ಜಯಕುಮಾರ್ ಸಜೀವ ದಹನ ಪ್ರಕರಣ: ಸಮಗ್ರ ತನಿಖೆಗಾಗಿ ಪ್ರತಿಭಟನೆ

KannadaprabhaNewsNetwork |  
Published : May 27, 2025, 01:49 AM IST
26ಕೆಎಂಎನ್ ಡಿ14 | Kannada Prabha

ಸಾರಾಂಶ

ಜಿಲ್ಲಾಡಳಿತ ಮತ್ತು ಪೊಲೀಸರು ಪ್ರಕರಣದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು. ಮೃತ ಜಯಕುಮಾರ್ ಕುಟುಂಬಕ್ಕೆ 25 ಲಕ್ಷ ರು. ಪರಿಹಾರ ನೀಡಬೇಕು. ಆತನ ಪತ್ನಿಗೆ ಸರ್ಕಾರಿ ಉದ್ಯೋಗ ನೀಡಬೇಕು ಮತ್ತು ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮದ್ದೂರು

ಕೆ.ಆರ್.ಪೇಟೆ ತಾಲೂಕು ಕತ್ರಘಟ್ಟ ಗ್ರಾಮದ ದಲಿತ ಯುವಕ ಜಯಕುಮಾರ್ ಸಜೀವ ದಹನ ಪ್ರಕರಣದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ದಲಿತ ಹಕ್ಕುಗಳ ಜಿಲ್ಲಾ ಸಮಿತಿ ಕಾರ್ಯಕರ್ತರು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಪಟ್ಟಣದ ತಾಲೂಕು ಕಚೇರಿಗೆ ಸಮಿತಿ ರಾಜ್ಯ ಉಪಾಧ್ಯಕ್ಷ ಬಿ.ರಾಜಶೇಖರ್ ಮೂರ್ತಿ ನೇತೃತ್ವದಲ್ಲಿ ಮುತ್ತಿಗೆ ಹಾಕಿದ ಕಾರ್ಯಕರ್ತರು ಕೆಲಕಾಲ ಧರಣಿ ನಡೆಸಿದರು. ಜಿಲ್ಲಾಡಳಿತ ಮತ್ತು ಪೊಲೀಸರ ವಿರುದ್ಧ ಘೋಷಣೆ ಕೂಗಿದರು.

ಸಜೀವದಹನಗೊಂಡಿರುವ ಜಯಕುಮಾರ್ ಜಮೀನಿನಲ್ಲಿ ಸುವರ್ಣೀಯ ಜನಾಂಗದ ಅನಿಲ್ ಕುಮಾರ್ ಅಕ್ರಮವಾಗಿ ಹುಲ್ಲಿನ ಮೇಲೆ ಹಾಕಿಕೊಂಡು ಜಯಕುಮಾರನಿಗೆ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ಮೇ 16 ರಂದು ಜಯಕುಮಾರ್ ಕೆ.ಆರ್.ಪೇಟೆ ಪೊಲೀಸರಿಗೆ ಅನಿಲ್ ಕುಮಾರ್ ವಿರುದ್ಧ ದೂರು ನೀಡಿದ್ದರು.

ಈ ದ್ವೇಷದ ಹಿನ್ನೆಲೆಯಲ್ಲಿ ಅನಿಲ್ ಕುಮಾರ್ ಜಯಕುಮಾರ್ ಮೇಲೆ ಹಲ್ಲೆ ನಡೆಸಿ ಹುಲ್ಲಿನ ಮೆದೆಗೆ ಎಸೆದು ಸಜೀವ ದಹನ ಮಾಡಿದ್ದಾರೆ. ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸದೆ ಕರ್ತವ್ಯ ಲೋಪ ಮಾಡಿದ್ದಾರೆ. ಅಲ್ಲದೇ, ಆರೋಪಿ ಅನಿಲ್ ಕುಮಾರ್ ರಕ್ಷಣೆಗೆ ನಿಂತಿದ್ದಾರೆ ಎಂದು ಮುಖಂಡರು ಕಿಡಿಕಾರಿದರು.

ಜಿಲ್ಲಾಡಳಿತ ಮತ್ತು ಪೊಲೀಸರು ಪ್ರಕರಣದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು. ಮೃತ ಜಯಕುಮಾರ್ ಕುಟುಂಬಕ್ಕೆ 25 ಲಕ್ಷ ರು. ಪರಿಹಾರ ನೀಡಬೇಕು. ಆತನ ಪತ್ನಿಗೆ ಸರ್ಕಾರಿ ಉದ್ಯೋಗ ನೀಡಬೇಕು ಮತ್ತು ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಸಮಿತಿ ಜಿಲ್ಲಾಧ್ಯಕ್ಷ ಆರ್.ಕೃಷ್ಣ, ಉಪಾಧ್ಯಕ್ಷ ಕೆ.ಎಸ್.ಶಿವರಾಮ, ಖಜಾಂಚಿ ವಿಜಯೇಂದ್ರ, ಸಹ ಕಾರ್ಯದರ್ಶಿ ಜಯರಾಮ, ಮುಖಂಡರಾದ ಭಾನುಪ್ರಕಾಶ್, ಕುಮಾರ, ಸಿದ್ದರಾಜು ಮತ್ತಿತರರು ಭಾಗವಹಿಸಿದ್ದರು.

PREV

Recommended Stories

ನಾಲ್ಕು ಜಿಲ್ಲೆಗಳಲ್ಲಿ ಮಳೆ ಆರ್ಭಟ : ಬೆಳೆ ಹಾನಿ ಆತಂಕದಲ್ಲಿ ರೈತರು
ಯಾವುದೇ ಕ್ರಾಂತಿಗೆ ಕಾಂಗ್ರೆಸ್‌ ಹೈಕಮಾಂಡ್‌ ಬಿಡಲ್ಲ : ಸತೀಶ್‌