ರಾಜ್ಯ ಸರ್ಕಾರದ ವಿರುದ್ಧ ಬೆಲೆ ಏರಿಕೆ ಕಹಳೆ : ಜೆಡಿಎಸ್ಸಿಂದಲೂ ತಿಂಗಳ ಅಂತ್ಯಕ್ಕೆ ಹೋರಾಟ ತೀರ್ಮಾನ

KannadaprabhaNewsNetwork | Updated : Apr 08 2025, 09:40 AM IST

ಸಾರಾಂಶ

ರಾಜ್ಯ ಸರ್ಕಾರ ವಿರುದ್ಧ ಬೆಲೆ ಏರಿಕೆ ಕಹಳೆ ಮೊಳಗಿಸಿ ಪ್ರತ್ಯೇಕವಾಗಿ ಹೋರಾಟ ನಡೆಸುತ್ತಿರುವ ಬಿಜೆಪಿಗೆ ಪ್ರತಿಯಾಗಿ ಜೆಡಿಎಸ್‌ ಸಹ ಹೋರಾಟ ನಡೆಸಲು ತೀರ್ಮಾನಿಸಿದ್ದು, ಈ ತಿಂಗಳ ಅಂತ್ಯಕ್ಕೆ ಬೃಹತ್‌ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.

 ಬೆಂಗಳೂರು : ರಾಜ್ಯ ಸರ್ಕಾರ ವಿರುದ್ಧ ಬೆಲೆ ಏರಿಕೆ ಕಹಳೆ ಮೊಳಗಿಸಿ ಪ್ರತ್ಯೇಕವಾಗಿ ಹೋರಾಟ ನಡೆಸುತ್ತಿರುವ ಬಿಜೆಪಿಗೆ ಪ್ರತಿಯಾಗಿ ಜೆಡಿಎಸ್‌ ಸಹ ಹೋರಾಟ ನಡೆಸಲು ತೀರ್ಮಾನಿಸಿದ್ದು, ಈ ತಿಂಗಳ ಅಂತ್ಯಕ್ಕೆ ಬೃಹತ್‌ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.

ಅಧಿವೇಶನ ಬಳಿಕ ಬಿಜೆಪಿ ನಡೆಸುತ್ತಿರುವ ಯಾವುದೇ ಹೋರಾಟಕ್ಕೂ ಜೆಡಿಎಸ್‌ಗೆ ಆಹ್ವಾನ ನೀಡಿಲ್ಲ. ಫ್ರೀಡಂ ಪಾರ್ಕ್‌ನಲ್ಲಿ ನಡೆಸಿದ ಅಹೋರಾತ್ರಿ ಧರಣಿ ಮತ್ತು ಮೈಸೂರಿನಲ್ಲಿ ನಡೆಸಿದ ಜನಾಕ್ರೋಶ ಯಾತ್ರೆಯಿಂದಲೂ ಮಿತ್ರಪಕ್ಷ ಜೆಡಿಎಸ್‌ ಅನ್ನು ದೂರ ಇಟ್ಟಿದೆ. ಬಿಜೆಪಿಯ ಈ ನಡೆಯು ಜೆಡಿಎಸ್ ನಾಯಕರಲ್ಲಿ ತೀವ್ರ ಬೇಸರ ಮೂಡಿಸಿದೆ.

