ದಳದಿಂದ ‘ಸಾಕಪ್ಪ ಸಾಕು ಕಾಂಗ್ರೆಸ್‌ ಸರ್ಕಾರ’ಅಭಿಯಾನ

KannadaprabhaNewsNetwork | Published : Apr 10, 2025 1:00 AM

ಸಾರಾಂಶ

ಬೆಲೆ ಏರಿಕೆ ಖಂಡಿಸಿ ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿ ಕಹಳೆ ಮೊಳಗಿಸಿದ ಬೆನ್ನಲ್ಲೇ ಪ್ರತಿಪಕ್ಷ ಜೆಡಿಎಸ್​ ಸಹ​ ವಿನೂತನ ಪೋಸ್ಟರ್​​ ಅಭಿಯಾನ ಆರಂಭಿಸಿದ್ದು, ‘ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ’ ಹೆಸರಲ್ಲಿ ಅಭಿಯಾನ ಆರಂಭಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೆಲೆ ಏರಿಕೆ ಖಂಡಿಸಿ ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿ ಕಹಳೆ ಮೊಳಗಿಸಿದ ಬೆನ್ನಲ್ಲೇ ಪ್ರತಿಪಕ್ಷ ಜೆಡಿಎಸ್​ ಸಹ​ ವಿನೂತನ ಪೋಸ್ಟರ್​​ ಅಭಿಯಾನ ಆರಂಭಿಸಿದ್ದು, ‘ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ’ ಹೆಸರಲ್ಲಿ ಅಭಿಯಾನ ಆರಂಭಿಸಿದೆ.

ಇದೇ ವೇಳೆ ಬೆಲೆ ಏರಿಕೆ ವಿರುದ್ಧ ಜನಜಾಗೃತಿ ಮೂಡಿಸಲು ಶನಿವಾರ ನಗರದ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್‌ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.

ಜೆಡಿಎಸ್‌ ಯುವಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ‘ಸಾಕಪ್ಪಾ ಸಾಕು ಕಾಂಗ್ರೆಸ್ ಸರ್ಕಾರ’ ಎಂಬ ಅಭಿಯಾನ ಪ್ರಾರಂಭಿಸಿದೆ. ಪಕ್ಷದ ಕಾರ್ಯಕರ್ತರು ನಗರದ ಬಸ್‌ ನಿಲ್ದಾಣ ಸೇರಿ ವಿವಿಧೆಡೆ ಪೋಸ್ಟರ್‌ ಅಂಟಿಸುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

ಇದೇ ವೇಳೆ ವಿದ್ಯುತ್, ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಪ್ರಸ್ತಾಪಿಸಿ ‘ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ’ ಹೆಸರಲ್ಲಿ ಹಾಡನ್ನು ಸಹ ಬಿಡುಗಡೆ ಮಾಡಿದೆ. ಮೂರು ನಿಮಿಷಗಳ ಹಾಡಿನಲ್ಲಿ ಸರ್ಕಾರದ ವಿರುದ್ಧ ಲೇವಡಿ ಮಾಡಲಾಗಿದೆ. ಪೋಸ್ಟರ್‌ನಲ್ಲಿನ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿದರೆ ಎಲ್ಲ ಮಾಹಿತಿ ಲಭ್ಯವಾಗಲಿದೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಯುವಘಟಕ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಅವರು ಅಭಿಯಾನ ಕುರಿತು ಮಾಹಿತಿ ನೀಡುವುದರ ಜತೆಗೆ https://www.saakappasaaku.com ಎಂಬ ನೂತನ ವೆಬ್‌ಸೈಟ್‌ ಲೋಕಾರ್ಪಣೆಗೊಳಿಸಿದರು.

ಬಳಿಕ ಮಾತನಾಡಿದ ಅವರು, ಈ ವೆಬ್‌ಸೈಟ್‌ನಲ್ಲಿ ಜೆಡಿಎಸ್ ಕಾರ್ಯಕರ್ತರು ಮಾತ್ರವಲ್ಲ, ರಾಜ್ಯದ ಯಾರೇ ಆದರೂ ನೋಂದಣಿ ಮಾಡಿಕೊಂಡರೂ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಹೇಳಿದರು.

ಶನಿವಾರ ಬೃಹತ್ ಪ್ರತಿಭಟನೆ

ಬೆಲೆ ಏರಿಕೆ ವಿರುದ್ಧ ಜನರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇದೇ ಶನಿವಾರ ಬೆಂಗಳೂರಿನಲ್ಲಿನ ಫ್ರೀಡಂಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ಪಕ್ಷದ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು. ಸರ್ಕಾರ ವಿರುದ್ಧ ಆರಂಭಿಸಿರುವ ಅಭಿಯಾನವು ಕೇವಲ ಒಂದೆರಡು ದಿನಕ್ಕೆ ಸಿಮೀತವಾಗಿರುವುದಿಲ್ಲ. ಅದು ನಿರಂತರವಾಗಿ ನಡೆಸಲಾಗುತ್ತದೆ ಎಂದು ನಿಖಿಲ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್ ಬಾಬು, ಶಾಸಕ ಸ್ವರೂಪ್ ಪ್ರಕಾಶ್, ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಸಂಸದ ಮಲ್ಲೇಶ್ ಬಾಬು ಮತ್ತಿತರರು ಉಪಸ್ಥಿತರಿದ್ದರು.

Share this article