ಗದಗ: ರಾಜ್ಯದ 175ಕ್ಕೂ ಹೆಚ್ಚಿನ ತಾಲೂಕುಗಳಲ್ಲಿ ತೀವ್ರವಾದ ಬರಗಾಲವಿದ್ದು, ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ಮಾತ್ರ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ, ಕೂಡಲೇ ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಜಿಲ್ಲಾ ಜೆಡಿಎಸ್ ಗ್ರೀನ್ ರಿಬ್ಬನ್ ಅಭಿಯಾನ ಹೆಸರಿನಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗೋವಿಂದಗೌಡ್ರ ಫೆ. 16ರಂದು ಸಿದ್ದರಾಮಯ್ಯ ಮಂಡಿಸಲಿರುವ ಬಜೆಟ್‌ನಲ್ಲಿ ರೈತರ ಎಲ್ಲಾ ಸಾಲಗಳನ್ನು ಸಂಪೂರ್ಣವಾಗಿ, ಯಾವುದೇ ಕರಾರುಗಳಿಲ್ಲದೇ ಮನ್ನಾ ಮಾಡಬೇಕು, ಗ್ರಾಮೀಣ ಪ್ರದೇಶದಲ್ಲಿನ ರೈತರಿಗೆ ನಿರಂತರವಾಗಿ 12 ತಾಸು ತ್ರಿಫೇಸ್ ವಿದ್ಯುತ್ ಪೂರೈಕೆ ಮಾಡಬೇಕು.
ರೈತರು ಕೃಷಿಗಾಗಿ ಉಪಯೋಗಿಸುವ ಕೃಷಿ ಸಲಕರಣೆಗಳಾದ ಟ್ರ್ಯಾಕ್ಟರ್ ಸೇರಿದಂತೆ ವಿವಿಧ ಸಾಮಗ್ರಿಗಳ ಮೇಲಿನ ಸಾಲ ವಸೂಲಾತಿಯನ್ನು ಒಂದು ವರ್ಷ ಮುಂದೂಡಬೇಕು. ಬರಪೀಡಿತ ತಾಲೂಕುಗಳಲ್ಲಿನ ರೈತರಿಗೆ ತಕ್ಷಣವೇ ಬರ ಪರಿಹಾರವನ್ನು ನೀಡಬೇಕು. ರೈತರ ಜಾನುವಾರುಗಳಿಗೆ ಮೇವು ಸೇರಿದಂತೆ ಎಲ್ಲಾ ಸಾಮಗ್ರಿಗಳನ್ನು ಉಚಿತವಾಗಿ ತಲುಪಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಎಂ.ಎಸ್.ಪರ್ವತಗೌಡ್ರ, ಬಸವರಾಜ ಅಪ್ಪಣ್ಣವರ, ಪ್ರಪುಲ್ ಪುಣೇಕರ ಸೇರಿದಂತೆ ನೂರಾರು ಸಂಖ್ಯೆಯ ಕಾರ್ಯಕರ್ತರು, ರೈತರು ಪಾಲ್ಗೊಂಡಿದ್ದರು.