16ರಂದು ಹುಬ್ಬಳ್ಳಿಗೆ ಜನಾಕ್ರೋಶ ಯಾತ್ರೆ

KannadaprabhaNewsNetwork |  
Published : Apr 11, 2025, 12:34 AM IST
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಮಾತನಾಡಿದರು. | Kannada Prabha

ಸಾರಾಂಶ

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ 2 ವರ್ಷಗಳಲ್ಲಿ ದಲಿತರ, ರೈತರ, ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ

ಹುಬ್ಬಳ್ಳಿ: ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿ ಖಂಡಿಸಿ ಬಿಜೆಪಿಯಿಂದ ಆರಂಭಿಸಲಾಗಿರುವ ಜನಾಕ್ರೋಶ ಯಾತ್ರೆಯು ಏ.16 ರಂದು ಹುಬ್ಬಳ್ಳಿಗೆ ಆಗಮಿಸಲಿದೆ ಎಂದು ಮಾಜಿ ಶಾಸಕ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಯಾತ್ರೆಯ ವಿವರ ನೀಡಿದ ಅವರು, ಅಂದು ಸಂಜೆ 4 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಸುಮಾರು 25 ಸಾವಿರಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆ ಇದೆ. ಕೇಂದ್ರದ ನಾಯಕರು, ರಾಜ್ಯಾಧ್ಯಕ್ಷರು ಹಾಗೂ ಹಲವಾರು ಜನಪ್ರತಿನಿಧಿಗಳು ಯಾತ್ರೆಯಲ್ಲಿ ಪಾಲ್ಗೊಳ್ಳುವರು ಎಂದರು. ಸ್ಥಳವನ್ನು ಇನ್ನೂ ನಿಗದಿಪಡಿಸಿಲ್ಲ. ಶೀಘ್ರದಲ್ಲೇ ನಿಗದಿಪಡಿಸಲಾಗುವುದು ಎಂದರು.

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ 2 ವರ್ಷಗಳಲ್ಲಿ ದಲಿತರ, ರೈತರ, ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಇಂದಿಗೂ ದಲಿತರನ್ನು ಓಟ್ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದೆ. ಜತೆಗೆ ರೈತ ವಿರೋಧಿ, ಜನಸಾಮಾನ್ಯರ ವಿರೋಧಿ ನೀತಿ ಅನುಸರಿಸುತ್ತಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ಹಾಲಿಗೆ ₹7 ಪ್ರೋತ್ಸಾಹ ಧನ ನೀಡುವುದಾಗಿ ಭರವಸೆ ನೀಡಿತ್ತು. ಆದರೆ, ನೀಡಬೇಕಾದ ಪ್ರೋತ್ಸಾಹ ಧನ ₹700 ಕೋಟಿ ಬಾಕಿ ಉಳಿಸಿಕೊಂಡಿದೆ ಎಂದು ಹರಿಹಾಯ್ದರು.

ಪ್ರತಿಯೊಂದು ವಸ್ತುವಿನ ಮೇಲೆ ದರ ಹೆಚ್ಚಿಸಿದ್ದು, ಯಾವ ಸರ್ಕಾರ ಮಾಡಿಲ್ಲ. ಶಕ್ತಿ ಯೋಜನೆ ನೀಡುತ್ತಿರುವ ಸರ್ಕಾರ ಹಾಗೂ ಸಾರಿಗೆ ಸಚಿವರಿಗೆ ಸಾರಿಗೆ ಇಲಾಖೆಯ ಪರಿಸ್ಥಿತಿ ಅರ್ಥವಾಗುತ್ತಿಲ್ಲ. ಸುಮಾರು ₹7 ಸಾವಿರ ಕೋಟಿ ಹಣ ಬಾಕಿ ಉಳಿಸಿಕೊಂಡಿದೆ. ಕಾರ್ಯದರ್ಶಿಗಳು ಹಣ ನೀಡುವುದಿಲ್ಲ ಎಂದು ಅಧಿಕೃತವಾಗಿ ಹೇಳಿಕೊಂಡಿದ್ದಾರೆ. ಇದರಿಂದ ಸಾರಿಗೆ ಇಲಾಖೆ ಆಸ್ತಿ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ವಿದ್ಯುತ್ ಟ್ರಾನ್ಸಫಾರ್ಮರ್ ದರವನ್ನು ₹ 30 ಸಾವಿರದಿಂದ ₹ 3 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಬಾಂಡ್ ₹50 ರಿಂದ ₹500ಕ್ಕೆ ಹೆಚ್ಚಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇದಕ್ಕಾಗಿಯೇ ಒಂದು ರಿಸರ್ಚ್ ತಂಡ ರಚಿಸಿಕೊಂಡಿದ್ದು, ಆ ತಂಡವು ಯಾವ ರೀತಿ ಜನರಿಂದ ಹಣ ಸುಲಿಗೆ ಮಾಡಬೇಕು ಎಂದು ಸಲಹೆ ನೀಡುತ್ತಾರೆ ಎಂದು ಆರೋಪಿಸಿದರು.

