ಹಿಂದೂ- ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದ ಮಲ್ಲಿಗೆ ನಗರ!

KannadaprabhaNewsNetwork |  
Published : Sep 29, 2026, 02:30 AM IST
ಹೂವಿನಹಡಗಲಿ ಪಟ್ಟಣದ ಇಸ್ಲಾಂಪೇಟೆಯಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆಯಲ್ಲಿ ನೆರೆದಿದ್ದ ಜನಸ್ತೋಮ. | Kannada Prabha

ಸಾರಾಂಶ

ಸೋಮವಾರ ಬೆಳಗ್ಗೆ ಕೊರವರ ಓಣಿಯ ಗಣೇಶ ಮೂರ್ತಿಗೆ ಮುಸ್ಲಿಮರು ಹೂವಿನಹಾರ, ಹಣ್ಣು ಕಾಯಿ ತಂದು ಕರ್ಪೂರ ಬೆಳಗಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದರು.

ಹೂವಿನಹಡಗಲಿ: ಗಣೇಶ ಚತುರ್ಥಿಯ ಬಳಿಕ ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಇಲ್ಲಿಯ ಇಸ್ಲಾಂ ಪೇಟೆಯಲ್ಲಿ ಕೆಲ ಮುಸ್ಲಿಂ ಮಹಿಳೆಯರು, ಯುವಕರು ರಸ್ತೆ ಮಧ್ಯೆ ಕುಳಿತು ಅಡ್ಡಿಪಡಿಸಿದ್ದ ಹಿನ್ನೆಲೆಯಲ್ಲಿ ಇಲ್ಲಿಯ ಪಟ್ಟಣದ ಕೊರವರ ಓಣಿಯಲ್ಲಿ ಮರು ಪ್ರತಿಷ್ಠಾಪನೆಗೊಂಡ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ, ಇಸ್ಲಾಂಪೇಟೆಯಲ್ಲಿ ಸಕಲ ಮಂಗಳ ವಾದ್ಯಗಳೊಂದಿಗೆ ಸಡಗರ ಸಂಭ್ರಮದಿಂದ ಶಾಂತಿಯುತವಾಗಿ ಜರುಗಿತು.

ಸೋಮವಾರ ಬೆಳಗ್ಗೆ ಕೊರವರ ಓಣಿಯ ಗಣೇಶ ಮೂರ್ತಿಗೆ ಮುಸ್ಲಿಮರು ಹೂವಿನಹಾರ, ಹಣ್ಣು ಕಾಯಿ ತಂದು ಕರ್ಪೂರ ಬೆಳಗಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದರು.

ಕೊರವರ ಓಣಿ ಗಣೇಶ ಮೂರ್ತಿ ವಿಸರ್ಜನೆಗೆ ಇಸ್ಲಾಂಪೇಟೆ ಮುಸ್ಲಿಂ ಮಹಿಳೆಯರು, ಕೆಲವು ಯುವಕರು ರಸ್ತೆ ಮಧ್ಯೆ ಕುಳಿತು ಅಡ್ಡಿಪಡಿಸಿ ಪ್ರತಿಭಟಿಸಿದ್ದ ಪ್ರಕರಣ ಗಮನ ಸೆಳೆದಿತ್ತು. ಇದು ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆಗೆ ದೊಡ್ಡ ಸವಾಲಾಗಿತ್ತು. ಶಾಸಕ ಕೃಷ್ಣನಾಯ್ಕ, ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ, ಎಸ್ಪಿ ಎಸ್‌. ಜಾಹ್ನವಿ ನೇತೃತ್ವದಲ್ಲಿ, ಹಿಂದೂ-ಮುಸ್ಲಿಂ ಸಮುದಾಯಗಳ ನಿರಂತರ ಸಭೆ ಮಾಡಿ ಚರ್ಚಿಸಿ, ಗಣೇಶ ಮೂರ್ತಿ ಮರು ಪ್ರತಿಷ್ಠಾಪನೆ ಮಾಡಲಾಗಿತ್ತು. ಸೆ. 28ರಂದು ಕೊರವರ ಓಣಿ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆಯು ಹಿಂದೂ ಮಹಾ ಗಣೇಶ ಮೆರವಣಿಗೆಯೊಂದಿಗೆ ಸಾಗಿತು.

ಪಟ್ಟಣದ ಇಸ್ಲಾಂಪೇಟೆಯಲ್ಲಿ ಗಲಾಟೆಯಾಗಿದ್ದ ಜಾಗದಲ್ಲೇ ಮುಸ್ಲಿಮರು ಗಣೇಶ ಮೂರ್ತಿಗೆ ಮಲ್ಲಿಗೆ ಹೂವಿನಹಾರ ಹಾಕಿ ಜಯಘೋಷ ಕೂಗಿದರು.