ರಾಜ್ಯದಲ್ಲಿ ಪಕ್ಷದ ಅಸ್ತಿತ್ವವನ್ನು ಕಾಯ್ದುಕೊಳ್ಳಬೇಕಾದರೆ ಸರ್ಕಾರದ ವಿರುದ್ಧ ಹೋರಾಟ ಅನಿವಾರ್ಯವಾಗಿರುವ ಹಿನ್ನೆಲೆಯಲ್ಲಿ ಜೆಡಿಎಸ್‌ ಸಹ ಬೃಹತ್‌ ಮಟ್ಟದ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ. ಇದೇ ತಿಂಗಳ ಅಂತ್ಯದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಆದರೆ, ಈ ಬಗ್ಗೆ ಏನನ್ನೂ ಯಾವುದೇ ಅಂತಿಮಗೊಳಿಸಿಲ್ಲ. ದಿನಾಂಕ ಮತ್ತು ಸ್ಥಳವನ್ನು ನಿಗದಿಗೊಳಿಸಬೇಕಿದೆ. ಇದೇ 10ರ ಬಳಿಕ ಸಭೆ ನಡೆಸಿ ದಿನಾಂಕ ಮತ್ತು ಸ್ಥಳವನ್ನು ಅಂತಿಮಗೊಳಿಸಲಾಗುವುದು. ಸುಮಾರು 10 ಸಾವಿರ ಜನರನ್ನು ಸೇರಿಸಿ ಪ್ರತಿಭಟನೆ ನಡೆಸುವ ಉದ್ದೇಶ ಹೊಂದಲಾಗಿದೆ ಎಂದು ಮೂಲಗಳು ಹೇಳಿವೆ.

ಕಳೆದ ಶನಿವಾರ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ತಮ್ಮ ನಿವಾಸದಲ್ಲಿ ಪಕ್ಷದ ಮುಖಂಡರ ಸಭೆ ನಡೆಸಿದರು. ಈ ವೇಳೆ ಬಿಜೆಪಿಯ ನಡೆಯ ಬಗ್ಗೆ ಹಲವು ಮುಖಂಡರು ಬೇಸರ ವ್ಯಕ್ತಪಡಿಸಿದರು. ಬಿಜೆಪಿಯಿಂದ ಮೈತ್ರಿ ಧರ್ಮ ಪಾಲನೆಯಾಗುತ್ತಿಲ್ಲ. ಏಕಾಂಗಿಯಾಗಿ ಹೋರಾಟ ನಡೆಸುವ ಮೂಲಕ ಬೇರೆ ಸಂದೇಶ ರವಾನಿಸುತ್ತಿದೆ. ಅಲ್ಲದೇ, ಜೆಡಿಎಸ್‌ ಅನ್ನು ಯಾವುದಕ್ಕೂ ಪರಿಗಣಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು ಎನ್ನಲಾಗಿದೆ.

ಸಭೆ ವೇಳೆ ವ್ಯಕ್ತವಾದ ಅಭಿಪ್ರಾಯದ ಮೇರೆಗೆ ಜೆಡಿಎಸ್‌ ಸಹ ಪ್ರತ್ಯೇಕವಾಗಿ ಹೋರಾಟ ನಡೆಸುವ ಬಗ್ಗೆ ಚರ್ಚೆ ನಡೆದು ತೀರ್ಮಾನಿಸಲಾಗಿದೆ. ಬಿಜೆಪಿ ತಮ್ಮದೇ ರೀತಿಯಲ್ಲಿ ಪ್ರತಿಭಟನೆ ನಡೆಸಿದರೆ, ಜೆಡಿಎಸ್‌ ಸಹ ತನ್ನದೇ ದಾರಿಯಲ್ಲಿ ಪ್ರತಿಭಟನೆ ನಡೆಸುವ ಬಗ್ಗೆ ಮಾತುಕತೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಬಿಜೆಪಿ-ಜೆಡಿಎಸ್‌ ನಡುವೆ ಸಮನ್ವಯ ಕೊರತೆ ಇಲ್ಲ. ಉಭಯ ಪಕ್ಷಗಳಿಗೂ ವರ್ಚಸ್ಸು ಬೇಕಾಗಿದೆ. ಹೀಗಾಗಿ ಪ್ರತ್ಯೇಕ ಹೋರಾಟ ಅವಶ್ಯಕತೆ ಇದೆ. ಬೆಲೆ ಏರಿಕೆ ವಿರುದ್ಧ ಜೆಡಿಎಸ್‌ನಿಂದಲೂ ಹೋರಾಟ ನಡೆಸಲಾಗುತ್ತದೆ. ರಾಜ್ಯಪಾಲರಿಗೆ ದೂರು ಸಲ್ಲಿಸಲಾಗುವುದು.

-ಎಸ್‌.ಎಲ್‌. ಭೋಜೇಗೌಡ, ವಿಧಾನಪರಿಷತ್‌ ಸದಸ್ಯ

Share this article