ಡೆಲಿವರಿ ಬಾಯ್‌ಗಳ ಮೇಲೆ ಜವರಾಯನ ಅಟ್ಟಹಾಸ!

KannadaprabhaNewsNetwork |  
Published : Jul 10, 2026, 12:45 AM IST
ಮಗನ ಸಾವಿನಿಂದಾಗಿ ಕಣ್ಣೀರು ಸುರಿಸುತ್ತಿರುವ ಮೃತ ಮಂಜುನಾಥ ಚುಳಕಿ ಅವರ ತಾಯಿ. | Kannada Prabha

ಸಾರಾಂಶ

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಅರಬೈಲ್‌ ಘಾಟ್‌ನಲ್ಲಿ ಬುಧವಾರ ರಾತ್ರಿ ಕ್ರೂಸರ್‌ ಹಾಗೂ ಲಾರಿ ನಡುವೆ ನಡೆದ ಅಪಘಾತದಲ್ಲಿ ಮೃತಪಟ್ಟ ಏಳು ಯುವಕರು ಧಾರವಾಡ ಮೂಲದವರು. ಮಕ್ಕಳ ಸಾವಿನ ಸುದ್ದಿ ಕೇಳಿ ಕುಟುಂಬಸ್ಥರ ಎದೆ ಛಿದ್ರಗೊಂಡಿದೆ.

ಧಾರವಾಡ:

ಸ್ವಿಗ್ಗಿ, ಜೋಮೋಟೋ ಡೆಲಿವರಿ ಬಾಯಿಗಳಾಗಿ ಹಗಳು-ರಾತ್ರಿಯನ್ನದೆ ದುಡಿದು ಸಂಸಾರದ ನೊಗ ಹೊತ್ತಿದ್ದ ಯುವಕರು ಜವರಾಯನ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. ಇದರಿಂದ ಆ ಯುವಕರ ಕುಟುಂಬಸ್ಥರಿಗೆ ತೀವ್ರ ಆಘಾತ ತಂದಿರುವ ಜತೆಗೆ ಮನೆಯ ಆಧಾರ ಸ್ತಂಭವೇ ಕುಸಿದಿದೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಅರಬೈಲ್‌ ಘಾಟ್‌ನಲ್ಲಿ ಬುಧವಾರ ರಾತ್ರಿ ಕ್ರೂಸರ್‌ ಹಾಗೂ ಲಾರಿ ನಡುವೆ ನಡೆದ ಅಪಘಾತದಲ್ಲಿ ಮೃತಪಟ್ಟ ಏಳು ಯುವಕರು ಧಾರವಾಡ ಮೂಲದವರು. ಮಕ್ಕಳ ಸಾವಿನ ಸುದ್ದಿ ಕೇಳಿ ಕುಟುಂಬಸ್ಥರ ಎದೆ ಛಿದ್ರಗೊಂಡಿದೆ.

ಮಧ್ಯರಾತ್ರಿ ಸುಮಾರು 1ರ ಸುಮಾರಿಗೆ ಕ್ರೂಸರ್‌ಗೆ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಕ್ರೂಸರ್ ಮುಂಭಾಗದಲ್ಲಿ ಕೂತಿದ್ದ ಮಂಜುನಾಥ ಚುಳಕಿ, ಬಸವರಾಜ, ಅಭಿಷೇಕ್, ಸಚಿನ್ ಹೆಬ್ಬಳ್ಳಿ, ಅಕ್ಷಯ, ಅಭಿಷೇಕ ಸ್ಥಳದಲ್ಲಿಯೇ ಮೃತಪಟ್ಟರೆ, ಸಚಿನ ಹೆಬ್ಬಳ್ಳಿ ಎಂಬಾತ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾನೆ. ಹಿಂಭಾಗದಲ್ಲಿ ಕೂತಿದ್ದ ಶಿವರಾಜ ಹಾಗೂ ಚೆನ್ನಬಸವ ಮಾತ್ರ ಪವಾಡ ಸದೃಶ್ಯದಂತೆ ಪಾರಾಗಿದ್ದಾರೆ.

ಮೂರ್ಛೆ ಹೋದ ತಾಯಿ:

ಮೃತ ಮಂಜುನಾಥ ಚುಳಕಿ ಅವರ ಶಿವಗಂಗಾ ಬಡಾವಣೆಯ ಮನೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಆತನ ತಾಯಿ ಮಗನ ಸಾವಿನ ಸುದ್ದಿ ಕೇಳಿ ಅತ್ತು-ಅತ್ತು ಮೂರ್ಛೆ ಹೋದರು. ಅವರನ್ನು ಸಂತೈಸುವಲ್ಲಿ ನೆರೆಹೊರೆಯವರು ಹರಸಾಹಸಪಟ್ಟರು. ಕಳೆದ ಒಂದು ವರ್ಷದ ಹಿಂದಷ್ಟೇ ಮೃತನ ತಂದೆ ಮೃತಪಟ್ಟಿದ್ದು, ಈತನೇ ಮನೆಯ ಜವಾಬ್ದಾರಿ ನೋಡಿಕೊಳ್ಳುತ್ತಿದ್ದ. ಇದೀಗ ಆತನು ಮೃತಪಟ್ಟಿದ್ದು ನಮಗಿನ್ನಾರಿದ್ದಾರೆ ಎಂದು ತಾಯಿ ಹಾಗೂ ಸಹೋದರಿ ಕಣ್ಣೀರು ಹಾಕುತ್ತಿದ್ದ ದೃಶ್ಯ ಮನಕಲಕುವಂತಿತ್ತು.

