ಕಳಂಕ ತರುತ್ತಿರುವ ವ್ಯಕ್ತಿಗಳ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಚಿಕ್ಕಮಗಳೂರಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಅಭಿಮಾನಿ ಗಳ ವೇದಿಕೆ ನೇತೃತ್ವದಲ್ಲಿ ಬಿಜೆಪಿ ಹಾಗೂ ಹಿಂದುಪರ ಸಂಘಟನೆಗಳ ಸಾವಿರಾರು ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿ ಶಕ್ತಿ ಪ್ರದರ್ಶನ ಮಾಡಿದರು.
ಸಾವಿರಕ್ಕೂ ಹೆಚ್ಚು ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳದ ಭಕ್ತರು ನಗರದ ಹನುಮಂತಪ್ಪ ವೃತ್ತದಿಂದ ಆಜಾದ್ ಪಾರ್ಕ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆಸುತ್ತಿರುವವರ ವಿರುದ್ಧ ತನಿಖೆ ನಡೆಸಿ ಶಿಸ್ತು ಕ್ರಮ ಕೈಗೊಳ್ಳಬೇಕು. ಅಲ್ಲದೆ ಅವರನ್ನು ಕೂಡಲೇ ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.ಮಹೇಶ್ ಶೆಟ್ಟಿ ತಿಮರೋಡಿ, ಸಮೀರ್, ಕುಡ್ಲ ರಾಂಪೇಜ್ ಅಜೇಯ ಅಂಚನ್, ಗಿರೀಶ್ ಮಟ್ಟಣ್ಣನವರ್, ಜಯಂತ ಹಾಗೂ ಅವರ ಸಹಚರರು ಧರ್ಮಸ್ಥಳ ಕ್ಷೇತ್ರದ ಮೇಲೆ ಷಡ್ಯಂತ್ರ ನಡೆಸುತ್ತಿದ್ದು, ಅವರ ಮೇಲೆಯೇ ಮೊದಲು ತನಿಖೆ ನಡೆಸಬೇಕು. ಹಿಂದು ಧರ್ಮದ ಪುಣ್ಯ ಕ್ಷೇತ್ರದ ಮೇಲೆ ನಿರಂತರ ಸುಳ್ಳು ಆರೋಪ ಮಾಡುತ್ತಿರುವ ಇವರ ಮೇಲೆ ಕಠಿಣ ಕ್ರಮ ಜರುಗಿಸ ಬೇಕು ಎಂದು ಒತ್ತಾಯಿಸಿದರು.
ನಾಡಿನ ಪ್ರಸಿದ್ಧ ಧಾರ್ಮಿಕ ಕೇಂದ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಹೆಸರಿಗೆ ಕಳಂಕ ತರುವ ನಿಟ್ಟಿನಲ್ಲಿ ನಿರಂತರ ಸುಳ್ಳು ಆರೋಪ ಹೊರಿಸಿ, ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಡುತ್ತಿದ್ದಾರೆ. ಹೀಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ವೀಡಿಯೋ ಹರಿಬಿಡುತ್ತಿರುವವರ ವಿರುದ್ಧವೂ ಕಠಿಣ ಕ್ರಮ ಜರುಗಿಸಬೇಕು ಎಂದು ಹಕ್ಕೊತ್ತಾಯ ಮಂಡಿಸಿದರು.ಪುಣ್ಯ ಕ್ಷೇತ್ರದ ಬಗ್ಗೆ ನಿರಂತರವಾಗಿ ಸುಳ್ಳು ಸುದ್ದಿ ಹಬ್ಬಿಸುತ್ತಿರುವುದರಿಂದ ಕ್ಷೇತ್ರದ ಭಕ್ತರ ಭಾವನೆಗಳಿಗೆ ನಿರಂತರ ಧಕ್ಕೆ ಉಂಟಾಗುತ್ತಿದೆ. ಸುಳ್ಳು ಸುದ್ದಿಗಳ ಮೂಲಕ ಕೆಲವರು ಸಮಾಜ ಒಡೆಯುವ ಕೆಲಸ ಮಾಡಿ ಸಮಾಜದಲ್ಲಿ ಅಶಾಂತಿ ಉಂಟು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅನಾಮಿಕ ವ್ಯಕ್ತಿ ನೀಡಿದ ದೂರಿನ ಆಧಾರದಲ್ಲಿ ಕರ್ನಾಟಕ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿ ಅದರ ಮೂಲಕ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವುದನ್ನು ಶ್ರೀ ಕ್ಷೇತ್ರದ ಭಕ್ತರಾದ ನಾವು ಗೌರವದಿಂದ ಸ್ವಾಗತಿಸುತ್ತೇವೆ. ಆದರೆ, ಕ್ಷೇತ್ರದ ಬಗ್ಗೆ ಅಪ ಪ್ರಚಾರಗಳಿಗೆ ತೆರೆ ಬಿದ್ದು ಸತ್ಯ ಸಂಗತಿ ಹೊರ ಬರಬೇಕಾದರೆ ಷಡ್ಯಂತ್ರ ನಡೆಸುತ್ತಿರುವ ವ್ಯಕ್ತಿಗಳ ವಿರುದ್ಧ ಸಮಗ್ರ ತನಿಖೆ ನಡೆಸಿ ಅವರ ಹಿನ್ನೆಲೆ ಏನು ಎಂಬುದನ್ನು ಸಮಾಜಕ್ಕೆ ತಿಳಿಸಬೇಕು ಎಂದು ಆಗ್ರಹಿಸಿದರು.ಬಿಜೆಪಿ ಮುಖಂಡ ಸಿ.ಎಚ್.ಲೋಕೇಶ್ ಮಾತನಾಡಿ, ಕೆಲ ಸಂಘಟನೆಗಳು ಹಿಂದುಗಳ ಧಾರ್ಮಿಕ ಕ್ಷೇತ್ರಗಳನ್ನು ಟಾರ್ಗೆಟ್ ಮಾಡಿಕೊಂಡಿವೆ. ಹೇಗಾದರೂ ಮಾಡಿ ಪುಣ್ಯ ಕ್ಷೇತ್ರಗಳಿಗೆ ಮಸಿ ಬಳಿಯಬೇಕು ಎಂದು ನಿರಂತರ ಪ್ರಯತ್ನ ಮಾಡುತ್ತಿವೆ. ಈ ಹಿಂದೆ ಶನಿ ಸಿಂಗಾಪುರ ಹಾಗೂ ಶಬರಿಮಲೆ ಕ್ಷೇತ್ರಗಳ ಪಾವಿತ್ರ್ಯತೆಗೆ ಧಕ್ಕೆ ತರುವ ಕೆಲಸ ಮಾಡಿದ್ದರು. ಇದೀಗ ಧರ್ಮಸ್ಥಳವನ್ನು ಟಾರ್ಗೆಟ್ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅನ್ಯ ಧರ್ಮದ ಯುವಕನೊಬ್ಬ ಧರ್ಮಸ್ಥಳದ ಬಗ್ಗೆ ತನ್ನ ಯೂಟೂಬ್ ಚಾನಲ್‌ನಲ್ಲಿ ಇಲ್ಲಸಲ್ಲದ ಆರೋಪ ಮಾಡುತ್ತಾನೆ. ಆತ ಮೊದಲು ಜಿಹಾದಿಗಳು ಹಾಗೂ ಭಯೋತ್ಪಾದಕರು ನಡೆಸುತ್ತಿರುವ ಮಾರಣ ಹೋಮದ ಬಗ್ಗೆ ವೀಡಿಯೋ ಪ್ರಸಾರ ಮಾಡಲಿ ಆಗ ಆತನನ್ನು ಒಪ್ಪುತ್ತೇವೆ. ಇದು ಆರಂಭಿಕ ಹೋರಾಟ ಮಾತ್ರ. ಧರ್ಮಸ್ಥಳ ಕ್ಷೇತ್ರದ ಬಗ್ಗೆ ಷಡ್ಯಂತ್ರ ಇಲ್ಲಿಗೇ ನಿಲ್ಲಿಸದಿದ್ದಲ್ಲಿ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಬೇಕಾಗುತ್ತದೆ. ಆಗ ಆಗುವ ಎಲ್ಲ ರೀತಿಯ ಪರಿಣಾಮಗಳಿಗೆ ನಾವು ಜವಾಬ್ದಾರರಲ್ಲ ಎಂದು ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ಹಿಂದುಪರ ಸಂಘಟನೆಗಳ ಮುಖಂಡರಾದ ರಂಗನಾಥ್, ಶ್ಯಾಮ್ ವಿ.ಗೌಡ, ರಂಜಿತ್, ಪ್ರಮುಖರಾದ ಸೀತಾರಾಮ ಭರಣ್ಯ, ತುಡುಕೂರು ಮಂಜು, ಎಂ.ಆರ್.ದೇವರಾಜ ಶೆಟ್ಟಿ, ಜಸಂತ ಅನಿಲ್ ಕುಮಾರ್, ಸಂತೋಷ್ ಕೋಟ್ಯಾನ್, ಟಿ.ರಾಜಶೇಖರ್, ಮಧುಕುಮಾರ್ ರಾಜ್ ಅರಸ್, ರಾಜಪ್ಪ ಹಾಗೂ ಮಹಿಳೆಯರು ಪಾಲ್ಗೊಂಡಿದ್ದರು.13 ಕೆಸಿಕೆಎಂ 3ಚಿಕ್ಕಮಗಳೂರಿನ ಆಜಾದ್ ಪಾರ್ಕ್ ವೃತ್ತದಲ್ಲಿ ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಬುಧವಾರ ಧರ್ಮಸ್ಥಳ ಕ್ಷೇತ್ರದ ಮೇಲೆ ನಡೆಯುತ್ತಿರುವ ಷಡ್ಯಂತ್ರ ಖಂಡಿಸಿ ಪ್ರತಿಭಟನೆ ನಡೆಸಿದರು.