ಬಾಡಿಗೆಯೇ ಹೊರೆ, ಬೀದಿಯೇ ಆಸರೆ

KannadaprabhaNewsNetwork | Published : Apr 8, 2025 12:31 AM

ಸಾರಾಂಶ

ದುಡಿದು ಬದುಕುವ ಜೀವಕ್ಕೆ ಬಾಡಿಗೆ ಹೊರೆಯಾಗಿ ಬೀದಿಯಲ್ಲಿ ವಾಸವಾಗಿದ್ದಾಳೆ. ಕಸ-ಮುಸುರಿ ತೊಳೆದು ಜೀವನ ನಡೆಸುತ್ತಿದ್ದಳು. ನಾಲ್ಕೈದು ವರ್ಷದಿಂದ ಬೇರೆ ಬೇರೆ ಕಡೆ ಬಾಡಿಗೆ ಮನೆಯಲ್ಲಿದ್ದಳು.

ಕೊಪ್ಪಳ:

ದುಡಿದು ಜೀವನ ಸಾಗಿಸುವ ಜೀವ. ಮನೆಯಿಂದ ಕಾಲ್ಕಿತ್ತ ಕೈ ಹಿಡಿದವ. ಆಸರೆಯಾಗಬೇಕಿದ್ದ ಮಗನೊಬ್ಬ ಪರಾರಿ. ಇನ್ನೊಬ್ಬರ ಆಸರೆ ಸದಾ ಬೇಕಿರುವ ವಿಕಲಚೇತನ ಮಗ. ಮನೆ-ಮನೆ ಕಸ, ಮುಸುರಿ ತಿಕ್ಕಿ ಸೂರ್ಯಾಸ್ತ, ಸೂರ್ಯೋದಯ ದೂಡುತ್ತಿದ್ದ ಮಹಿಳೆಗೆ ಮನೆ ಬಾಡಿಗೆ ನೀಡಿದವರು ಮನೆ ಖಾಲಿ ಮಾಡಿಸಿದ್ದು ರಸ್ತೆ ಬದಿ ಜೀವನ ನಡೆಸುವ ದುಸ್ಥಿತಿ.

ಇದು ಭಾಗ್ಯನಗರದ ರಸ್ತೆ ಬದಿ ಮನೆ ಸಾಮಗ್ರಿ ಇಟ್ಟುಕೊಂಡು ಕುಳಿತುಕೊಂಡಿರುವ ರತ್ನಮ್ಮನ ಅಸಹಾಯಕತೆ.

ದುಡಿದು ಬದುಕುವ ಜೀವಕ್ಕೆ ಬಾಡಿಗೆ ಹೊರೆಯಾಗಿ ಬೀದಿಯಲ್ಲಿ ವಾಸವಾಗಿದ್ದಾಳೆ. ಕಸ-ಮುಸುರಿ ತೊಳೆದು ಜೀವನ ನಡೆಸುತ್ತಿದ್ದಳು. ನಾಲ್ಕೈದು ವರ್ಷದಿಂದ ಬೇರೆ ಬೇರೆ ಕಡೆ ಬಾಡಿಗೆ ಮನೆಯಲ್ಲಿದ್ದಳು. ಮೂರು ವರ್ಷದಿಂದ ಬಾಡಿಗೆ ಹಣ ನೀಡಲು ಆಗಿರಲಿಲ್ಲ. ಇತ್ತೀಚೆಗೆ ಸ್ವಲ್ಪ ಹಣ ನೀಡಿದಳು. ಆದರೂ ಸಹ ಬಾಡಿಗೆದಾರರು ಮನೆ ಬಿಡಲು ಮನವಿ ಮಾಡಿಕೊಂಡಿದ್ದರು.

