ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ಮೈಸೂರು-ಬೆಂಗಳೂರು ಹೆದ್ದಾರಿಯ ಕುವೆಂಪು ವೃತ್ತದಲ್ಲಿ ಸೇರಿದ ಹಿಂದೂ ಸಂಘಟನೆ ಕಾರ್ಯಕರ್ತರು ಹಲ್ಲೆ ನಡೆಸಿದವರ ವಿರುದ್ಧ ಘೋಷಣೆಗಳ ಕೂಗಿದರು. ಕೆಲಕಾಲ ಮಾನವ ಸರಪಳಿ ನಿರ್ಮಿಸಿ ಹೆದ್ದಾರಿ ತಡೆ ಮಾಡಿ ಇಂತಹ ಮತಾಂತರ ಪ್ರಕರಣಗಳಿಗೆ ಸರ್ಕಾರ ಒತ್ತು ನೀಡದಂತೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ನಂತರ ಪಟ್ಟಣದ ಮುಖ್ಯ ರಸ್ತೆಯ ಮೂಲಕ ಹಿಂದು ಪರ ಧ್ವಜಗಳ ಹಿಡಿದು ಜಾಥಾ ನಡೆಸಿದ ಪ್ರತಿಭಟನಾಕಾರರು ತಾಲೂಕು ಕಚೇರಿ ಎದುರು ಧರಣಿ ನಡೆಸಿ ಮತಾಂತರದ ಕೃತ್ಯಕ್ಕೆ ಕಾರಣರಾದವರ ವಿರುದ್ಧ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.ಮತಾಂತರಕ್ಕೆ ಒಪ್ಪದ ಪತ್ನಿ, ಅತ್ತೆ ಮೇಲೆ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಒಂದೆಡೆ ಮುಸ್ಲಿಂರ ಬಳಿಕ, ಕ್ರಿಶ್ಚಿಯನ್ ಮಿಷನರಿಗಳು ಮತಾಂತರವಾದರೆ ಲಕ್ಷ ಲಕ್ಷ ಹಣ ಕೊಡುವುದಾಗಿ ಆಮಿಷ ನೀಡುವ ಆರೋಪ ಕೇಳಿಬರುತ್ತಿದೆ. ಜೊತೆಗೆ ತಾಲೂಕಿನ ವಿವಿಧೆಡೆ ಗ್ರಾಮಗಳು, ಮನೆಗಳು, ಚರ್ಚ್‌ಗಳಲ್ಲಿ ಮಿಷನರಿಗಳ ಮೂಲಕ ಆಮಿಷಗಳ ಒಡ್ಡಿ ಮತಾಂತರಕ್ಕೆ ಯತ್ನಿಸಲಾಗುತ್ತಿದೆ. ಇಂತವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಪೊಲೀಸ್ ಠಾಣೆಗೆ ಮುತ್ತಿಗೆ ಯತ್ನ:
ಹಿಂದೂ ಸಂಘಟನೆಗಳು ಇಲ್ಲ ಅಂದರೆ ನೀವು ಯೂನಿಫಾರಂ ಹಾಕ್ತಿರಲಿಲ್ಲ. ನಿಮಗೆಲ್ಲ ಮುಂಜಿ ಮಾಡಿ ಟೋಪಿ ಹಾಕುತ್ತಿದ್ದರು. ನಾವೆಲ್ಲಾ ಹಿಂದೂಗಳು ಸಂಸ್ಕಾರವಂತರು. ನೂರಾರು ವರ್ಷಗಳಿಂದ ಸಂಘಟನೆ ಮಾಡುತ್ತಾ ನಿಮ್ಮ ಪರ ಇದ್ದೀವಿ ಎಂದು ಮತಾಂತರಿಗಳ ಬಂಧನ ಬಗ್ಗೆ ಉಡಾಫೆ ಉತ್ತರ ಕೊಟ್ಟ ಡಿವೈಎಸ್ಪಿ ಶಾಂತಮಲ್ಲಪ್ಪ ಅವರನ್ನು ತರಾಟೆ ತೆಗೆದುಕೊಂಡರು.
ಈ ವೇಳೆ ಹಿಂದು ಜಾಗರಣ ವೇದಿಕೆಯ ಬಾಲು, ವಿಶ್ವ ಹಿಂದೂಪರಿಷತ್ ಸಂಘಟನೆ ಬೆಳಗೊಳ ಸುನೀಲ್ ಸೇರಿದಂತೆ ಇತರ ಹಿಂದು ಪರ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.