ಆಗುಂಬೆ ರಸ್ತೆ ಅಭಿವೃದ್ಧಿ: ಜಾರಕಿಹೊಳಿ ಪರಿಶೀಲನೆ

KannadaprabhaNewsNetwork |  
Published : Jul 17, 2026, 02:45 AM IST
ಆಗುಂಬೆ | Kannada Prabha

ಸಾರಾಂಶ

ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಬುಧವಾರ ಆಗುಂಬೆ ಘಾಟ್ ಹಾಗೂ ಕಾರ್ಕಳ ಭಾಗಕ್ಕೆ ಭೇಟಿ ನೀಡಿ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು. ಆಗುಂಬೆ ಘಾಟ್‌ನಲ್ಲಿ ರಸ್ತೆ ವಿಸ್ತರಣೆ, ಸುರಂಗ (ಟನಲ್) ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಸಾಧ್ಯತೆಗಳ ಕುರಿತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಸಚಿವರು, ಬಳಿಕ ಕಾರ್ಕಳ ಅತಿಥಿಗೃಹದಲ್ಲಿ ಅಧಿಕಾರಿಗಳ ಸಭೆ ನಡೆಸಿದರು.

ಕಾರ್ಕಳ/ಆಗುಂಬೆ: ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಬುಧವಾರ ಆಗುಂಬೆ ಘಾಟ್ ಹಾಗೂ ಕಾರ್ಕಳ ಭಾಗಕ್ಕೆ ಭೇಟಿ ನೀಡಿ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು. ಆಗುಂಬೆ ಘಾಟ್‌ನಲ್ಲಿ ರಸ್ತೆ ವಿಸ್ತರಣೆ, ಸುರಂಗ (ಟನಲ್) ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಸಾಧ್ಯತೆಗಳ ಕುರಿತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಸಚಿವರು, ಬಳಿಕ ಕಾರ್ಕಳ ಅತಿಥಿಗೃಹದಲ್ಲಿ ಅಧಿಕಾರಿಗಳ ಸಭೆ ನಡೆಸಿದರು.ಆಗುಂಬೆ ಸೂರ್ಯಾಸ್ತ ವೀಕ್ಷಣಾ ಸ್ಥಳದಿಂದ ಘಾಟ್ ಪ್ರದೇಶ ವೀಕ್ಷಿಸಿದ ಸಚಿವರು, ರಸ್ತೆಯ ಸ್ಥಿತಿ, ಭೂಕುಸಿತ ಸಂಭವಿಸುವ ಪ್ರದೇಶಗಳು ಹಾಗೂ ಅಭಿವೃದ್ಧಿಗೆ ಇರುವ ತಾಂತ್ರಿಕ ಸವಾಲುಗಳ ಕುರಿತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದರು.ಟನಲ್ ನಿರ್ಮಾಣ ಹಾಗೂ ರಸ್ತೆ ದ್ವಿಪಥ (ಡಬಲ್ ರಸ್ತೆ) ನಿರ್ಮಾಣ ಕುರಿತು ಪ್ರತಿಕ್ರಿಯಿಸಿದ ಅವರು, ‘ಆಗುಂಬೆ ಘಾಟ್‌ನಲ್ಲಿ ಟನಲ್ ನಿರ್ಮಾಣದ ಬಗ್ಗೆ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ. ರಸ್ತೆ ವಿಸ್ತರಣೆಗೆ ಅರಣ್ಯ ಮತ್ತು ವನ್ಯಜೀವಿ ಇಲಾಖೆಗಳ ಅನುಮತಿ ಅಗತ್ಯವಿದ್ದು, ಪರಿಸರ ಹಾಗೂ ತಾಂತ್ರಿಕ ಅಂಶಗಳನ್ನು ಸಮಗ್ರವಾಗಿ ಪರಿಶೀಲಿಸಿದ ಬಳಿಕವೇ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು,’ ಎಂದು ತಿಳಿಸಿದರು.ಕೇಂದ್ರ ಸರ್ಕಾರ ಆಗುಂಬೆ ಘಾಟ್ ಟನಲ್ ನಿರ್ಮಾಣಕ್ಕೆ ಟೆಂಡರ್ ಆಹ್ವಾನಿಸಿರುವ ಕುರಿತು ಮಾತನಾಡಿದ ಸಚಿವರು, ‘ಟೆಂಡರ್ ಆಹ್ವಾನಿಸಲಾಗಿದ್ದರೂ ಇದುವರೆಗೆ ಯಾರೂ ಅರ್ಜಿ ಸಲ್ಲಿಸಿಲ್ಲ. ಡಿಪಿಆರ್ ಸೇರಿದಂತೆ ಹಲವು ವಿಷಯಗಳ ಕುರಿತು ಇನ್ನೂ ಸ್ಪಷ್ಟತೆ ಅಗತ್ಯವಿದೆ’ ಎಂದರು.ಬಳಿಕ ಕಾರ್ಕಳ ಅತಿಥಿಗೃಹದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಸಚಿವರು, ರಾಜ್ಯ ಸರ್ಕಾರ ಹಂತ ಹಂತವಾಗಿ ರಾಜ್ಯ ಹೆದ್ದಾರಿಗಳು ಹಾಗೂ ಗ್ರಾಮೀಣ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಈಗಾಗಲೇ ಹಲವು ಕಾಮಗಾರಿಗಳಿಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡಲಾಗಿದೆ. ಉಳಿದ ಕಾಮಗಾರಿಗಳಿಗೂ ಆದ್ಯತೆ ನೀಡಲಾಗುವುದು ಎಂದರು.ಕಾರ್ಕಳ–ಕಳಸ ಸಂಪರ್ಕ ರಸ್ತೆ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಅವರು, ಕಾರ್ಕಳದಲ್ಲಿ ನಡೆಯಲಿರುವ ಮಹಾಮಸ್ತಕಾಭಿಷೇಕಕ್ಕೆ ಅನುದಾನ ನೀಡುವಂತೆ ಮನವಿ ಬಂದಿದ್ದು, ಈ ಕುರಿತು ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂದು ತಿಳಿಸಿದರು.ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದ ಸಚಿವರು, ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ಹಾಗೂ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಳಿಕ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಕೆಲಕಾಲ ಸಮಾಲೋಚನೆ ನಡೆಸಿದರು.

ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಅಶೋಕ್ ಕೊಡವೂರು, ಕಾಂಗ್ರೆಸ್ ಮುಖಂಡರಾದ ಉದಯ ಶೆಟ್ಟಿ ಮುನಿಯಾಲು, ರಕ್ಷಿತ್ ಶಿವರಾಂ, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಿನಾಥ್ ಭಟ್, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ, ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರಪಾಲ್ ನಕ್ರೆ, ಪುರಸಭೆಯ ಮಾಜಿ ಅಧ್ಯಕ್ಷರಾದ ಸುಭಿತ್ ಎನ್.ಆರ್. ಹಾಗೂ ಪ್ರತಿಮಾ ರಾಣೆ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಭಾನು ಭಾಸ್ಕರ್, ಮಾಲಿನಿ ರೈ, ತಹಸೀಲ್ದಾರ್ ಪ್ರದೀಪ್ ಹಾಗೂ ಲೋಕೋಪಯೋಗಿ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆಮಿಕಲ್‌ ಮಿಶ್ರಿತ ಹಾಲು ಪೂರೈಕೆ ತಡೆಯಲು ಆಗ್ರಹಿಸಿ ಡಿಸಿಗೆ ಮನವಿ
ಹಾವುಗಳ ಬಗೆಗಿನ ಮೂಢನಂಬಿಕೆ ಬಿಟ್ಟು ರಕ್ಷಣೆ ಮಾಡಿ: ಎಸ್ಪಿ ಲಕ್ಷ್ಮಣ ನಿಂಬರಗಿ