ಧಾರವಾಡ: ನಿವೃತ್ತ ಪ್ರಧಾನ ಜಿಲ್ಲಾ ನ್ಯಾಯಾಧೀಶ ಎಸ್.ಬಿ.ವಸ್ತ್ರಮಠ ಬಡತನದಲ್ಲಿ ಹುಟ್ಟಿ ಅರಳಿದ ಮಲ್ಲಿಗೆಯ ಹೂವು. ಜೀವನದಲ್ಲಿ ದೊಡ್ಡ ಗುರಿ ಇಟ್ಟುಕೊಂಡು ಸಾಧನೆ ಮುಡಿಗೇರಿಸಿಕೊಂಡಿದ್ದಾರೆ. ಅವರ ವ್ಯಕ್ತಿತ್ವ ಇತರರಿಗೆ ಮಾದರಿ ಎಂದು ಶಿರಹಟ್ಟಿ ಸಂಸ್ಥಾನ ಮಠದ ಫಕ್ಕೀರ ಸಿದ್ಧರಾಮ ಸ್ವಾಮಿಗಳು ಹೇಳಿದರು.
ಎಸ್.ಬಿ. ವಸ್ತ್ರಮಠ ಅವರು ಆತ್ಮಸಾಕ್ಷಿಯಾಗಿ ಮತ್ತು ಮನಸ್ಸು ಸಾಕ್ಷಿಯಾಗಿ ಬದುಕಿದವರು. ಪ್ರಾಮಾಣಿಕವಾಗಿ ಕಾಯಕ ಮಾಡಿ, ಸುಮಾರು ವರ್ಷದವರೆಗೆ ನ್ಯಾಯಾಧೀಶರಾಗಿ ಕೆಲಸ ಮಾಡಿ, ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಅವರಿಗೆ ಬಾಲ್ಯದ ಬಡತನವೇ ಜೀವನದ ಪಾಠ ಕಲಿಸಿದೆ. ಧರ್ಮದ ಮಾರ್ಗದಲ್ಲಿ ನಡೆದು, ವೃತ್ತಿ ಮೌಲ್ಯ ಕಾಪಾಡಿಕೊಂಡು ಬಂದಿದ್ದಾರೆ. ಅವರ ವೃತ್ತಿ ಮತ್ತು ಬದುಕು ಇತರರಿಗೆ ಮಾದರಿ ಆಗಿದೆ ಎಂದು ಸ್ವಾಮೀಜಿ ಶ್ಲಾಘಿಸಿದರು.
ಮುರಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬ ಮನುಷ್ಯನು ಭೂಮಿಯ ಹಲವು ವರ್ಷಗಳ ಕಾಲ ಬದುಕುತ್ತಾನೆ. ಹೇಗೆ ಬದುಕಬೇಕು ಎಂಬುವುದು ಬಸವಣ್ಣವರು ತಮ್ಮ ವಚನದಲ್ಲಿ ಹೇಳಿದ್ದಾರೆ. ಆತ್ಮ ಸಾಕ್ಷಿಯಾಗಿ ಹಾಗೂ ಮನಸಾಕ್ಷಿಯಾಗಿ ಬದುಕಬೇಕು. ಆ ಬದುಕನ್ನು ವಸ್ತ್ರಮಠ ತೋರಿಸಿಕೊಟ್ಟಿದ್ದಾರೆ ಎಂದರು.ಅಭಿನಂದನೆ ಸ್ವೀಕರಿಸಿದ ನ್ಯಾಯಾಧೀಶ ಎಸ್.ಬಿ. ವಸ್ತ್ರಮಠ, ಅನೇಕ ಕಷ್ಟ-ಸುಖ ನೋಡಿದ್ದೇನೆ. ಒಂದು ರೂಪಾಯಿಯಿಂದ ಹಿಡಿದು ₹500 ವರೆಗಿನ ಚಹಾ ಕುಡಿದಿದ್ದೇನೆ. ಮೊದಲು ಒಂದೇ ರುಪಾಯಿಯಲ್ಲಿ ಜೀವನದ ಸಂತಸ ಕಂಡಿದ್ದು, ಈಗ ಲಕ್ಷಗಟ್ಟಲೇ ಸಂಬಳ ಇದ್ದರೂ ನೆಮ್ಮದಿ ಇಲ್ಲದಾಗಿದೆ. ಬಡತನದಲ್ಲಿ ಬೆಂದ ನಾನು ಮುರಘಾಮಠದಲ್ಲಿ ವಿದ್ಯಾಭ್ಯಾಸ ಮಾಡಿ ವಕೀಲ ವೃತ್ತಿ ಮಾಡಿದ್ದೇನೆ.
ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಿದ್ದೇನೆ. ಧರ್ಮವನ್ನು ಅಷ್ಟೇ ನಂಬಿದ್ದೇನೆ. ಆದ್ದರಿಂದ ಈಗಿನ ಯುವ ವಕೀಲರು ಕಾನೂನು ಮತ್ತು ಧರ್ಮದ ಮಾರ್ಗದಲ್ಲಿ ಕೆಲಸ ಮಾಡಿ ಎಂದು ಸಲಹೆ ನೀಡಿದರು.ಕೃಷಿ ಮಾರಾಟ ಇಲಾಖೆಯ ರಾಜ್ಯ ನಿರ್ದೇಶಕ ಶಿವಾನಂದ ಕಾಪಶಿ ಮತ್ತು ನ್ಯಾಯವಾದಿ ಎ.ಸಿ. ಚಾಕಲಬ್ಬಿ ಇದ್ದರು. ದೀಪಾ ಪತ್ತಾರ ಪ್ರಾರ್ಥಿಸಿದರು. ಪ್ರೊ.ಸಿದ್ದಯ್ಯ ವಸ್ತ್ರಮಠ ಸ್ವಾಗತಿಸಿದರು. ವಿನಾಯಕ ವಸ್ತ್ರಮಠ ವಂದಿಸಿದರು.