ಜೆಡಿಎಸ್-ಬಿಜೆಪಿಗೆ ಮತ ಕೇಳುವ ನೈತಿಕತೆ ಇಲ್ಲ: ಸಿ.ಡಿ.ಗಂಗಾಧರ್

KannadaprabhaNewsNetwork | Published : Apr 11, 2024 12:50 AM

ಸಾರಾಂಶ

ಕಳೆದ ಲೋಕಸಭಾ ಚುನಾವಣೆಯಲ್ಲಿ ಪುತ್ರನ ಸೋಲಿನ ನಂತರ ನೀರಿಗಾಗಿ ಕಾವೇರಿ ಕೊಳ್ಳದ ರೈತರು ಮನವಿ ಮಾಡಿದಾಗ ಕೆಆರ್‌ಎಸ್ ಕೀ ನನ್ನಲ್ಲಿಲ್ಲ. ಕೇಂದ್ರದ ಬಳಿ ಕೀ ಇದೆ, ನೀವು ಅಲ್ಲಿಯೇ ನೀರನ್ನು ಬಿಡಿಸಿಕೊಳ್ಳಬೇಕು ಎಂದವರಿಗೆ ಮಂಡ್ಯ ಜಿಲ್ಲೆಯ ಮತದಾರರು ಮತ ಹಾಕಬೇಕೇ ?

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯ ಅಭಿವೃದ್ಧಿಗೆ ಯಾವುದೇ ಕೊಡುಗೆ ನೀಡದ ಜೆಡಿಎಸ್-ಬಿಜೆಪಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮತ ಕೇಳುವ ನೈತಿಕ ಹಕ್ಕಿದೆಯೇ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ. ಗಂಗಾಧರ್ ಪ್ರಶ್ನಿಸಿದರು.

ಕಳೆದ ೨೦೧೮ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಜಿಲ್ಲೆಯ ಅಭಿವೃದ್ಧಿಗಾಗಿ ೮೫೦೦ ಕೋಟಿ ರು. ಅನುದಾನ ನೀಡುವುದಾಗಿ ಘೋಷಿಸಿ, ಬಿಡಿಗಾಸನ್ನೂ ಬಿಡುಗಡೆ ಮಾಡದೆ ಮಾತು ತಪ್ಪಿದವರಿಗೆ ಮಂಡ್ಯ ಜಿಲ್ಲೆಯ ಜನರ ಮತ ಕೇಳಲು ಹಕ್ಕಿಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರ ಮಾತು ಕೊಟ್ಟಂತೆ ೫ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದೆ. ಈ ಗ್ಯಾರಂಟಿಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದ್ದೇವೆ. ನಮ್ಮ ಸಾಧನೆಯ ಆಧಾರದ ಮೇಲೆ ಮತ ನೀಡುವಂತೆ ಜನರಿಗೆ ವಿನಂತಿಸುತ್ತಿದ್ದೇವೆ. ಆದರೆ ಎದುರಾಳಿ ಅಭ್ಯರ್ಥಿ ಯಾವ ಆಧಾರದ ಮೇಲೆ ಮತ ಕೇಳುತ್ತಾರೆ ಎಂದು ಹೇಳಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಪುತ್ರನ ಸೋಲಿನ ನಂತರ ನೀರಿಗಾಗಿ ಕಾವೇರಿ ಕೊಳ್ಳದ ರೈತರು ಮನವಿ ಮಾಡಿದಾಗ ಕೆಆರ್‌ಎಸ್ ಕೀ ನನ್ನಲ್ಲಿಲ್ಲ. ಕೇಂದ್ರದ ಬಳಿ ಕೀ ಇದೆ, ನೀವು ಅಲ್ಲಿಯೇ ನೀರನ್ನು ಬಿಡಿಸಿಕೊಳ್ಳಬೇಕು ಎಂದವರಿಗೆ ಮಂಡ್ಯ ಜಿಲ್ಲೆಯ ಮತದಾರರು ಮತ ಹಾಕಬೇಕೇ ಎಂದು ಪ್ರಶ್ನಿಸಿದರು.