ರಸ್ತೆಯಲ್ಲಿ ಕಾಲಕಳೆದ ಮಹಿಳೆ:

ಬಾಡಿಗೆ ನೀಡದ ರತ್ಮಮ್ಮಳನ್ನು ಮಾಲಿಕರು ಮನೆಯಿಂದ ಹೊರ ಹಾಕಿದ್ದರಿಂದ ಆಕೆ ಭಾಗ್ಯನಗರದ ಮುಖ್ಯರಸ್ತೆಯ ತಾಯಮ್ಮ ದೇವಿ ಗುಡಿಯ ಮುಂದಿನ ಭಾಗದಲ್ಲಿ ಸಾಮಗ್ರಿ ಇಟ್ಟುಕೊಂಡು ರಾತ್ರಿ ಇಡಿ ಕಾಲ ಕಳೆದಿದ್ದಾರೆ. ತನಗೆ ಪ್ಲಾಟ್ ಬೇಕು ಎಂದು ನಿವೇಶನ ರಹಿತರು ಹೋರಾಟ ನಡೆಸಿದ ವೇಳೆ ರತ್ನಮ್ಮ ಸಹ ಭಾಗಿಯಾಗಿ ತನಗೂ ಪ್ಲಾಟ್‌ ನೀಡಬೇಕೆಂದು ಒತ್ತಾಯಿಸಿದ್ದರು. ಆದರೆ, ಅವರಿಗೆ ಪ್ಲಾಟ್‌ ಸಿಗಲಿಲ್ಲ. ಸದ್ಯ ನಗರಸಭೆ ಆಸರೆ, ಆಶ್ರಯ ಇಲ್ಲದೆ ರತ್ನಮ್ಮ ಬೀದಿಯಲ್ಲಿದ್ದಾಳೆ.

ರತ್ನಮ್ಮನಿಗೆ ನಗರಸಭೆ ಆಶ್ರಯ ನೀಡಿದರೆ, ಆಕೆಯ ಕಷ್ಟ ದೂರವಾಗುತ್ತದೆ. ಬಡವರಿಗೆ, ನಿವೇಶನ ರಹಿತರಿಗೆ ಮನೆ ನೀಡುವ ಯೋಜನೆಗಳಿದ್ದು ನಗರಸಭೆ ಇತ್ತ ಚಿತ್ತ ಹರಿಸಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ರತ್ನಮ್ಮ ಮನೆ ಬಾಡಿಗೆ ಕಟ್ಟಲು ಆಗದೆ ಬೀದಿಯಲ್ಲಿ ಕುಟುಂಬದೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ಇದರ ಬಗ್ಗೆ ನಗರಸಭೆ ಕಣ್ತೆರೆಯಬೇಕು. ಜಿಲ್ಲಾಡಳಿತ ಈ ವಿಷಯ ಗಂಭೀರವಾಗಿ ಪರಿಗಣಿಸಿ ರತ್ನಮ್ಮಗೆ ಆಶ್ರಯ ನೀಡಬೇಕು.

ಅಲ್ಲಮಪ್ರಭು ಬೆಟ್ಟದೂರು ಹೋರಾಟಗಾರರುನನಗೆ ಮನೆ ಬಾಡಿಗೆ ಕಟ್ಟಲು ಆಗದೆ ಬೀದಿಗೆ ಬಂದಿದ್ದೇನೆ. ಗಂಡ ಸಹ ನನ್ನ ಬಿಟ್ಟು ಹೋಗಿದ್ದಾನೆ. ನಗರಸಭೆ ಜಾಗ ನೀಡುತ್ತದೆ ಎಂದು ಭಾವಿಸಿದ್ದೆ, ಆದರೆ ಅದು ಆಗಲಿಲ್ಲ. ಕಸ ಮುಸುರಿ ತಿಕ್ಕಿ ಜೀವನ ಸಾಗಿಸುತ್ತಿದ್ದೇನೆ. ಸದ್ಯ ಇರಲು ಸಹ ಮನೆ ಇಲ್ಲ.

ರತ್ನಮ್ಮ

Share this article