ಹಲಗೇರಿಯಲ್ಲಿ ತಾಲೂಕಿನ ಕೊಡ್ಕಣಿ ಹೋಬಳಿ ಮಟ್ಟದ ಜನಸ್ಪಂದನ ಕಾರ್ಯಕ್ರಮ
ತಾಲೂಕು ಮತ್ತು ಜಿಲ್ಲಾ ಮಟ್ಟದ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಿ, ಜನರ ಸಮಸ್ಯೆಗಳಿಗೆ ಸ್ಥಳೀಯವಾಗಿಯೇ ಪರಿಹಾರ ಒದಗಿಸುವ ಉದ್ದೇಶದಿಂದ ಹೋಬಳಿ ಮಟ್ಟದ ಜನಸ್ಪಂದನ ಸಭೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ಹಲಗೇರಿಯಲ್ಲಿ ತಾಲೂಕಿನ ಕೊಡ್ಕಣಿ ಹೋಬಳಿ ಮಟ್ಟದ ೯ ಗ್ರಾಮ ಪಂಚಾಯಿತಿಗಳ ಜನಸ್ಪಂದನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ, ಜನರ ಅಹವಾಲು ಸ್ವೀಕರಿಸಿದರು. ಹಿಂದಿನ ವರ್ಷ ತಾಲೂಕು ಮಟ್ಟದ ಸಭೆಗಳನ್ನು ನಡೆಸಲಾಗಿತ್ತು. ಆದರೆ ತಾಲೂಕು ಮತ್ತು ಜಿಲ್ಲಾ ಮಟ್ಟದ ಕೆಲಸಗಳ ಒತ್ತಡವನ್ನು ಕಡಿಮೆ ಮಾಡಲು ಮತ್ತು ಜನರಿಗೆ ಅವರ ಭಾಗದಲ್ಲೇ ಪರಿಹಾರ ಸಿಗಲಿ ಎಂಬ ಉದ್ದೇಶದಿಂದ ಹೋಬಳಿ ಮಟ್ಟದಲ್ಲಿ ಸಭೆಗಳನ್ನು ನಡೆಸಲಾಗುತ್ತಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ. ಚುನಾವಣೆಗೂ ಮುನ್ನ ನೀಡಿದ ಭರವಸೆಯಂತೆ ೧೩೬ ಕ್ಷೇತ್ರಗಳಲ್ಲಿ ಗೆದ್ದು, ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ೫ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಆಯಾ ಇಲಾಖೆಯ ಅಧಿಕಾರಿಗಳು ಫಲಾನುಭವಿಗಳಿಗೆ, ವಿಶೇಷವಾಗಿ ತಾಯಂದಿರಿಗೆ, ಸರ್ಕಾರದ ಸವಲತ್ತುಗಳನ್ನು ಸರಿಯಾದ ಸಮಯಕ್ಕೆ ತಲುಪಿಸುತ್ತಿದ್ದಾರೆ ಎಂದರು.ಅಧಿಕಾರಿಗಳು ಜನರ ಬಳಿಗೆ ಹೋಗಬೇಕು. ಸರ್ಕಾರಿ ಕಚೇರಿಗಳಲ್ಲಿ ಕೆಲಸಗಳು ಆಗದೆ ಜನರು ಪರದಾಡುವುದು, ಕಚೇರಿಗಳಿಗೆ ಅಲೆದಾಡುವುದು ತಪ್ಪಬೇಕು. ಸರ್ಕಾರ ಮತ್ತು ಅಧಿಕಾರಿಗಳು ಜನರ ಮನೆ ಬಾಗಿಲಿಗೆ ಹೋಗಿ ಅವರ ಕಷ್ಟ-ಸುಖಗಳಲ್ಲಿ ಭಾಗಿಯಾಗಬೇಕು. ಈ ನಿಟ್ಟಿನಲ್ಲಿ ೯ ಪಂಚಾಯಿತಿ ವ್ಯಾಪ್ತಿಯ ಜನರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ, ತಾಲೂಕು ಆಡಳಿತದ ಎಲ್ಲ ಇಲಾಖೆಯ ಅಧಿಕಾರಿಗಳ ಸಮಕ್ಷಮದಲ್ಲಿ ಜನರ ಅಹವಾಲುಗಳನ್ನು ಸ್ವೀಕರಿಸಲಾಗುತ್ತಿದೆ. ಲಿಖಿತವಾಗಿ ನೀಡಲಾದ ಅರ್ಜಿಗಳನ್ನು ಪರಿಶೀಲಿಸಿ, ಸ್ಥಳದಲ್ಲೇ ಪರಿಹರಿಸಬಹುದಾದವುಗಳಿಗೆ ಅಲ್ಲಿಯೇ ಪರಿಹಾರ ನೀಡಲಾಗುವುದು, ಉಳಿದವುಗಳಿಗೆ ಮೇಲಧಿಕಾರಿಗಳನ್ನು ಸಂಪರ್ಕಿಸಿ ನ್ಯಾಯ ಒದಗಿಸಲಾಗುವುದು. ಪಂಚಾಯಿತಿ ಮಟ್ಟದಲ್ಲಿ ಸಭೆ ನಡೆಸುವ ಉದ್ದೇಶವಿದ್ದರೂ, ಆಡಳಿತಾತ್ಮಕ ಹಿತದೃಷ್ಟಿಯಿಂದ ಮತ್ತು ಅಧಿಕಾರಿಗಳು ದಿನನಿತ್ಯದ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗುವಂತೆ ಹೋಬಳಿ ಮಟ್ಟದಲ್ಲಿ ಸಭೆ ನಡೆಸಲಾಗುತ್ತಿದೆ ಎಂದರು.
ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಕೆ.ಜಿ. ನಾಗರಾಜ, ತಾಪಂ ಇಒ ದೇವರಾಜ ಹಿತ್ಲಕೊಪ್ಪ, ಸಿಪಿಐ ಜೆ.ಬಿ. ಸೀತಾರಾಮ್, ಎಸ್.ಕೆ. ಭಾಗ್ವತ್ ಉಪಸ್ಥಿತರಿದ್ದರು.ಶಿರಸ್ತೇದಾರ್ ಶ್ಯಾಮಸುಂದರ್ ಕಾರ್ಯಕ್ರಮ ನಿರೂಪಿಸಿದರು. ಹಲಗೇರಿ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಬ್ರಹ್ಮಣ್ಯ ಹೆಗಡೆ ಸ್ವಾಗತಿಸಿದರು.
ಮದ್ಯಕ್ಕೆ ಹೆಚ್ಚಿನ ದರಜನಸ್ಪಂದನ ಸಭೆಯಲ್ಲಿ ಶಾಸಕರಿಗೆ ಬಂದ ವಿಚಿತ್ರವಾದ ಅರ್ಜಿಯೊಂದು ಸಭೆಯಲ್ಲಿದ್ದವರ ಹುಬ್ಬೇರಿಸಿತು! ಪಟ್ಟಣದ ವೈನ್ ಶಾಪ್‌ಗಳಲ್ಲಿ ೭೫೦ ಎಂ.ಎಲ್. ಮದ್ಯಕ್ಕೆ ₹೧೦ ಅಷ್ಟೇ ಹೆಚ್ಚಿನ ದರ ವಿಧಿಸಬಹುದು. ಆದರೆ ₹೯೦ ವಿಧಿಸುತ್ತಿದ್ದಾರೆ ಹಾಗೂ ಬಹಳಷ್ಟು ವೈನ್ ಶಾಪ್‌ಗಳಲ್ಲಿ ಬಿಲ್ ನೀಡುವುದಿಲ್ಲ. ಈ ಬಗ್ಗೆ ಅಬಕಾರಿ ಇಲಾಖೆಗೆ ಸೂಚಿಸಲು ನಾಗರಿಕರು ಮನವಿ ಮಾಡಿದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಶಾಸಕರು, ಅಬಕಾರಿ ಇಲಾಖೆಗೆ ಈ ಬಗ್ಗೆ ಸೂಕ್ತ ಕ್ರಮಕ್ಕೆ ಸೂಚಿಸಿ, ಹೀಗಾದಲ್ಲಿ ಅಧಿಕಾರಿಯನ್ನು ಸಂಪರ್ಕಿಸಲು ತಿಳಿಸಿದರು.