
ರಾಮನಗರ: ಬಿಡದಿ ಟೌನ್‌ಶಿಪ್ ಯೋಜನೆಯನ್ನು ವಿರೋಧಿಸಿ ಜೆಡಿಎಸ್ ವತಿಯಿಂದ ಆಗಸ್ಟ್ 9, 10 ಮತ್ತು 11ರಂದು ಬೈರಮಂಗಲದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ವರೆಗೆ 38 ಕಿ.ಮೀ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಸರ್ಕಾರಕ್ಕೆ ಕಣ್ಣು ಕಾಣುತ್ತಿಲ್ಲ, ಕಿವಿಯೂ ಕೇಳುತ್ತಿಲ್ಲ:
ರೈತರು ಸಂಪೂರ್ಣವಾಗಿ ಈ ಟೌನ್‌ಶಿಪ್ ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ಆದರೆ ಈ ಸರ್ಕಾರಕ್ಕೆ ಕಣ್ಣು ಕಾಣುತ್ತಿಲ್ಲ, ಕಿವಿಯೂ ಕೇಳುತ್ತಿಲ್ಲ. ರೈತರ ವಿರುದ್ಧ ಸರ್ಕಾರದ ನಡೆ ಇದೆ. ಹಾಗಾಗಿ ನಾವು ರೈತರ ಪರ ನಿಲ್ಲುವ ಕೆಲಸ ಮಾಡುತ್ತಿದ್ದೇವೆ ಎಂದು ನಿಖಿಲ್ ತಿಳಿಸಿದರು.ಕಳೆದ ಜುಲೈ 30, 31 ಮತ್ತು ಆ.1ರಂದು ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಆದರೆ ನಮ್ಮಜ್ಜಿ ಚನ್ನಮ್ಮ ಅವರ ಅಗಲಿಕೆ ದುಃಖದ ಹಿನ್ನೆಲೆಯಲ್ಲಿ ಪಾದಯಾತ್ರೆಯನ್ನು ಮುಂದೂಡಲಾಗಿತ್ತು, ಈಗ ಆ. 9ರಿಂದ 11ರವರೆಗೆ 3 ದಿನಗಳ ಕಾಲ ಪಾದಯಾತ್ರೆ ನಡೆಯಲಿದೆ ಎಂದು ಹೇಳಿದರು.
ರಾಮನಗರ ಜಿಲ್ಲೆಯ ಐದು ತಾಲೂಕಿನ ಕಾರ್ಯಕರ್ತರು, ಮುಖಂಡರು ಹಾಗೂ ರೈತರು ಪಾದಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು , ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ, ಜೆಡಿಎಸ್ ಹಾಲಿ ಮತ್ತು ಮಾಜಿ ಶಾಸಕರು ಪಾಲ್ಗೊಳ್ಳಲಿದ್ದಾರೆ.
ಜೊತೆಗೆ ರೈತರ ಪರವಾಗಿ ಕಾನೂನು ಹೋರಾಟವನ್ನೂ ಮಾಡುತ್ತಿದ್ದೇವೆ. ಸೋಮವಾರದಿಂದ ಎಲ್ಲಾ ಫೈಲಿಂಗ್ ಪ್ರಾರಂಭವಾಗುತ್ತಿದೆ. ಯಾವೆಲ್ಲಾ ದಾಖಲಾತಿಗಳನ್ನು ಕೊಡಬೇಕು ಎಂಬುದರ ಕುರಿತು ವಕೀಲರಿಂದ ಮಾಹಿತಿ ಪಡೆಯುತ್ತಿದ್ದೇವೆ. ಕೋರ್ಟ್ ಕೂಡ ರೈತರ ಪರವಾಗಿ ನಿಲ್ಲುವ ಭರವಸೆ ಇದೆ ಎಂದು ಹೇಳಿದರು.
ಬಿಡದಿ ಟೌನ್‌ಶಿಪ್ ಹಾಗೂ ಕಾವೇರಿ ಹೋರಾಟದ ವಿಚಾರದಲ್ಲಿ ಮೈತ್ರಿಯಲ್ಲಿ ಒಮ್ಮತ ಮೂಡದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಕಾವೇರಿ ಹೋರಾಟ ಮಾಡುವಾಗ ನಮ್ಮ ಅಜ್ಜಿಯ 11ನೇ ದಿನದ ಕಾರ್ಯ ಇತ್ತು. ಇಂತಹ ಸಂದರ್ಭದಲ್ಲಿ ನಾವು ಇವೆಲ್ಲವನ್ನೂ ಮಾತಾಡುವುದಕ್ಕೆ ಆಗುತ್ತಿರಲಿಲ್ಲ. ಹೋರಾಟ, ಪ್ರತಿಭಟನೆ, ಪಾದಯಾತ್ರೆಗಳನ್ನು ಕೆಲವೊಮ್ಮೆ ಪ್ರತ್ಯೇಕವಾಗಿ ಮಾಡಬೇಕಾಗುತ್ತದೆ. ಇಲ್ಲಿ ವ್ಯತ್ಯಾಸ ಎನ್ನುವುದು ಏನೂ ಇಲ್ಲ. ಸಂದರ್ಭಕ್ಕೆ ತಕ್ಕಹಾಗೆ ಕೆಲವೊಂದು ಪ್ರತ್ಯೇಕ, ಕೆಲವೊಂದು ಒಟ್ಟಾಗಿ ಹೋರಾಟ ಆಗುತ್ತದೆ. ಬಿಡದಿ ಪಾದಯಾತ್ರೆ ವಿಚಾರದಲ್ಲಿ ಬಿಜೆಪಿಯ ಯಾರೂ ನಮ್ಮ ಜೊತೆ ಚರ್ಚೆ ಮಾಡಿಲ್ಲ. ಈ ಬಗ್ಗೆ ಹೆಚ್.ಡಿ. ಕುಮಾರಸ್ವಾಮಿ ಅವರ ಜೊತೆಯಾಗಲಿ, ನನ್ನ ಜೊತೆಯಾಗಲಿ ಚರ್ಚೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಇಂದು ಸರ್ಕಾರ ಸರ್ವಪಕ್ಷ ಸಭೆ ಕರೆದಿದೆ. ಕುಮಾರಣ್ಣ ಅವರು ಕೂಡ ಸಭೆಗೆ ಹೋಗಿದ್ದಾರೆ. ಎಲ್ಲಾ ಪಕ್ಷದ ಹಿರಿಯ ನಾಯಕರು ಭಾಗಿಯಾಗಿ ಕಾವೇರಿ ವಿಚಾರದಲ್ಲಿ ಚರ್ಚೆ ಮಾಡುತ್ತಿದ್ದಾರೆ. ನಮ್ಮ ನೀರಿನ ಶೇಖರಣೆ, ವಾಡಿಕೆ ಮಳೆ ಹಾಗೂ ರೈತರ ಸಮಸ್ಯೆಗಳು ಚರ್ಚೆ ಆಗಲಿದೆ. ಎಲ್ಲಾ ಆಣೆಕಟ್ಟುಗಳ ಸ್ಥಿತಿಗತಿಗಳ ಬಗ್ಗೆ ಅವಲೋಕನ ಮಾಡಲಾಗುತ್ತದೆ. ಅಂತಿಮವಾಗಿ ರೈತರ ಪರವಾದ ಚರ್ಚೆ, ತೀರ್ಮಾನ ಆಗಲಿ ಎಂದು ಮನವಿ ಮಾಡುತ್ತೇನೆ ಎಂದರು.
ಆ.13 ಕರ್ನಾಟಕ ಬಂದ್‌ಗೆ ಬೆಂಬಲ: