ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಈ ನಿರ್ಧಾರ
ಜಿಲ್ಲಾ ಜನತಾ ದರ್ಶನದಲ್ಲಿ ಸಚಿವ ಸಂತೋಷ ಲಾಡ್
ಕನ್ನಡಪ್ರಭ ವಾರ್ತೆ ಧಾರವಾಡ
ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಲಾಗುತ್ತಿದ್ದು, ಸರ್ಕಾರದ ಹಂತದಲ್ಲಿ ಪರಿಹರಿಸಬೇಕಾದ ಮತ್ತು ನ್ಯಾಯಾಲಯ, ಪಾಲಸಿ ಸಂಬಂಧಿತ ಅಹವಾಲು ಹೊರತುಪಡಿಸಿ ಬಹುತೇಕ ಅಹವಾಲುಗಳನ್ನು ಸ್ಥಳಿಯವಾಗಿ ಪರಿಹರಿಸಲಾಗಿದೆ ಎಂದು ಶನಿವಾರ ಇಲ್ಲಿಯ ಜಿಪಂ ಭವನದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಜನತಾ ದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಾರ್ವಜನಿಕರಿಗೆ ಮತ್ತು ಬಾಧಿತ ವ್ಯಕ್ತಿಗಳಿಗೆ ಇನ್ನೂ ಅನುಕೂಲವಾಗಿ, ಅವರ ಸಮಸ್ಯೆಗಳನ್ನು ಸ್ಥಳದಲ್ಲಿ ಪರಿಹರಿಸಲು ಸಹಾಯವಾಗುವಂತೆ ಹೊಸ ವರ್ಷದಿಂದ ತಾಲೂಕು ಮಟ್ಟದಲ್ಲಿ ಜನತಾದರ್ಶನ ಆಯೋಜಿಸಲಾಗುತ್ತದೆ ಎಂದರು.
ಬರಗಾಲ ಸಂದರ್ಭದಲ್ಲಿ ಜಾನುವಾರಗಳಿಗೆ ಮೇವು ಕೊರತೆ ಆಗದಂತೆ ಎಚ್ಚರಿಕೆ ವಹಿಸಬೇಕು. ಮೇವು ಕೇಂದ್ರಗಳನ್ನು ಸ್ಥಾಪಿಸಲು ಅಗತ್ಯವಿರುವ ಸ್ಥಳಗಳನ್ನು ಗುರುತಿಸಿ, ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸಚಿವರು ನಿರ್ದೇಶಿಸಿದರು.
ಮಹಾನಗರ ಸೇರಿದಂತೆ ವಿವಿಧ ತಾಲೂಕುಗಳ ಸಾರ್ವಜನಿಕರು ಜನತಾದರ್ಶನದಲ್ಲಿ ಭಾಗವಹಿಸಿ ತಮ್ಮ ಅಹವಾಲುಗಳನ್ನು ಸಲ್ಲಿಸಿದರು.
ಜಿಲ್ಲೆಯ ವಿವಿಧ ಸ್ಥಳಗಳಿಂದ ಆಗಮಿಸಿದ್ದ ಸಾರ್ವಜನಿಕರು ಸಚಿವರಿಗೆ ಸುಮಾರು 177 ಅಹವಾಲುಗಳನ್ನು ಸಲ್ಲಿಸಿದರು. ಹೆಸ್ಕಾಂ 7, ಉದ್ಯೋಗ ಇಲಾಖೆ 3, ಸಹಕಾರಿ ಇಲಾಖೆ 3, ಸಾರಿಗೆ ಇಲಾಖೆ 3, ವಸತಿ ಇಲಾಖೆ 7, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ 10, ಕಾರ್ಮಿಕ ಇಲಾಖೆ 5, ಶಾಲಾ ಶಿಕ್ಷಣ ಇಲಾಖೆ 10, ಲೋಕೋಪಯೋಗಿ ಇಲಾಖೆ 2, ಸಮಾಜ ಕಲ್ಯಾಣ ಇಲಾಖೆ 3, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ 3, ಪೌರಾಡಳಿತ ಮತ್ತು ನಗರಾಭಿವೃದ್ಧಿ ಇಲಾಖೆ 4, ಆರೋಗ್ಯ ಇಲಾಖೆ 3, ಕ್ರೀಡಾ ಇಲಾಖೆ 3, ಅಲ್ಪಸಂಖ್ಯಾತರ ಇಲಾಖೆ 1, ಗೃಹ ಇಲಾಖೆ 3, ಮಹಿಳಾ ಮತ್ತು ಮಕ್ಜಳ ಅಭಿವೃದ್ದಿ ಇಲಾಖೆ 2, ಕನ್ನಡ ಮತ್ತು ಸಂಸ್ಕೃತಿ ಇಲಾಖೆ 3, ಮಹಾನಗರಪಾಲಿಕೆ 44, ನೋಂದಣಿ ಇಲಾಖೆ 1, ಕಂದಾಯ ಇಲಾಖೆ 54 ಸೇರಿದಂತೆ ಒಟ್ಟು 177 ಅಹವಾಲುಗಳನ್ನು ಸಚಿವರು ಸ್ವೀಕರಿಸಿದರು. 177 ಅಹವಾಲುಗಳಲ್ಲಿ ಅಣ್ಣಿಗೇರಿ 3, ಧಾರವಾಡ 86, ಹುಬ್ಬಳ್ಳಿ ನಗರ 33, ಹುಬ್ಬಳ್ಳಿ ಗ್ರಾಮೀಣ 16, ಅಳ್ನಾವರ 2, ಕಲಘಟಗಿ 16, ಕುಂದಗೋಳ 8 ಮತ್ತು ನವಲಗುಂದದಿಂದ 13 ಅಹವಾಲುಗಳು ಸಲ್ಲಿಕೆ ಆಗಿವೆ.
ವಿಕಲಚೇತನ ಮಗಳ ಫೋಟೊ ಹಿಡಿದು ಜನತಾ ದರ್ಶನಕ್ಕೆ ಬಂದಿದ್ದ ಮುಮ್ಮಿಗಟ್ಟಿಯ ಪ್ರತಿಭಾ ದೇವರದವರ ಎಂಬ ಮಹಿಳೆಗೆ ಸಚಿವ ಸಂತೋಷ ಲಾಡ್ ತನ್ನ ಲಾಡ್ ಫೌಂಡೇಶನ್ ವತಿಯಿಂದ ₹50 ಸಾವಿರ ನೀಡಲು ಸೂಚಿಸುವ ಮೂಲಕ ಮಾನವೀಯತೆ ಮೆರೆದರು.
ಪುತ್ರಿ ಕವಿತಾ ಬೆನ್ನುಮೂಳೆಯ ಶಸ್ತ್ರಚಿಕಿತ್ಸೆ ಒಳಗಾದರೂ ಹಾಸಿಗೆ ಹಿಡಿದಿದ್ದು ಕೈ-ಕಾಲುಗಳು ಸೆಟೆದಿವೆ. ಇದನ್ನು ಫೋಟೋದಲ್ಲಿ ಗಮನಿಸಿ ಮರುಗಿದ ಲಾಡ್ ಆರ್ಥಿಕ ಸಹಾಯ ಮಾಡಿದರು.