ಹೂವಿನಹಡಗಲಿ: ಹಸಿರುಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ್ ರಾಂ, ವಿದ್ಯಾರ್ಥಿ ದೆಸೆಯಲ್ಲೇ ಮೌಢ್ಯ, ಕಂದಾಚಾರ ಮತ್ತು ಅಸ್ಪೃಶ್ಯತೆ ಆಚರಣೆಯ ವಿರುದ್ಧ ಹೋರಾಟ ಮಾಡಿದ್ದರು ಎಂದು ದಲಿತ ಮುಖಂಡ ಎಚ್. ಪೂಜೆಪ್ಪ ಹೇಳಿದರು.
ಕೇವಲ ಕಾಯ್ದೆ, ಕಾನೂನುಗಳಿಂದ ಅಸ್ಪೃಶ್ಯತೆ ನಿವಾರಣೆಯಾಗಲು ಸಾಧ್ಯವಿಲ್ಲ. ಮನುಷ್ಯನ ಮನೋಭಾವನೆ ಬದಲಾವಣೆ ಆಗಬೇಕಿದೆ. ಜತೆಗೆ ದಲಿತ ಸಮುದಾಯದವರು ಉನ್ನತ ಶಿಕ್ಷಣ ಪಡೆದು ಉತ್ತಮ ನಾಗರಿಕರಾಗಬೇಕಿದೆ ಎಂದರು.
ತಾಪಂ ಇಒ ಎಂ. ಉಮೇಶ ಮಾತನಾಡಿ, ಬಾಬು ಜಗಜೀವನ್ ರಾಂ ಅವರು 30 ವರ್ಷಗಳ ಕಾಲ ಸಚಿವರಾಗಿ ಕೆಲಸ ಮಾಡಿದ್ದಾರೆ. ದೇಶ ಆಹಾರ ಕೊರತೆ ಉಂಟಾಗಿದ್ದ ಸಂದರ್ಭದಲ್ಲಿ ಕೃಷಿ ಸಚಿವರಾಗಿದ್ದ ಅವರು, ಹಸಿರು ಕ್ರಾಂತಿಯ ಮೂಲಕ ದೇಶವನ್ನು ಸ್ವಾವಲಂಬಿ ಮಾಡಲು, ಎಂ.ಎಸ್. ಸ್ವಾಮಿನಾಥನ್ ಆಯೋಗ ರಚಿಸಿ, ದೇಶದಲ್ಲಿ ಆಹಾರ ಭದ್ರತೆ ನೀಡಿದ್ದಾರೆ ಎಂದರು.ಈ ದೇಶದ ಕೂಲಿ ಕಾರ್ಮಿಕರ ಸಮಸ್ಯೆಯನ್ನು ಇಟ್ಟುಕೊಂಡು ಹಲವಾರು ಕಾಯ್ದೆ-ಕಾನೂನುಗಳನ್ನು ತಂದಿದ್ದಾರೆ. ಸದ್ಯದಲ್ಲಿ ಜಾರಿಯಲ್ಲಿರುವ ನರೇಗಾ ಯೋಜನೆ ಕೂಡಾ ಅವರ ದೂರದೃಷ್ಟಿಯದ್ದಾಗಿದೆ ಎಂದರು.
ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಹಾಗೂ ಪ್ರಾಚಾರ್ಯ ಎ. ಕೊಟ್ರಗೌಡ ಮಾತನಾಡಿ, ಸಮಾಜದಲ್ಲಿ ಇಂದಿಗೂ ಅಸ್ಪೃಶ್ಯತೆ ಸೇರಿದಂತೆ ಇತರ ಮೌಢ್ಯಗಳು ಆಚರಣೆಯಲ್ಲಿ ಇರುವುದು ತೀರಾ ದುರಂತದ ಸಂಗತಿ. ನಮ್ಮ ಮನೋಭಾವನೆ ಬದಲಾವಣೆ ಮಾಡಿಕೊಳ್ಳುವ ಅಗತ್ಯವಿದೆ ಎಂದರು.
ಪಿ. ನಿಂಗಪ್ಪ, ಆನಂದ, ಗುಡದಯ್ಯ, ಸಮಾಜ ಕಲ್ಯಾಣಾಧಿಕಾರಿ ಆನಂದ್ ಡೊಳ್ಳಿನ್ ಇತರರಿದ್ದರು.