ಅದೇ ರೀತಿ ಮೃತರಲ್ಲಿ ಒಬ್ಬರಾದ ಅಕ್ಷಯನ ಚಿಕ್ಕಪ್ಪನ ಮಗ ಶಿವಾನಂದ ಘಟನೆ ಸುದ್ದಿ ಕೇಳಿ ಆಘಾತದಲ್ಲಿದ್ದರು. ತುಂಬಾ ಒಳ್ಳೆಯ ಹುಡುಗ, ಆತನಿಂದಲೇ ಮನೆ ನಡೆಯುತ್ತಿತ್ತು. ಏಕಾಏಕಿ ಇಂತಹ ದುರ್ಘಟನೆಯಿಂದ ಅಕ್ಷಯ ಇಲ್ಲ ಎಂಬುದನ್ನು ನಂಬಲಾಗುತ್ತಿಲ್ಲ ಎಂದು ನೋವು ತೋಡಿಕೊಂಡರು.

ನಿತ್ಯ ಬರುತ್ತಿದ್ದ ಯುವಕರು:

ಮೃತಪಟ್ಟ ಎಲ್ಲ ಯುವಕರು ಆರ್ಡರ್‌ ಪಡೆಯಲು ನಿತ್ಯ ಸಾಯಿ ಫಾಸ್ಟ್‌ಫುಡ್‌ಗೆ ಬಂದು ಹೋಗುತ್ತಿದ್ದರು. ಅಂತೆಯೇ, ಈ ಪೈಕಿ ಬಹುತೇಕರು ಸಾಯಿ ಫಾಸ್ಟ್‌ಪುಡ್‌ನಲ್ಲಿ ರಾತ್ರಿ 10ರ ವರೆಗೆ ಆರ್ಡರ್‌ ತೆಗೆದುಕೊಂಡು ಹೋಗಿದ್ದಾರೆ. ಹೀಗೆ ಎದ್ದು ಹೋದ ಯುವಕರು ಮರಳಿ ಬಾರದಿರುವುದು ನೋವು ತಂದಿದೆ. ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಕೊಡಲಿ ಎಂದು ಹೇಳುವಾಗ ಸಾಯಿ ಫಾಸ್ಟ್‌ಪುಡ್ ಮಾಲೀಕ ದೀಪಕ ಪಾಟೀಲ ಭಾವುಕರಾದರು.

ದುಬೈನಿಂದ ಬಂದಿದ್ದ:

ಇನ್ನು, ಈ ದುರ್ಘಟನೆಯಲ್ಲಿ ಮೃತಪಟ್ಟ ಸಚಿನ ಹೆಬ್ಬಳ್ಳಿ ಕೆಲ ವರ್ಷಗಳ ಕಾಲ ದುಬೈನಲ್ಲಿದ್ದು, ಅಲ್ಲಿಯ ಕೆಲಸ ಬಿಟ್ಟು 20 ದಿನಗಳ ಹಿಂದಷ್ಟೇ ಧಾರವಾಡಕ್ಕೆ ಬಂದಿದ್ದ. ಆರ್ಥಿಕ ಸಮಸ್ಯೆಯಿಂದಾಗಿ ಸ್ವಿಗ್ಗಿಯಲ್ಲಿ ಕೆಲಸ ಮಾಡುತ್ತಿದ್ದ. ಬುಧವಾರ ರಾತ್ರಿ ಮನೆಗೆ ಬಂದು ಸ್ನೇಹಿತರೆಲ್ಲರೂ ಟೂರ್‌ಗೆ ಹೋಗುತ್ತಿದ್ದೇವೆ ಎಂದು ಹೇಳಿ ಹೋದವ ಮರಳಿ ಬಂದಿಲ್ಲ. ಆತ ದುಬೈನಲ್ಲೇ ಇದ್ದಿದ್ದರೆ ಬದುಕುತ್ತಿದ್ದ ಎಂದು ಸಚಿನ್ ತಾಯಿ ಈರಮ್ಮ ಮಗನ ಸಾವಿಗೆ ಕಣ್ಣೀರಿಟ್ಟರು.

ದೇವರ ಪ್ರಾರ್ಥನೆ ಫಲಿಸಲಿಲ್ಲ:

ಧಾರವಾಡದಿಂದ ಬೆಳಗ್ಗೆ ಗೋಕರ್ಣ ಹೋಗಿ ಅಲ್ಲಿಂದ ಮುರ್ಡೇಶ್ವರ, ಉಡುಪಿ, ಮಂಗಳೂರು ಹಾಗೂ ಧರ್ಮಸ್ಥಳಕ್ಕೆ ಹೋಗಲು ಯೋಜನೆ ಹಾಕಿದ್ದ ಮೃತ ಯುವಕರು ಕರ್ನಾಟಕ ಕಾಲೇಜು ವೃತ್ತದ ಬಳಿ ಗಣಪತಿ ದೇವಸ್ಥಾನದ ಬಳಿ ವಾಹನ ನಿಲ್ಲಿಸಿ ದೇವರಲ್ಲಿ ಬೇಡಿಕೊಂಡು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ದುರಾದೃಷ್ಟವಶಾತ್‌ ಯಾವುದೇ ಆತಂಕ, ತೊಂದರೆ ಇಲ್ಲದೇ ಪ್ರವಾಸಕ್ಕೆ ಹೋಗಿ ಬರುತ್ತೇವೆಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದರೂ ಅದು ಫಲಿಸಲಿಲ್ಲ ಎನ್ನುವುದೇ ಖೇದಕರ ಸಂಗತಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಮ್ಮವರ ಹೆಣ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು!
ನಾಳೆ ಬೆಂಗಳೂರಿನಲ್ಲಿ ಸಿಎಂ, ಡಿಸಿಎಂಗೆ ಸನ್ಮಾನ ಕಾರ್ಯಕ್ರಮ