ಮೈಸೂರಿನಲ್ಲಿ ಜಯಕವಿ ಗೀತೋತ್ಸವ: ನಾದಬ್ರಹ್ಮ ಹೌಸ್‌ ಫುಲ್‌... !

KannadaprabhaNewsNetwork |  
Published : Sep 10, 2026, 01:15 AM IST
7 | Kannada Prabha

ಸಾರಾಂಶ

ಮೈಸೂರೆಂಬುದು ಸ್ವರ್ಗ ಇದ್ದಂತೆ. ಇಲ್ಲಿನ ಜನರೆಲ್ಲಾ ರಾಜ-ರಾಣಿ- ಯುವರಾಜರಂತೆ ವಾಸಿಸುತ್ತಿದ್ದಾರೆ. ಕನ್ನಡವನ್ನು ಪ್ರೀತಿಸುವ, ಗೌರವಿಸುವ, ಪ್ರೋತ್ಸಾಹಿಸುವ ಅತಿ ಹೆಚ್ಚು ಮನಸ್ಸುಗಳು ಇಲ್ಲಿವೆ. ಇದಕ್ಕಾಗಿಯೇ ಮೈಸೂರು ಅತಿ ಹೆಚ್ಚು ಇಷ್ಟವಾಗುತ್ತದೆ.

ಕನ್ನಡಪ್ರಭ ವಾರ್ತೆ ಮೆಸೂರು

ಕರ್ನಾಟಕ ಸುಗಮ ಸಂಗೀತ ಪರಿಷತ್ ಹಾಗೂ ಶ್ರೀಅನಂತೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ಕವಿ ಜಯಪ್ಪ ಹೊನ್ನಾಳಿ ಅವರ ಕವಿತೆಗಳ ಗೀತ ಗಾಯನ -‘ಜಯಕವಿ ಗೀತೋತ್ಸವ’ವನ್ನು ನಗರದ ಜೆಎಲ್‌ಬಿ ರಸ್ತೆಯ ನಾದಬ್ರಹ್ಮ ಸಭಾಂಗಣದಲ್ಲಿ ಬುಧವಾರ ಸಂಜೆ ಏರ್ಪಡಿಸಲಾಗಿತ್ತು.

ಜಯಪ್ಪ ಹೊನ್ನಾಳಿ ರಚಿಸಿರುವ ಭಾವಗೀತೆಗಳನ್ನು ನಿತಿನ್‌ ರಾಜಾರಾಮ್ ಶಾಸ್ತ್ರೀ, ಡಾ.ಎ.ಡಿ.ಶ್ರೀನಿವಾಸನ್, ರವಿರಾಜ್ ಹಾಸು, ಶ್ರೀಕರ, ಋತ್ವಿಕ್ ರಾಜ್, ಇಂದ್ರಾಣಿ ಅನಂತರಾಮ್, ರಶ್ಮಿ ಚಿಕ್ಕಮಗಳೂರು, ದಿವ್ಯಾ ಸಚ್ಚಿದಾನಂದ, ಹಂಸಿನಿ, ಅಮೂಲ್ಯಾ, ದೀಪಾ ಪತ್ತಾರ್, ಸುಗಂಧಮ್ಮ, ಹಾಗೂ ನಿತಿನ್ ನಾದಾಮೃತದ ವಿದ್ಯಾರ್ಥಿಗಳು ಅದ್ಭುತವಾಗಿ ಹಾಡಿ, ಕಿಕ್ಕಿರಿದು ಸೇರಿದ್ದ ಸಭಿಕರ ಮೆಚ್ಚುಗೆಗೆ ಪಾತ್ರರಾದರು.

ಗಣೇಶ್ ಭಟ್- ಕೀಬೋರ್ಡ್, ಪರಮೇಶ್ವರ ಹೆಗಡೆ-ತಬಲಾ, ಬಾಲು-ಕೊಳಲು ಹಾಗೂ ಕಿರಣ್-ರಿದಂ ಸಾಥ್‌ ನೀಡಿದರು. ಎಡೆಯೂರು ಸಮೀಉಲ್ಲಾ ನಿರೂಪಿಸಿದರು

ಮೈಸೂರೆಂಬ ಸ್ವರ್ಗ...:

ಕಾರ್ಯಕ್ರಮ ಉದ್ಘಾಟಿಸಿದ ಪ್ರಾದೇಶಿಕ ಆಯುಕ್ತರ ಕಚೇರಿಯ ಹೆಚ್ಚುವರಿ ಆಯುಕ್ತ ಡಾ.ಪಿ. ಶಿವರಾಜು ಮಾತನಾಡಿ, ಮೈಸೂರೆಂಬುದು ಸ್ವರ್ಗ ಇದ್ದಂತೆ. ಇಲ್ಲಿನ ಜನರೆಲ್ಲಾ ರಾಜ-ರಾಣಿ- ಯುವರಾಜರಂತೆ ವಾಸಿಸುತ್ತಿದ್ದಾರೆ. ಕನ್ನಡವನ್ನು ಪ್ರೀತಿಸುವ, ಗೌರವಿಸುವ, ಪ್ರೋತ್ಸಾಹಿಸುವ ಅತಿ ಹೆಚ್ಚು ಮನಸ್ಸುಗಳು ಇಲ್ಲಿವೆ. ಇದಕ್ಕಾಗಿಯೇ ಮೈಸೂರು ಅತಿ ಹೆಚ್ಚು ಇಷ್ಟವಾಗುತ್ತದೆ ಎಂದರು.

