ಜನಾಕ್ರೋಶ ಯಾತ್ರೆ-2 ಇಂದಿನಿಂದ ಬೆಳಗಾವಿಯಲ್ಲಿ ಆರಂಭ: ಛಲವಾದಿ

KannadaprabhaNewsNetwork | Published : Apr 16, 2025 12:38 AM

ಸಾರಾಂಶ

ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿ, ಅಲ್ಪಸಂಖ್ಯಾತ ಓಲೈಕೆ ನೀತಿ ವಿರೋಧಿಸಿ ಬಿಜೆಪಿ ನಡೆಸುತ್ತಿರುವ ಜನಾಕ್ರೋಶ ಯಾತ್ರೆಯ 2ನೇ ಹಂತವನ್ನು ಬೆಳಗಾವಿಯಿಂದ ಬುಧವಾರ ಆರಂಭಿಸಲಾಗುವುದು ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿ, ಅಲ್ಪಸಂಖ್ಯಾತ ಓಲೈಕೆ ನೀತಿ ವಿರೋಧಿಸಿ ಬಿಜೆಪಿ ನಡೆಸುತ್ತಿರುವ ಜನಾಕ್ರೋಶ ಯಾತ್ರೆಯ 2ನೇ ಹಂತವನ್ನು ಬೆಳಗಾವಿಯಿಂದ ಬುಧವಾರ ಆರಂಭಿಸಲಾಗುವುದು ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್‌ ಸರ್ಕಾರದ ಆಡಳಿತದಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಸರ್ಕಾರ ಕೇವಲ ಗ್ಯಾರಂಟಿ ಮೂಲಕ ಐದು ವರ್ಷ ಪೂರೈಸಿದರೆ ಸಾಕು ಎಂಬ ಚಿಂತನೆಯಲ್ಲಿದೆ ಎಂದು ಆರೋಪಿಸಿದರು.

ಡಾ। ಬಿ.ಆರ್.ಅಂಬೇಡ್ಕರ್ ಸೋಲಿಗೆ ವೀರ ಸಾವರ್ಕರ್ ಕಾರಣ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಇದನ್ನು ಅವರು ಸಾಬೀತು ಮಾಡಿದರೆ ನಾನು ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಒಂದು ವೇಳೆ ಸಾಬೀತು ಮಾಡಲು ವಿಫಲವಾದರೆ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿ, ರಾಜಕೀಯ ಸನ್ಯಾಸತ್ವ ಸ್ವೀಕಾರ ಮಾಡಬೇಕು ಎಂದು ಸವಾಲು ಹಾಕಿದರು.

ಸಚಿವ ಪ್ರಿಯಾಂಕ್ ಖರ್ಗೆ ಅಂತವರ ಹೇಳಿಕೆ ಸಮರ್ಥಿಸಿ ಸಿದ್ದರಾಮಯ್ಯ ಮಾತನಾಡುವುದು ಬಹಳ ವಿಪರ್ಯಾಸದ ಸಂಗತಿ. ಇಂತಹ ಹಗುರವಾದ ಹೇಳಿಕೆಗಳನ್ನು ಸಿದ್ದರಾಮಯ್ಯ ಕೊಡಬಾರದಿತ್ತು, ಇದು ಅವರ ವ್ಯಕ್ತಿತ್ವಕ್ಕೆ ಗೌರವ ತರುವುದಿಲ್ಲ, ಸಿದ್ದರಾಮಯ್ಯ ನಾವು ಹಾಕಿದ ಸವಾಲನ್ನು ಸ್ವೀಕಾರ ಮಾಡಬೇಕು ಎಂದು ಆಗ್ರಹಿಸಿದರು.

ಸಿದ್ದರಾಮಯ್ಯ ಅವರು ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ಮೂರ್ತಿಯನ್ನು ಹಿಡಿದುಕೊಳ್ಳದೆ ಕೆಳಗೆ ಕೆಡವಿದ್ದಾರೆ. ಅಂಬೇಡ್ಕರ್ ಬಗ್ಗೆ ಸಿಎಂಗೆ ಶ್ರದ್ಧೆ ಇಲ್ಲ. ಅಂಬೇಡ್ಕರ್ ಅವರ ದೊಡ್ಡ, ದೊಡ್ಡ ಮೂರ್ತಿ ಮಾಡಿದ್ದು, ಅವರಿಗೆ ಗೌರವ ನೀಡಿದ್ದು ಬಿಜೆಪಿ. ಅಂಬೇಡ್ಕರ್ ಅವರ ಐದು ಕ್ಷೇತ್ರಗಳನ್ನು ಅಂತಾರಾಷ್ಟ್ರೀಯ ಸ್ಮಾರಕ ಮಾಡಿದ್ದು ಬಿಜೆಪಿ. ಅಷ್ಟೇ ಅಲ್ಲ ರಾಜ್ಯದಲ್ಲಿ ಅಂಬೇಡ್ಕರ್ ಭೇಟಿ ನೀಡಿದ ಧಾರವಾಡ, ಹಾಸನ, ಕೋಲಾರ, ಬೆಳಗಾವಿ ಸೇರಿದಂತೆ 7 ಜಿಲ್ಲೆಗಳಲ್ಲಿಯೂ ಸ್ಮಾರಕ ಮಾಡಲು ಪ್ರೇರಣೆ ನೀಡಿದ್ದು ಬಿಜೆಪಿ. ಆದರೂ, ಕಾಂಗ್ರೆಸ್‌ನವರು ಸುಳ್ಳು ಸೃಷ್ಟಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.ಕೇಂದ್ರದ ನಿರ್ಧಾರವನ್ನು ರಾಜ್ಯಗಳು ಪಾಲನೆ ಮಾಡಲೇಬೇಕು

ವಕ್ಫ್‌ ತಿದ್ದುಪಡಿ ಮಸೂದೆಯನ್ನು ನಾವು ರಾಜ್ಯದಲ್ಲಿ ಜಾರಿ ಮಾಡಲ್ಲ ಎಂಬ ಜಮೀರ್ ಅಹ್ಮದ್ ಹೇಳಿಕೆಗೆ ಪ್ರತಿಕ್ರಿಯಿಸಿ, ಕೇಂದ್ರ ಸರ್ಕಾರ ಸಂಸತ್‌ನಲ್ಲಿ ಸುದೀರ್ಘ ಚರ್ಚೆ ಮಾಡಿ ವಕ್ಫ್‌ ತಿದ್ದುಪಡಿ ಮಸೂದೆಯನ್ನು ಪಾಸ್ ಮಾಡಿದೆ. ವಕ್ಫ್‌ ಆಸ್ತಿಯನ್ನು ಲೂಟಿ ಮಾಡಲಾಗುತ್ತಿದೆ. ಇದನ್ನು ತಡೆಯಲು ಕೇಂದ್ರದ ನಿರ್ಧಾರವನ್ನು ರಾಜ್ಯಗಳು ಪಾಲನೆ ಮಾಡಲೇ ಬೇಕು ಎಂದು ಅವರು ಹೇಳಿದರು.

Share this article