ಬೃಹತ್ ಪಾದಯಾತ್ರೆಗೆ ಅಣಿಯಾದ ದಳ-ಕಮಲ ಪಡೆ

KannadaprabhaNewsNetwork |  
Published : Aug 08, 2026, 01:15 AM IST
1.ಜೆಡಿಎಸ್ ಚಿಹ್ನೆ | Kannada Prabha

ಸಾರಾಂಶ

ರಾಮನಗರ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಉದ್ದೇಶಿತ ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ರೈತರ ಜೊತೆಗೂಡಿ ಬೃಹತ್ ಪಾದಯಾತ್ರೆ ನಡೆಸಲು ವಿಪಕ್ಷಗಳಾದ ಜೆಡಿಎಸ್ - ಬಿಜೆಪಿ ಮಿತ್ರ ಪಕ್ಷಗಳು ಅಣಿಯಾಗಿವೆ

ರಾಮನಗರ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಉದ್ದೇಶಿತ ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ರೈತರ ಜೊತೆಗೂಡಿ ಬೃಹತ್ ಪಾದಯಾತ್ರೆ ನಡೆಸಲು ವಿಪಕ್ಷಗಳಾದ ಜೆಡಿಎಸ್ - ಬಿಜೆಪಿ ಮಿತ್ರ ಪಕ್ಷಗಳು ಅಣಿಯಾಗಿವೆ.

ಜೆಡಿಎಸ್ ಪಕ್ಷ ಆಗಸ್ಟ್ 9,10 ಹಾಗೂ 11ರಂದು ಬೈರಮಂಗಲದಿಂದ ಬೆಂಗಳೂರಿನ ಫ್ರೀಡಂ ಪಾರ್ಕಿನವರೆಗೆ ಬೃಹತ್ ಪಾದಯಾತ್ರೆಗೆ ಸಿದ್ಧತೆ ಮಾಡಿಕೊಂಡಿದೆ. ಮತ್ತೊಂದೆಡೆ ಮೈತ್ರಿ ಧರ್ಮ ಪಾಲನೆ ಮಾಡುವ ಸಂಕಟಕ್ಕೆ ಸಿಲುಕಿರುವ ಬಿಜೆಪಿ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಲು ತೀರ್ಮಾನಿಸಿದೆ ಎನ್ನಲಾಗಿದೆ.

ರೈತರ ಹಿತಾಸಕ್ತಿಗೆ ವಿರುದ್ಧವಾಗಿರುವ ಟೌನ್‌ಶಿಪ್‌ ಯೋಜನೆ ವಿರುದ್ಧ ವಿಧಾನಮಂಡಲದ ಒಳಗೂ ಹಾಗೂ ಹೊರಗೂ ಹೋರಾಟ ನಡೆಸಲು ತೀರ್ಮಾನಿಸಿರುವ ಬಿಜೆಪಿ - ಜೆಡಿಎಸ್ ಮಿತ್ರ ಪಕ್ಷಗಳು, ಶನಿವಾರ ಸಮನ್ವಯ ಸಭೆಯಲ್ಲಿ ಉಭಯ ಪಕ್ಷಗಳು ಜಂಟಿಯಾಗಿ ಪಾದಯಾತ್ರೆ ನಡೆಸುವ ರೂಪುರೇಷೆಗಳು ಅಂತಿಮಗೊಳ್ಳಲಿವೆ.

ಆಗಸ್ಟ್ 9ರಂದು ಬೈರಮಂಗಲ ವೃತ್ತದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿರವರು ಬಿಜೆಪಿ ನಾಯಕರೊಂದಿಗೆ ಸೇರಿ ಪಾದಯಾತ್ರೆಗೆ ಹಸಿರು ನಿಶಾನೆ ತೋರಿದರೆ, ಆಗಸ್ಟ್ 10ರಂದು ಬಿಡದಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಪಾದಯಾತ್ರೆಗೆ ಚಾಲನೆ ನೀಡುವರು. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಸೇರಿದಂತೆ ಅನೇಕ ನಾಯಕರು ಭಾಗವಹಿಸುವ ಸಾಧ್ಯತೆಗಳಿವೆ.