ಗಣೇಶ ವಿಸರ್ಜನೆ ಮೆರವಣಿಗೆಯು ಕೊರವರ ಓಣಿ, ಡಾ. ಬಿ.ಆರ್‌. ಅಂಬೇಡ್ಕರ್‌ ನಗರ, ಇಸ್ಲಾಂಪೇಟೆ, ಜಾಮೀಯಾ ಮಸೀದಿ ಪಕ್ಕದಿಂದ ಮುಖ್ಯ ರಸ್ತೆ ಮೂಲಕ, ತೇರು ಹನುಮಪ್ಪ ದೇವಸ್ಥಾನದ ಹಿಂದೂ ಮಹಾಗಣಪತಿ ಮೆರವಣಿಗೆಯಲ್ಲಿ ಬಂದು ಸೇರಿತು. ಮೆರವಣಿಗೆಯಲ್ಲಿ ಸದ್ಗುರು ಶಿವಯೋಗಿ ಹಾಲಸ್ವಾಮಿ ಮಠದ ಅಭಿನವ ಹಾಲ ವೀರಪ್ಪಜ್ಜ, ಶಾಸಕ ಕೃಷ್ಣನಾಯ್ಕ, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಎಂ. ನಾಗಭೂಷಣ, ಈಟಿ ಲಿಂಗರಾಜ, ಸೊಪ್ಪಿನ ಮಂಜುನಾಥ, ಹಕ್ಕಂಡಿ ಮಹದೇವ, ಪುತ್ರೇಶ, ವಿಲ್ಸನ್‌ ಸ್ವಾಮಿ, ಜೆ. ಶಿವರಾಜ ಹಾಗೂ ಸಾವಿರಾರು ಜನರು ಸೇರಿದ್ದರು.

ಎಸ್ಪಿ ಜಾಹ್ವವಿ ನೇತೃತ್ವದಲ್ಲಿ 3 ಡಿವೈಎಸ್ಪಿ, 11 ಸಿಪಿಐ, 31 ಪಿಎಸ್‌ಐ, 66 ಎಎಸ್‌ಐ, 492 ಮುಖ್ಯ ಪೇದೆ, 150 ಗೃಹ ರಕ್ಷಕ ದಳ, 2 ಕೆಎಸ್‌ಆರ್‌ಪಿ, 4 ಡಿಎಆರ್‌ ಸೇರಿದಂತೆ ಸಾವಿರಕ್ಕೂ ಹೆಚ್ಚು ಪೊಲೀಸ್‌ ನಿಯೋಜಿಸಲಾಗಿತ್ತು.

ಹಿಂದೂ ಮಹಾಗಣಪತಿ ಶೋಭಾಯಾತ್ರೆಯು ಸಂಜೆ 4 ಗಂಟೆಗೆ ಆರಂಭಗೊಂಡಿತ್ತು. ತಾಲೂಕಿನ ವಿವಿಧ ಕಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಯುವಕರು ಬಂದು ಸೇರಿದ್ದರು. ಇಡೀ ಪಟ್ಟಣ ಕೇಸರಿಮಯವಾಗಿತ್ತು. ಸಮಾಳ ನಂದಿಕೋಲು, ಡಿಜೆ ಸದ್ದು ಹಾಗೂ ಹಾಡಿಗೆ ಯುವಕರು ಕುಣಿದು ಕುಪ್ಪಳಿಸಿದರು.

ಪಟ್ಟಣದಲ್ಲಿರುವ ಜಾಮೀಯಾ ಮಸೀದಿ, ಯಮನೂರು ಸ್ವಾಮಿ ದರ್ಗಾ, ಗೌಸಿಯಾ ಮಸೀದಿ, ಮಲ್ಲಿನಕೆರೆ ಮಠದ ಮುಂಭಾಗದ ದರ್ಗಾ ಸೇರಿದಂತೆ ಎಲ್ಲ ಕಡೆಗಳಲ್ಲಿರುವ ಮಸೀದಿ, ದರ್ಗಾಗಳಿಗೆ ಸೂಕ್ತ ಬಂದೋಬಸ್ತ್‌ ಮಾಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೈದ್ಯರ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ಕ್ರಮ ಅಗತ್ಯ: ರಮಿತಾ
ಮೂಡ್ಲಕಟ್ಟೆ ನರ್ಸಿಂಗ್‌ ಕಾಲೇಜಿನಿಂದ ಆತ್ಮಹತ್ಯೆ ತಡೆ ಮಾಸಾಚರಣೆ