ಜಯದೇವ ಅಸ್ಪತ್ರೆಗೆ ಸ್ವತಂತ್ರ ಅಧಿಕಾರ

KannadaprabhaNewsNetwork |  
Published : Jun 18, 2026, 03:00 AM IST
5 | Kannada Prabha

ಸಾರಾಂಶ

ಆಸ್ಪತ್ರೆಯಲ್ಲಿ ಪರಿಶೀಲಿಸಿದಾಗ ಹಿಂದಿನ ವರ್ಷಗಳಲ್ಲಿ 4 ರಿಂದ 6 ರಷ್ಟು ಮರಣ ಪ್ರಮಾಣ ಇದೆ.

ಕನ್ನಡಪ್ರಭ ವಾರ್ತೆ ಮೈಸೂರುಜಯದೇವ ಹೃದ್ರೋಗ ಆಸ್ಪತ್ರೆಗಳ ಆಡಳಿತವನ್ನು ವಿಕೇಂದ್ರೀಕರಣಗೊಳಿಸಲು ತೀರ್ಮಾನಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲ ತಿಳಿಸಿದರು.ನಗರದ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಒಂದೇ ದಿನ 11 ಜನ ಮೃತಪಟ್ಟಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬುಧವಾರ ಸಂಜೆ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಮಾತನಾಡಿ, ಆಸ್ಪತ್ರೆ ಆಡಳಿತವು ಬೆಂಗಳೂರಿನಲ್ಲಿ ಕೇಂದ್ರೀಕೃತವಾಗಿತ್ತು. ಅದನ್ನು ಆಸ್ಪತ್ರೆಗಳಿಗೆ ಸ್ವತಂತ್ರ ಅಧಿಕಾರ ನೀಡಲು ನಿರ್ಧರಿಸಿದ್ದೇನೆ. ಆಸ್ಪತ್ರೆಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಮತ್ತು ಕಾರ್ಯಕ್ಷಮತೆ ಹೆಚ್ಚಿಸಲು ಈ ತೀರ್ಮಾನ ಕೈಗೊಳ್ಳಲಾಗಿದೆ. ಮೈಸೂರು ಮತ್ತು ಕಲ್ಬುರ್ಗಿ ಆಸ್ಪತ್ರೆಗಳಿಗೆ ಸ್ವಾಯತ್ತತೆ ಹಾಗೂ ಹೆಚ್ಚಿನ ಆರ್ಥಿಕ ಸ್ವಾತಂತ್ರ್ಯ ನೀಡಲಾಗುವುದು ಎಂದು ಹೇಳಿದರು.ಆಸ್ಪತ್ರೆಯಲ್ಲಿ ಪರಿಶೀಲಿಸಿದಾಗ ಹಿಂದಿನ ವರ್ಷಗಳಲ್ಲಿ 4 ರಿಂದ 6 ರಷ್ಟು ಮರಣ ಪ್ರಮಾಣ ಇದೆ. ಇದು ಐಸಿಎಂಆರ್ ಮಾನದಂಡಕ್ಕಿಂತ ಕಡಿಮೆ ಇದೆ. ಹೀಗಾಗಿ ಜನರು ಆತಂಕ ಪಡುವ ಅಗತ್ಯವಿಲ್ಲ. ಆದರೂ 11 ಜನರ ಸಾವಿನ ಕುರಿತು ಪ್ರತ್ಯೇಕವಾಗಿ ಪರಿಶೀಲಿಸಿ ವರದಿ ನೀಡುವುದು ಹಾಗೂ ಪ್ರತಿನಿತ್ಯ ಸಾವಿನ ಕಾರಣದ ಕುರಿತು ಚರ್ಚೆ ನಡೆಸಿ, ಅವರನ್ನು ಉಳಿಸಲು ಸಾಧ್ಯವಿತ್ತೇ ಎಂಬುದರ ಬಗ್ಗೆಯೂ ಯೋಚಿಸುವಂತೆ ಸೂಚಿಸಿರುವುದಾಗಿ ಅವರು ತಿಳಿಸಿದರು.