ಧಾರವಾಡ: ಮಹಿಳೆಯರಲ್ಲಿ ಅಡಗಿದ ಪ್ರತಿಭೆ ಗುರುತಿಸಿ ಬೆಳಕಿಗೆ ತರುವುದೇ ಜಾನಪದ ಕಲಾವಿದೆ ಜಯಶ್ರೀ ಗುತ್ತಲ ದತ್ತಿ ಆಶಯವಾಗಿದ್ದು, ಇದೀಗ ಅವರ ಸ್ಮರಣೆಯಲ್ಲಿ ಅವರ ಆಶಯ ಯಶಸ್ವಿಯಾಗುತ್ತಿದೆ ಎಂದು ವಿಶ್ರಾಂತ ಪ್ರಾಚಾರ್ಯ ಆರ್.ಬಿ. ಗುತ್ತಲ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು ಜಯಶ್ರೀ ಗುತ್ತಲ ದತ್ತಿ ಅಂಗವಾಗಿ ಜಯಶ್ರೀ ಗುತ್ತಲ ಜಾನಪದ ಪುರಸ್ಕಾರ ಪ್ರದಾನದಲ್ಲಿ ಅವರು ಮಾತನಾಡಿ, ಜಯಶ್ರೀ ಗುತ್ತಲ ಅಪ್ಪಟ ಜಾನಪದ ಕಲಾವಿದೆಯಾಗಿ, ಅಲ್ಲದೇ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅನೇಕ ಜಾನಪದ ಸಂಬಂಧಿತ ಮೌಲಿಕ ಕಾರ್ಯಕ್ರಮಗಳನ್ನು ಸಂಘಟಿಸಿದ್ದಾರೆ. ಅವರ ಹೆಸರಿನಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿ ವೇದಿಕೆ ಕಲ್ಪಿಸಿಕೊಡಲು ಅವರ ಪತಿ ವಿಶ್ರಾಂತ ಅಭಿಯಂತರ ಎಸ್.ಬಿ. ಗುತ್ತಲ ಕಾರ್ಯ ಶ್ಲಾಘನೀಯ ಎಂದರು.
ಇದಕ್ಕೂ ಪೂರ್ವ ಜಾನಪದ ಹಾಡುಗಳ ಸ್ಪರ್ಧೆ ಉದ್ಘಾಟಿಸಿದ ಧಾರವಾಡ ಆಕಾಶವಾಣಿ ಉದ್ಘೋಷಕಿ ಮಾಯಾ ಚಿಕ್ಕೇರೂರ ಮಾತನಾಡಿದರು. ಸಾಹಿತಿ ರಾಧಾ ಶ್ಯಾಮರಾವ್, ಸಂಗೀತಗಾರ್ತಿ ಇಂದುಮತಿ ರಾಘವೇಂದ್ರ ಹಾಗೂ ಶಹನಾಯಿ ಕಲಾವಿದ ನಟರಾಜ ಮಹಾಜನ್ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು.
ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಧಾರವಾಡದ ಸ್ವರಾತ್ಮಕ ಭಜನಾ ಮಂಡಳಕ್ಕೆ ಜಯಶ್ರೀ ಗುತ್ತಲ ಜಾನಪದ ಪುರಸ್ಕಾರ ಪ್ರದಾನ ಮಾಡಲಾಯಿತು. ಅಂಜನಾ ಭಜನಾ ಮಂಡಳ ದ್ವಿತೀಯ ಸ್ಥಾನ ಹಾಗೂ ಸ್ವರಸುಧಾ ಭಜನಾ ಮಂಡಳ ತೃತೀಯ ಸ್ಥಾನ ಪಡೆದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.