ಬೈರಮಂಗಲ ವೃತ್ತದಿಂದ ಬೆಂಗಳೂರಿನ ಫ್ರಿಡಂ ಪಾರ್ಕಿನವರೆಗೆ ಪ್ರತಿನಿತ್ಯ 10 - 12 ಕಿ.ಲೋ.ನಂತೆ 3 ದಿನಗಳ ಕಾಲ 38 ಕಿಲೋ ಮೀಟರ್ ಪಾದಯಾತ್ರೆ ನಡೆಯಲಿದೆ. ಬೈರಮಂಗಳ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 2 -3 ಸಾವಿರ ರೈತರು ಹಾಗೂ ಜೆಡಿಎಸ್ - ಬಿಜೆಪಿ ಪಕ್ಷಗಳ 3-5 ಸಾವಿರ ಕಾರ್ಯಕರ್ತರು ಸೇರಿ ಅಂದಾಜು 5 ರಿಂದ 6 ಸಾವಿರ ಮಂದಿ ಕಾಲ್ನಡಿಗೆಯಲ್ಲಿ ಭಾಗವಹಿಸುವ ನಿರೀಕ್ಷೆಗಳಿವೆ.

ಇನ್ನು ಜೆಡಿಎಸ್ - ಬಿಜೆಪಿ ಪಕ್ಷಗಳ ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು ಸೇರಿದಂತೆ ಯಾವ್ಯಾವ ನಾಯಕರು ಎಲ್ಲಿ ,ಯಾವಾಗ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬೇಕು. ಅಕ್ಕಪಕ್ಕದ ಜಿಲ್ಲೆಗಳ ಉಭಯ ಪಕ್ಷಗಳ ಕಾರ್ಯಕರ್ತರು ಯಾವ ದಿನ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಬೇಕು ಎಂಬುದು ಸೇರಿದಂತೆ ಪಾದಯಾತ್ರೆ ರೂಪುರೇಷೆಗಳು ಜೆಡಿಎಸ್ - ಬಿಜೆಪಿ ಸಮನ್ವಯ ಸಭೆಯಲ್ಲಿ ತೀರ್ಮಾನ ಆಗಲಿದೆ.

ದಳ - ಕಮಲ ನಡುವೆ ಕ್ರೆಡಿಟ್ ವಾರ್:

ಭೂ ಸ್ವಾಧೀನ ವಿರುದ್ಧ ಅನ್ನದಾತರು ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿಗಳ ರೈತರ ಭೂ ಹಿತರಕ್ಷಣಾ ಸಮಿತಿ ರಚಿಸಿಕೊಂಡು ಹೋರಾಟ ಆರಂಭಿಸಿದರು. ಬೈರಮಂಗಲ ವೃತ್ತವನ್ನೇ ಚಳವಳಿಯ ಕೇಂದ್ರ ಸ್ಥಳವನ್ನಾಗಿ ಮಾಡಿಕೊಂಡರು. ರೈತರ ಹೋರಾಟಕ್ಕೆ ಅನೇಕ ರೈತ, ದಲಿತ ಮತ್ತು ಕನ್ನಡಪರ ಸಂಘಟನೆಗಳು ಬೆಂಬಲ ನೀಡಿ ಶಕ್ತಿ ತುಂಬಿದವು.

ಆನಂತರ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಚಳವಳಿಗಳಲ್ಲಿ ಪ್ರತ್ಯೇಕವಾಗಿ ಭಾಗವಹಿಸಿ ಹೋರಾಟ ತೀವ್ರಗೊಳಿಸಿದವು. ಕ್ರೆಡಿಟ್ ವಾರ್ ಶುರುವಾದ ಕಾರಣ ಉಭಯ ಪಕ್ಷಗಳ ನಾಯಕರ ನಡುವೆ ಒಗ್ಗಟ್ಟು ಮೂಡಲಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರರವರು ಜೆಡಿಎಸ್ ನಾಯಕರೊಂದಿಗೆ ಚರ್ಚಿಸಿ ಪಾದಯಾತ್ರೆ ಹಮ್ಮಿಕೊಳ್ಳುವುದಾಗಿ ಘೋಷಣೆ ಮಾಡಿದ್ದರು. ಆದರೆ, ಜೆಡಿಎಸ್ ನಾಯಕರು ತರಾತುರಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಬಿಜೆಪಿಗೂ ಮೊದಲೇ ಪಾದಯಾತ್ರೆ ದಿನಾಂಕ (ಜುಲೈ30,31,ಆಗಸ್ಟ್1) ಘೋಷಣೆ ಮಾಡಿದ್ದರು.

ಆದರೆ, ಮಾಜಿ ಪ್ರಧಾನಿ ದೇವೇಗೌಡರವರ ಪತ್ನಿ ಚನ್ನಮ್ಮರವರ ಅಗಲಿಕೆ ಹಿನ್ನೆಲೆಯಲ್ಲಿ ಜೆಡಿಎಸ್ ನಿಗದಿ ಪಡಿಸಿರುವ (ಆಗಸ್ಟ್ 9,10 ಹಾಗೂ 11) ದಿನದಂದೇ ಬಿಜೆಪಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಗಳಿವೆ.

ಬಾಕ್ಸ್ ..............

ಬಿಡದಿ ಟೌನ್ ಶಿಪ್ ಯೋಜನೆಗಾಗಿ ಬಿಡದಿ ಹೋಬಳಿಯ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 9 ಕಂದಾಯ ಗ್ರಾಮಗಳಲ್ಲಿ ಭೂ ಸ್ವಾಧೀನಕ್ಕೆ 15 ತಿಂಗಳ ಹಿಂದೆಯೇ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. ಜೂನ್ 10ರಂದು 3 ಗ್ರಾಮ ಹಾಗೂ ಜುಲೈ 15ರಂದು 4 ಕಂದಾಯ ಗ್ರಾಮಗಳ ಭೂ ಸ್ವಾಧೀನಕ್ಕಾಗಿ ಫೈನಲ್ ನೋಟಿಫಿಕೇಷನ್ ಹೊರ ಬಿದ್ದಿದೆ.

ಮೊದಲ ಹಂತದಲ್ಲಿನ 518 ಎಕರೆ 45 ಗುಂಟೆ ಮತ್ತು ಎರಡನೇ ಹಂತದಲ್ಲಿನ 4941 ಎಕರೆ 59 ಗುಂಟೆ ಸೇರಿ ಒಟ್ಟು 5460 ಎಕರೆ 4 ಗುಂಟೆ ಭೂ ಸ್ವಾಧೀನಕ್ಕೆ ರಾಜ್ಯ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿದಂತಾಗಿದೆ. ಇನ್ನು 2 ಕಂದಾಯ ಗ್ರಾಮಗಳ ಭೂ ಸ್ವಾಧೀನದ ಅಂತಿಮ ಅಧಿಸೂಚನೆ ಮಾತ್ರ ಬಾಕಿ ಉಳಿದಿದೆ.

ಬಾಕ್ಸ್ ..............

ಪಾದಯಾತ್ರೆ ವೇಳಾ ಪಟ್ಟಿ

ಆಗಸ್ಟ್ 9: ಬೆಳಗ್ಗೆ ಬೈರಮಂಗಲ ವೃತ್ತದಿಂದ ಪಾದಯಾತ್ರೆ ಪ್ರಾರಂಭ. ಮಧ್ಯಾಹ್ನ ಜೋಗರದೊಡ್ಡಿಯಲ್ಲಿ ಮಧ್ಯಾಹ್ನದ ಊಟ. ಬಿಡದಿಯ ಶ್ರೀ ಮಂಜುನಾಥ ಕಲ್ಯಾಣ ಮಂಟಪದಲ್ಲಿ ವಾಸ್ತವ್ಯ.

ಆಗಸ್ಟ್ 10: ಬೆಳಗ್ಗೆ ಬಿಡದಿಯಿಂದ ಹೊರಟು ಮಧ್ಯಾಹ್ನ ಎಂ.ಸಿರಿ ಕನ್ವೆಂನ್ಷನ್ ಹಾಲ್ ನಲ್ಲಿ ಊಟ. ಮೈಸೂರು ರಸ್ತೆಯ ನೈಸ್ ಜಂಕ್ಷನ್ ತಲುಪಿ ಜೆ.ಕೆ.ಗ್ರ್ಯಾಂಡ್ ನಲ್ಲಿ ವಾಸ್ತವ್ಯ.

ಆಗಸ್ಟ್ 11 ಬೆಳಗ್ಗೆ ಮೈಸೂರು ರಸ್ತೆಯ ನೈಸ್ ಜಂಕ್ಷನ್ ನಿಂದ ಹೊರಟು ಮಧ್ಯಾಹ್ನ ಫ್ರೀಡಂ ಪಾರ್ಕ್ ತಲುಪುವುದು.

7ಕೆಆರ್ ಎಂಎನ್ 1,2.ಜೆಪಿಜಿ

1.ಜೆಡಿಎಸ್ ಚಿಹ್ನೆ

2.ಬಿಜೆಪಿ ಚಿಹ್ನೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲೆಯ ವಿವಿಧೆಡೆ ಬರದ ಭೀಕರ ಪರಿಸ್ಥಿತಿ ದರ್ಶನ
ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಸಂಘಟಿತ ಕೆಲಸ