- ಜನಿವಾರ ತೆಗಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ । ಕನ್ನಡ ದೈವಜ್ಞ ಬ್ರಾಹ್ಮಣರ ಸಂಘ, ಬಿಜೆಪಿ ನಿಯೋಗ ಜಿಲ್ಲಾಡಳಿತಕ್ಕೆ ಒತ್ತಾಯ
ಕನ್ನಡಪ್ರಭ ವಾರ್ತೆ ದಾವಣಗೆರೆ
ಸಿಇಟಿ ಪರೀಕ್ಷೆ ವೇಳೆ ಬ್ರಾಹ್ಮಣ ವಿದ್ಯಾರ್ಥಿಗಳು ಧರಿಸಿದ್ದ ಪವಿತ್ರ ಜನಿವಾರಕ್ಕೆ ಅವಮಾನಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಒತ್ತಾಯಿಸಿ ಕನ್ನಡ ದೈವಜ್ಞ ಬ್ರಾಹ್ಮಣರ ಸಂಘ ಹಾಗೂ ಬಿಜೆಪಿ ಯುವ ಮುಖಂಡರ ನೇತೃತ್ವದ ನಿಯೋಗ ಜಿಲ್ಲಾಡಳಿತ ಮುಖಾಂತರ ಮುಖ್ಯಮಂತ್ರಿ ಅವರಿಗೆ ಮನವಿ ಅರ್ಪಿಸಿದೆ.ನಗರದ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಸಂಘದ ಜಿಲ್ಲಾ ಪದಾಧಿಕಾರಿಗಳು, ಬಿಜೆಪಿ ಯುವ ಮುಖಂಡರ ನೇತೃತ್ವದಲ್ಲಿ ಪ್ರಭಾರ ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ್ ಅವರನ್ನು ಭೇಟಿ ಮಾಡಿ, ಬೇಡಿಕೆಗಳನ್ನು ತಿಳಿಸಲಾಯಿತು.
ಮಕ್ಕಳಿಗೆ ಸಿಟಿಇ ಪರೀಕ್ಷೆ ಬರೆಯಲು ಅವಕಾಶ ನೀಡದೇ, ಅಂತಹವರ ಭವಿಷ್ಯಕ್ಕೆ ಕೊಡಲಿ ಪೆಟ್ಟು ನೀಡಿದ್ದನ್ನು ಇಡೀ ರಾಜ್ಯದ ಜನತೆ ಸಹಿಸುವುದಿಲ್ಲ. ಇಂತಹ ಘಟನೆಯಿಂದ ಜನಿವಾರಧಾರಿಗಳಿಗೆ, ಸಂಪ್ರದಾಯಸ್ಥರಿಗೆ ತೀವ್ರ ನೋವಾಗಿದೆ. ಜನಿವಾರಧಾರಿಗಳಿಗೆ ಪವಿತ್ರ ಜನಿವಾರವು ಕೇವಲ ದಾರ, ದಾರದ ಎಳೆಗಳಲ್ಲ. ಅದು ಬ್ರಹ್ಮೋಪದೇಶ, ಪರಂಪರೆ, ಶಕ್ತಿ, ಘನತೆ, ಶ್ರೇಷ್ಠ, ಭಕ್ತಿ, ಅಸ್ತಿತ್ವ, ಶ್ರದ್ಧೆ, ಗೌರವ, ಪ್ರಬಲ ಹಕ್ಕಾಗಿದೆ. ಏಕತೆ ಮತ್ತು ಕುಲದ ಗುರುತು ಸಹ ಆಗಿದೆ. ಇಂತಹ ಅವಿಭಾಜ್ಯ ಅಂಗವಾಗಿ ಪವಿತ್ರ ಜನಿವಾರಕ್ಕೆ ಅಪಮಾನಿಸಿದವರನ್ನು ದೈವಜ್ಞ ಬ್ರಾಹ್ಮಣ ಸಮಾಜ ಖಂಡಿಸುತ್ತದೆ. ಕೆಲ ಕೇಂದ್ರಗಳಲ್ಲಿ ತಾಳಿ, ಕಿವಿಯೋಲೆ, ಕಾಲುಂಗುರವನ್ನೂ ಬಿಚ್ಚಿಸಿದ್ದಾರೆ. ಯಾರೇ ಆಗಿರಲಿ ಅಂತಹವರ ವಿರುದ್ಧ ಮೊದಲು ಕಠಿಣ ಕಾನೂನು ಕ್ರಮವಾಗಬೇಕು ಎಂದರು.
ಕಾಂತರಾಜು ಆಯೋಗದ ವರದಿಯಲ್ಲಿ ದೈವಜ್ಞ ಬ್ರಾಹ್ಮಣ ಸಮಾಜದ ಜನಸಂಖ್ಯೆಯನ್ನು ರಾಜ್ಯದಲ್ಲಿ ಕೇವಲ 80 ಸಾವಿರ ಇರುವುದಾಗಿ ಉಲ್ಲೇಖಿಸಿರುವ ಬಗ್ಗೆ ಮಾಧ್ಯಮಗಳಲ್ಲಿ ಮಾಹಿತಿ ಇದೆ. ಗಣತಿಯಲ್ಲಿ ದೈವಜ್ಞ ಬ್ರಾಹ್ಮಣ ಸಮಾಜವನ್ನು ಅತ್ಯಂತ ಕಡಿಮೆ ತೋರಿಸಲಾಗಿದೆ. ಈ ಹಿನ್ನೆಲೆ ವರದಿಯನ್ನು ಮರುಪರಿಶೀಲಿಸಬೇಕು. ರಾಜ್ಯದಲ್ಲಿ ಹೊಸದಾಗಿ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಜನಗಣತಿ ಕಾರ್ಯ ಕೈಗೆತ್ತಿಕೊಳ್ಳಬೇಕು. ಈಗಾಗಲೇ ಇತರೆ ಸಮುದಾಯಗಳಿಗೆ ಅನ್ಯಾಯವಾದಂತೆ ದೈವಜ್ಞ ಬ್ರಾಹ್ಮಣ ಸಮಾಜಕ್ಕೂ ಗಣತಿಯಲ್ಲಿ ಅನ್ಯಾಯವಾಗಿದೆ ಎಂದು ದೂರಿದರು.
- - -
- - -
ದಾವಣಗೆರೆ ಡಿಸಿ ಕಚೇರಿಯಲ್ಲಿ ಮಂಗಳವಾರ ಕನ್ನಡ ದೈವಜ್ಞ ಬ್ರಾಹ್ಮಣರ ಸಂಘ ಹಾಗೂ ಬಿಜೆಪಿ ಯುವ ಮುಖಂಡರ ನೇತೃತ್ವದಲ್ಲಿ ಪ್ರಭಾರ ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ್ ಅವರಿಗೆ ಮನವಿ ಅರ್ಪಿಸಲಾಯಿತು.