ಮಂಡ್ಯ ಜಿಲ್ಲಾ ಪಂಚಾಯಿತಿಯಲ್ಲಿ ಜೆಡಿಎಸ್ ಅಧಿಕಾರವಿದ್ದ ವೇಳೆ ೪೦ ತಿಂಗಳ ಕಾಲ ಯಾವುದೇ ಸಾಮಾನ್ಯ ಸಭೆಯನ್ನೂ ನಡೆಸದೆ ಜಿಲ್ಲೆಯ ಅಭಿವೃದ್ಧಿಗೆಯನ್ನು ಕಡೆಗಣಿಸಿದ್ದವರಿಗೆ ಅಭಿವೃದ್ಧಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ, ೧೧೩ ದಿನಗಳ ಕಾಲ ಕಬ್ಬಿನ ಬೆಲೆಗೆ ಸಂಬಂಧಿಸಿದಂತೆ ಕಬ್ಬು ಬೆಳೆಗಾರರು ಹೋರಾಟ ಮಾಡಿದ್ದಕ್ಕೆ ಬೆಂಬಲ ನೀಡದವರಿಗೆ ಮತ ಹಾಕಬಾರದು ಎಂದರು.

ಕೇಂದ್ರದಲ್ಲಿ ಕರಾಳ ಕೃಷಿ ಕಾಯಿದೆಗಳ ವಿರುದ್ಧ ರೈತರು ಹೋರಾಟ ನಡೆಸುತ್ತಿದ್ದ ವೇಳೆ ರಾಜ್ಯದಲ್ಲಿ ಕೃಷಿ ಕಾಯಿದೆಗಳ ಪರವಾಗಿ ಬೆಂಬಲಕ್ಕೆ ನಿಂತವರು ಜೆಡಿಎಸ್. ಇವರು ರೈತ ಪರವೂ ಇಲ್ಲ, ಜನಪರವಾಗಿಯೂ ಇಲ್ಲ. ಜಿಲ್ಲೆಯ ಜನರು ಚುನಾವಣೆಯಲ್ಲಿ ಇವರನ್ನು ಸಂಪೂರ್ಣವಾಗಿ ತಿರಸ್ಕರಿಸಿ ಈ ಜಿಲ್ಲೆಯ ಮಣ್ಣಿನ ಮಗ ಸ್ಟಾರ್ ಚಂದ್ರು ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಕಾಂಗ್ರೆಸ್ ಪಕ್ಷ ಬಡ ಮಹಿಳೆಯರಿಗೆ ವರ್ಷಕ್ಕೆ ೧ ಲಕ್ಷ ನೀಡುವುದು ಸೇರಿ ಹಲವಾರು ಯೋಜನೆಗಳನ್ನು ರೂಪಿಸಿದೆ. ಈ ಎಲ್ಲ ಯೋಜನೆಗಳು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ಏ.೧೯ ಕ್ಕೆ ಸಿಎಂ-ಡಿಸಿಎಂ ಆಗಮನ:

ಏಪ್ರಿಲ್ ೧೯ ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ,ಉಪ ಮುಖ್ಯಮಂತ್ರಿ ಡಿ.ಕೆ.ಶಿ. ಲೋಕಸಭಾ ಕ್ಷೇತ್ರದಲ್ಲಿ ಬೆಳಿಗ್ಗೆ ೧೧ ರಿಂದ ರಾತ್ರಿ ೯ ಗಂಟೆಯವರೆಗೆ ವಿವಿಧೆಡೆ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಇದರ ಜೊತೆಗೆ ರಾಷ್ಟ್ರೀಯ ಮುಖಂಡ ರಾಹುಲ್‌ಗಾಂಧಿ ಹಾಗೂ ಚಿತ್ರನಟಿ ರಮ್ಯಾ ಅವರೂ ಸಹ ಮಂಡ್ಯದಲ್ಲಿ ಪ್ರಚಾರ ನಡೆಸಲಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ಎಂ.ಎಸ್. ಚಿದಂಬರ್, ಮುಖಂಡರಾದ ವಿಜಯಲಕ್ಷ್ಮೀ ರಘುನಂದನ್, ಕೆ.ಎಚ್. ನಾಗರಾಜು, ರಾಮಕೃಷ್ಣ, ಮುಜಾಹಿದ್ ಗೋಷ್ಠಿಯಲ್ಲಿದ್ದರು.

Share this article