ಮದ್ದೂರು : ಜೆಡಿಎಸ್ ತನ್ನದೇ ತತ್ವ, ಸಿದ್ಧಾಂತಗಳಿಗೆ ಬದ್ಧವಾಗಿಲ್ಲ. ಆ ಪಕ್ಷ ಮುಳುಗುತ್ತಿರುವ ಹಡಗು. ಕಾಂಗ್ರೆಸ್ ಸರ್ಕಾರದ ವಿರುದ್ಧ ಆಂದೋಲನ ನಡೆಸಲು ಮುಂದಾಗಿರುವುದು ಹಾಸ್ಯಾಸ್ಪದ ಎಂದು ಶಾಸಕ ಕೆ.ಎಂ.ಉದಯ್ ಗುರುವಾರ ಟೀಕಿಸಿದರು.
ತಾಲೂಕಿನ ಬೆಸಗರಹಳ್ಳಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ 30 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ಜೆಡಿಎಸ್ ನಾಯಕರು ಸಾಕಪ್ಪ ಕಾಂಗ್ರೆಸ್ ಸರ್ಕಾರ ಎಂಬ ಹೆಸರಿನಲ್ಲಿ ಅಭಿಯಾನ ಮಾಡಲು ಹೊರಟಿದೆ. ಆದರೆ, ಮತದಾರರು ಕಾಂಗ್ರೆಸ್‌ಗೆ ಆಶೀರ್ವಾದ ಮಾಡಿ ಜೆಡಿಎಸ್ ಸಹವಾಸ ಸಾಕಪ್ಪ ಎಂದು ಮನೆಗೆ ಕಳಿಸಿದ್ದಾರೆ ಎಂದು ಲೇವಡಿ ಮಾಡಿದರು.
ಬಿಜೆಪಿ ಜೊತೆ ಜೆಡಿಎಸ್ ವಿಲೀನವಿಲ್ಲ ಎಂಬ ನಿಖಿಲ್ ಹೇಳಿಕೆಗೆ ಶಾಸಕರು ಪ್ರತಿಕ್ರಿಯಿಸಿ, ಜೆಡಿಎಸ್ ಅಧಿಕಾರದಲ್ಲಿರುವ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದು ಹೊಸದಲ್ಲ. ಈಗ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತಿದೆ. ಭವಿಷ್ಯದಲ್ಲಿ ಜೆಡಿಎಸ್ ಬಿಜೆಪಿಯೊಂದಿಗೆ ವಿಲೀನವಾದರೂ ಅಚ್ಚರಿಪಡಬೇಕಾಗಿಲ್ಲ ಎಂದರು.
ವಿಜಯೇಂದ್ರ ಟೋಲ್ ಗಿರಾಕಿ:
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವಿಜಯೇಂದ್ರ ಒಂದು ರೀತಿಯ ಟೋಲ್ ಗಿರಾಕಿ. ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದ ಅವಧಿಯಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ. ಇದರ ಪ್ರಮುಖ ನೇತಾರರೇ ಬಿ.ವೈ.ವಿಜಯೇಂದ್ರ ಎಂದು ಶಾಸಕ ಕೆ.ಎಂ.ಉದಯ್ ದೂರಿದರು.
ಹೆದ್ದಾರಿಗಳಲ್ಲಿ ವಾಹನಗಳ ಟೋಲ್ ಸಂಗ್ರಹ ಮಾಡುವ ರೀತಿಯಲ್ಲಿ ವಿಜಯೇಂದ್ರ ಎಲ್ಲಾ ಇಲಾಖೆಗಳಿಂದ ಹಣ ಸಂಗ್ರಹ ಮಾಡುವ ಇಂಥ ವ್ಯಕ್ತಿಗೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾತನಾಡುವ ನೈತಿಕ ಹಕ್ಕು ಇಲ್ಲ ಎಂದು ಕಿಡಿಕಾರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ 500 ಕೋಟಿ ಗಣಿ ಕಿಕ್ ಬ್ಯಾಕ್ ಬಗ್ಗೆ ಪ್ರತಿಕ್ರಿಯಿಸಿದ ಶಾಸಕರು, ಸಿದ್ದರಾಮಯ್ಯ ಯಾವುದೇ ಹಗರಣ ಅಥವಾ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ. ಅವರು ಹಿಂದುಳಿದ ಸಮಾಜದ ನಾಯಕರಾಗಿರುವುದರಿಂದ ಎರಡನೇ ಬಾರಿಗೆ ಅವರು ಮುಖ್ಯಮಂತ್ರಿ ಆಗಿದ್ದಾರೆ. ಸಿದ್ದರಾಮಯ್ಯ ವರ್ಚಸ್ಸು ಏನು ಎಂದು ಹೈಕಮಾಂಡ್‌ಗೆ ಗೊತ್ತಿರುವುದರಿಂದ ಅವರನ್ನು ಮುಖ್ಯಮಂತ್ರಿ ಮಾಡಲಾಗಿದೆ ಎಂದರು.
ಈ ವೇಳೆ ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಪಿ. ಸಂದರ್ಶ, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಶಾಹೀನ ತಾಜ್, ಸದಸ್ಯರಾದ ಎಂ. ರೇಖಾ, ಚಿನ್ನೇಗೌಡ, ಜಾವೀದ್, ಷಣ್ಮುಗ, ಮುರುಳಿ, ಕಾಂಗ್ರೆಸ್ ಮುಖಂಡರಾದ ಅಡ್ಡರಸ್ತೆ ಗೋಪಿ, ಪಣ್ಣೆದೊಡ್ಡಿ ಸುಧಾಕರ ಮತ್ತಿತರರು ಇದ್ದರು.