ವಿದ್ಯಾನಿಧಿ ಯೋಜನೆ ರದ್ದು ಮಾಡಲಾಗಿದೆ. ನೀರಾವರಿ ಯೋಜನೆಗೂ ನಯಾಪೈಸೆ ಅನುದಾನ ನೀಡಿಲ್ಲ. ಕೇಂದ್ರ ಸರ್ಕಾರವೂ ಅಡುಗೆ ಅನಿಲ ದರ ಹೆಚ್ಚಿಸಿದೆ. ಆದರೆ, ರಾಜ್ಯ ಸರ್ಕಾರ ಎಲ್ಲದರ ದರ ಹೆಚ್ಚಿಸಿದ್ದರಿಂದ ಇದು ಸಹ ಜನರಿಗೆ ಹೊರೆಯಾಗಲಿದೆ ಎಂದರು.

ಈ ವೇಳೆ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಮಾಜಿ ಶಾಸಕರಾದ ಅಮೃತ ದೇಸಾಯಿ, ಅಶೋಕ ಕಾಟವೆ, ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಗ್ರಾಮೀಣ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ, ಪಾಲಿಕೆ ಉಪಮೇಯರ್‌ ದುರ್ಗಮ್ಮ ಬಿಜವಾಡ, ಮಹೇಂದ್ರ ಕೌತಾಳ, ಬಸವರಾಜ ಕುಂದಗೋಳಮಠ, ರವಿ ನಾಯಕ ಸೇರಿದಂತೆ ಹಲವರಿದ್ದರು.

ಇಂದಿನಿಂದ ಭೀಮಹೆಜ್ಜೆ ಯಾತ್ರೆ: ಕಾಂಗ್ರೆಸ್ ಮಹಾತ್ಮ ಗಾಂಧೀಜಿ ಬೆಳಗಾವಿಗೆ ಬಂದು ಹೋಗಿ ನೂರು ವರ್ಷದ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಣೆ ಮಾಡಿತು. ಅದರಂತೆ ನಿಪ್ಪಾಣಿಗೆ ಡಾ. ಬಿ.ಆರ್‌. ಅಂಬೇಡ್ಕರ್ ಬಂದು ಹೋಗಿ ನೂರು ವರ್ಷವಾಗುತ್ತಿದೆ.ಆದರೆ, ಕಾಂಗ್ರೆಸ್‌ ಸೌಜನ್ಯಕ್ಕಾದರೂ ಅಂಬೇಡ್ಕರ್ ಪಾದಸ್ಪರ್ಶದ ನೂರು ವರ್ಷ ಸಂಭ್ರಮ ಆಚರಿಸಲಿಲ್ಲ. ಇದರ ಮೇಲೆಯೇ ಕಾಂಗ್ರೆಸ್‌ಗೆ ಅಂಬೇಡ್ಕರ್‌ ಮೇಲಿರುವ ಗೌರವ ಎಷ್ಟಿದೆ ಎಂಬುದು ಗೊತ್ತಾಗುತ್ತಿದೆ. ಹಾಗಾಗಿ ಬಿಜೆಪಿಯಿಂದ ಭೀಮ ಹೆಜ್ಜೆ ನೂರರ ಸಂಭ್ರಮ ಕಾರ್ಯಕ್ರಮ ಆಯೋಜಿಸಿದೆ. ಏ.11ರಂದು ಬೆಳಗ್ಗೆ ಬೆಂಗಳೂರಿನಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಈ ಯಾತ್ರೆ ಆರಂಭಿಸಲಾಗುವುದು. ಏ.13ರಂದು ಯಾತ್ರೆ ಹುಬ್ಬಳ್ಳಿಗೆ ಆಗಮಿಸಲಿದೆ. ಏ.15ರಂದು ಬೆಳಗಾವಿ ನಿಪ್ಪಾಣಿಗೆ ತಲುಪಲಿದ್ದು, ಅಲ್ಲಿ ಬೃಹತ್ ಸಮಾವೇಶ ಮಾಡಲಾಗುವುದು. ಕಾಂಗ್ರೆಸ್ ಸುಡುವ ಮನೆಯಾಗಿದೆ. ಯಾರು ಅಲ್ಲಿಗೆ ಹೋಗಬೇಡಿ ಎಂದು ಅಂಬೇಡ್ಕರ್ ಅವರು ಉತ್ತರ ಪ್ರದೇಶದ ಲಕ್ನೋದಲ್ಲಿ ಭಾಷಣ ಮಾಡಿದ್ದರು. ಈ ವಿಡಿಯೋ ಕ್ಲಿಪ್ ದೇಶಾದ್ಯಂತ ಬಿಡುಗಡೆಗೊಳಿಸಲಾಗುವುದು ಎಂದು ಪಿ.ರಾಜೀವ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆ.ಎಸ್.ಪುಟ್ಟಣ್ಣಯ್ಯ ಆದರ್ಶ ಎಲ್ಲಾ ಕಾಲಕ್ಕೂ ಮಾದರಿ, ಅನುಸರಣೀಯ: ನಾಗತಿಹಳ್ಳಿ ಚಂದ್ರಶೇಖರ್
ಮೇಲುಕೋಟೆ: ಶ್ರೀದೇವಿ ಭೂದೇವಿಯರಿಗೆ ನೂರ್ ತಡಾ ಉತ್ಸವ