ಈ ವಿಶೇಷ ಕಾರ್ಯಕ್ರಮದ ಆಯೋಜಿಸಿದ್ದ ಕರ್ನಾಟಕ ಸುಗಮ ಸಂಗೀತ ಪರಿಷತ್‌ ಜಿಲ್ಲಾಧ್ಯಕ್ಷ ನಾಗರಾಜ್ ವಿ. ಬೈರಿ ಮಾತನಾಡಿ, ಕಳೆದ ಎರಡೂವರೆ ವರ್ಷಗಳಿಂದ ಪರಿಷತ್‌ ವತಿಯಿಂದ ಆಯೋಜಿಸುತ್ತಿರುವ 53ನೇ ಕಾರ್ಯಕ್ರಮ ಇದಾಗಿದೆ. ಕ.ವೆಂ. ಶ್ರೀನಿವಾಸಮೂರ್ತಿ ಅವರ ಗೀತೋತ್ಸವ ಏರ್ಪಡಿಸಿದ್ದೆವು. ಆದರೆ ಮೈಸೂರಿನವರೇ ಆದ ಜಯಪ್ಪ ಅವರ ಗೀತೋತ್ಸವ ಏರ್ಪಡಿಸುವ ಮೂಲಕ ಗೌರವ ಸಲ್ಲಿಸಬೇಕು ಎಂಬ ಆಸೆ ಇವತ್ತು ಈಡೇರಿದೆ ಎಂದರು.

ಭಾವಗೀತೆ ಕನ್ನಡ ಸಂಗೀತದ ಅಸ್ಮಿತೆ. ಏಕೆಂದರೆ ಕವಿಗಳು ರಚಿಸಿದ್ದನ್ನು ಜನಮಾನಸಕ್ಕೆ ತಲುಪಿಸಿದ್ದು ಭಾವಗೀತೆಗಳ ಮೂಲಕ ಎಂದರು.

ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ ಅಭಿನಂದನಾ ಭಾಷಣ ಮಾಡಿ, ದೂರದ ಮಾಸೂರಿನಿಂದ ಮೈಸೂರಿಗೆ ಬಂದು, ಬೆಳಗ್ಗೆ ಕೆಲಸ ಮಾಡುತ್ತಾ, ಸಂಜೆ ವೇಳೆ ಮೈವಿವಿ ಸಂಜೆ ಕಾಲೇಜಿನಲ್ಲಿ ಪದವಿ ಕಲಿತು, ಖಾಸಗಿ ವಿದ್ಯಾಸಂಸ್ಥೆಯಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಜಯಪ್ಪ ಅವರು ಪ್ರಾಧ್ಯಾಪಕರಾದ ಕೆ. ಭೈರವಮೂರ್ತಿ ಹಾಗೂ ಕೆ. ಅನಂತರಾಂ ಅವರ ಪ್ರೋತ್ಸಾಹದಿಂದ ಸಾಹಿತ್ಯ ರಚನೆಯಲ್ಲಿ ತೊಡಗಿದವರು. ಅದರಲ್ಲೂ ಕಾವ್ಯದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡು ಭಾವಗೀತೆಗಳ ಹಲವಾರು ಸಿಡಿಗಳನ್ನು ಹೊರತಂದಿದ್ದಾರೆ. ದೊಡ್ಡರಂಗೇಗೌಡ, ವೆಂಕಟೇಶಮೂರ್ತಿ ಮೊದಲಾದ ಖ್ಯಾತನಾಮ ಕವಿಗಳಿಂದ ಮೆಚ್ಚುಗೆ ಪಡೆದವರು. ಸಾವಿರ ಕವಿತೆಗಳ ಸರದಾರ ಎನಿಸಿಕೊಂಡವರು. ಆ ಮೂಲಕ ಜಯಕವಿ ಎಂದೇ ಹೆಸರಾದವರು ಎಂದು ಬಣ್ಣಿಸಿದರು. ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮುಖ್ಯ ಅತಿಥಿಯಾಗಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆತ್ರೇಯ ಕಾಲೇಜು ಲಾಕ್‌ಡೌನ್‌: 2ನೇ ದಿನಕ್ಕೆ ಕಾಲಿಟ್ಟ ಧರಣಿ
ಈಶ್ವರ ಖಂಡ್ರೆ ಭೇಟಿ ಬೆನ್ನಲ್ಲೇ ಹಿರೇಹಳ್ಳಿ ಕೆರೆ ಒತ್ತುವರಿ ತೆರವು