ಸಾಮಾಜಿಕ ಮಾಧ್ಯಮದಲ್ಲಿ ಬರುವ ಸುದ್ದಿಯಿಂದ ಜನ ಭಯಭೀತರಾಗಿದ್ದಾರೆ. ತೊಂದರೆಗಳನ್ನು ನಮಗೆ ತಿಳಿಸಿ. ಸುಳ್ಳು ಸುದ್ದಿಗಳ ಮೇಲೆ ಕ್ರಮ ಕೈಗೊಳ್ಳಲು ಗೃಹ ಸಚಿವರ ಗಮನಕ್ಕೆ ತರಲಾಗಿದೆ. ಸರ್ಕಾರಿ ಆಸ್ಪತ್ರೆಯ ಮೇಲಿನ ವಿಶ್ವಾಸ ಜನರಿಗೆ ಕಡಿಮೆ ಆದರೆ ಖಾಸಗಿ ಆಸ್ಪತ್ರೆಗಳು ಇದರ ಲಾಭ ಪಡೆಯುತ್ತವೆ. ನಾವು ಜಗತ್ತಿಗೆ ಮಾದರಿ ಚಿಕಿತ್ಸೆ ಪರಿಚಯಿಸಿದ್ದೇವೆ. ಇದರಿಂದ ಖಾಸಗಿಯವರೂ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುವಂತಾಗಿದೆ ಎಂದರು.ಸಾರ್ವಜನಿಕರು ಹಾಗೂ ರೋಗಿಗಳು ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವಿಲ್ಲ ಆಸ್ಪತ್ರೆಯಲ್ಲಿ ರೋಗಿಗಳಿಗೆ ಉತ್ತಮ ಸೇವೆ ಒದಗಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.ದೇಶದ ಪ್ರಮುಖ ಕಾರ್ಡಿಯಾಕ್ ತೃತೀಯ ಹಂತದ ಆರೈಕೆ ಆಸ್ಪತ್ರೆಗಳಲ್ಲಿ ಮಾಸಿಕ ಮರಣ ಪ್ರಮಾಣದ ರಾಷ್ಟ್ರೀಯ ಸರಾಸರಿ ಶೇ. 9 ರಿಂದ 11 ರಷ್ಟಿದೆ. ಆದರೆ, ನಮ್ಮ ಬೆಂಗಳೂರು, ಮೈಸೂರು ಹಾಗೂ ಕಲ್ಬುರ್ಗಿಯ ಜಯದೇವ ಆಸ್ಪತ್ರೆಗಳಲ್ಲಿ ಈ ಪ್ರಮಾಣ ಕೇವಲ ಶೇ. 4 ರಿಂದ 6ರಷ್ಟಿದೆ. ಇದು ರಾಷ್ಟ್ರೀಯ ಸರಾಸರಿಗಿಂತಲೂ ಅತ್ಯಂತ ಉತ್ತಮವಾಗಿದೆ ಎಂದು ತಿಳಿಸಿದರು.ನೆನ್ನೆ ಒಂದೇ ದಿನ 11 ಸಾವುಗಳು ಸಂಭವಿಸಿರುವುದು ಅಸಮಾಧಾನ ತಂದಿದ್ದರೂ, ದಾಖಲಾದ ರೋಗಿಗಳು ಅತ್ಯಂತ ಗಂಭೀರ ಸ್ಥಿತಿಯಲ್ಲಿದ್ದ ಕಾರಣ ಹೀಗಾಗಿದೆ. ಈ ಬಗ್ಗೆ ತನಿಖೆ ನಡೆಸಿ ''''''''ಮೂರನೇ ವ್ಯಕ್ತಿಯಿಂದ ಪರಿಶೀಲಿಸಿ ವರದಿ ನೀಡುವಂತೆ ವೈದ್ಯರ ಸಮಿತಿಗೆ ಸೂಚಿಸಲಾಗಿದೆ ಎಂದರು.ಜಯದೇವ ಆಸ್ಪತ್ರೆ ಇಡೀ ದೇಶಕ್ಕೆ ಮಾದರಿಯಾಗಿದೆ. ಇಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ₹ 2 ರಿಂದ ₹ 3 ಲಕ್ಷ ವೆಚ್ಚವಾಗುವ ಸ್ಟಂಟ್ ಚಿಕಿತ್ಸೆಯನ್ನು ಇಲ್ಲಿ ಕೇವಲ ₹ 60 ಸಾವಿರಕ್ಕೆ ನೀಡಲಾಗುತ್ತಿದೆ. ಇಂತಹ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ನಕಾರಾತ್ಮಕ ಸುದ್ದಿ ಹರಡಿದರೆ ಬಡ ಜನರಿಗೆ ಅನ್ಯಾಯವಾಗುತ್ತದೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಲಾಭವಾಗುತ್ತದೆ ಎಂದರು.ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿಗಳ ಕೊರತೆಯನ್ನು ನೀಗಿಸಲು ಈಗಾಗಲೇ ಬೆಂಗಳೂರು-ಮೈಸೂರಿಗೆ 10 ಮತ್ತು ಕಲ್ಬುರ್ಗಿಗೆ 6 ಕಾರ್ಡಿಯಾಲಜಿಸ್ಟ್ ಸೇರಿದಂತೆ ಹಲವು ಹುದ್ದೆಗಳ ಭರ್ತಿಗೆ ಕರೆ ನೀಡಲಾಗಿದೆ. ಇಡೀ ರಾಜ್ಯದಲ್ಲಿ 56,000 ಹುದ್ದೆಗಳ ಭರ್ತಿಗೆ ಕಾಲಮಿತಿ ನಿಗದಿಪಡಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಸರ್ಕಾರಿ ವೈದ್ಯಕೀಯ ಕಾಲೇಜು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಕ್ಯಾನ್ಸರ್ ಆಸ್ಪತ್ರೆ ನಿರ್ಮಿಸುವ ಸರ್ಕಾರದ ಕನಸು ಶೀಘ್ರದಲ್ಲೇ ನನಸಾಗಲಿದೆ ಎಂದು ಸಚಿವರು ಭರವಸೆ ನೀಡಿದರು.ಮಾಧ್ಯಮ ಮಿತ್ರರು ಯಾವುದೇ ಗೊಂದಲಗಳಿದ್ದರೆ ನೇರವಾಗಿ ಆಸ್ಪತ್ರೆಯ ನಿರ್ದೇಶಕರನ್ನು ಅಥವಾ ನನ್ನನ್ನು ಸಂಪರ್ಕಿಸಬೇಕು ಎಂದು ತಿಳಿಸಿದರು.ಶಾಸಕ ಕೆ. ಹರೀಶ್ ಗೌಡ, ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಬಿ. ದಿನೇಶ್, ಮೈಸೂರು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಕೆ.ಎಸ್‌. ಸದಾನಂದ, ಕೆ.ಆರ್. ಆಸ್ಪತ್ರೆ ಡೀನ್ ಡಾ.ಕೆ.ಆರ್. ದಾಕ್ಷಾಯಿಣಿ ಇದ್ದರು.---ಬಾಕ್ಸ್‌ ಸುದ್ದಿಕಚೇರಿ ಅಧೀಕ್ಷಕನಿಗೆ ತರಾಟೆಶ್ರೀ ಜಯದೇವ ಹೃದ್ರೋಗ ಆಸ್ಪತ್ರೆಯ ಕಚೇರಿ ಅಧೀಕ್ಷಕ ನಾಗರಾಜಮೂರ್ತಿಗೆ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌ ಮತ್ತು ಶಾಸಕ ಕೆ. ಹರೀಶ್‌ ಗೌಡ ತರಾಟೆಗೆ ತೆಗೆದುಕೊಂಡರು. ಪರಿಶೀಲನೆ ವೇಳೆ ಕಚೇರಿ ಅಧೀಕ್ಷಕ ನಾಗರಾಜಮೂರ್ತಿ ಅವರ ಬಳಿ ಸಿಬ್ಬಂದಿಯ ಮಾಹಿತಿ ಕೇಳಿದರು. ಅಲ್ಲದೆ ತಮ್ಮ ವಿರುದ್ಧ ಅನೇಕ ದೂರುಗಳು ಬಂದಿರುವುದಾಗಿ ಶಾಸಕ ಕೆ. ಹರೀಶ್‌ ಗೌಡ ಹೇಳಿದರು.

ಈ ಬಗ್ಗೆ ಬೇಸರ ವ್ಯಕ್ತಪಡಿಸಿದ ಸಚಿವ ಶರಣ ಪ್ರಕಾಶ ಪಾಟೀಲ್‌ ಅವರು ನಾಗರಾಜಮೂರ್ತಿ ಅವರನ್ನು ತರಾಟೆಗೆ ತೆಗೆದುಕೊಂಡು, ಇಲ್ಲಿ ನೀವು ಏನು ಕೆಲಸ ಮಾಡುತ್ತಿದ್ದೀರಿ ಹೇಳಿ ಎಂದು ಖಾರವಾಗಿ ಪ್ರಶ್ನಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೃಢ ಸಂಕಲ್ಪ, ನಿರ್ದಿಷ್ಟ ಗುರಿ ಇದ್ದರೆ ಯಶಸ್ಸು ಸಾಧ್ಯ
24 ತಾಸಲ್ಲಿ 11 ಸಾವು- ವೈದ್ಯರ ಕೊರತೆ ಆರೋಪ