ಬಿಜೆಪಿ ಅಭ್ಯರ್ಥಿಗಳಿಗೆ ಜೆಡಿಎಸ್‌ ಶಾಸಕ ಕಂದಕೂರು ಬೆಂಬಲ

KannadaprabhaNewsNetwork |  
Published : Apr 18, 2024, 02:19 AM IST
ಶರಣಗೌಡ ಕಂದಕೂರ,  ಜೆಡಿಎಸ್ ಶಾಸಕರು, ಗುರುಮಠಕಲ್ (17ವೈಡಿಆರ್9)  | Kannada Prabha

ಸಾರಾಂಶ

ಬಿಜೆಪಿ - ಜೆಡಿಎಸ್‌ ಮೈತ್ರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದ ಜಿಲ್ಲೆಯ ಗುರುಮಠಕಲ್ ಶಾಸಕ, ಜೆಡಿಎಸ್‌ನ ಶರಣಗೌಡ ಕಂದಕೂರು ಅವರ ಮನವೊಲಿಸುವಲ್ಲಿ ಬಿಜೆಪಿ ರಾಜ್ಯ ನಾಯಕರು ಯಶಸ್ವಿಯಾಗಿದ್ದು, ಮೈತ್ರಿ ಅಭ್ಯರ್ಥಿಗಳ ಬೆಂಬಲಕ್ಕೆ ಶಾಸಕ ಕಂದಕೂರು ಒಪ್ಪಿದ್ದಾರೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ಬಿಜೆಪಿ - ಜೆಡಿಎಸ್‌ ಮೈತ್ರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದ ಜಿಲ್ಲೆಯ ಗುರುಮಠಕಲ್ ಶಾಸಕ, ಜೆಡಿಎಸ್‌ನ ಶರಣಗೌಡ ಕಂದಕೂರು ಅವರ ಮನವೊಲಿಸುವಲ್ಲಿ ಬಿಜೆಪಿ ರಾಜ್ಯ ನಾಯಕರು ಯಶಸ್ವಿಯಾಗಿದ್ದು, ಮೈತ್ರಿ ಅಭ್ಯರ್ಥಿಗಳ ಬೆಂಬಲಕ್ಕೆ ಶಾಸಕ ಕಂದಕೂರು ಒಪ್ಪಿದ್ದಾರೆ. ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಉಮೇಶ ಜಾಧವ, ರಾಯಚೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಹಾಗೂ ಸುರಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ನರಸಿಂಹ ನಾಯಕ (ರಾಜೂಗೌಡ) ಪರ ಚುನಾವಣಾ ಪ್ರಚಾರಕ್ಕಿಳಿದು ಬೆಂಬಲಿಸಲು ಶಾಸಕ ಶರಣಗೌಡ ಕಂದಕೂರು ನಿರ್ಧರಿಸಿದ್ದಾರೆ. ಈ ಕುರಿತು, ಬುಧವಾರ ಸಂಜೆ ಕರೆದ ತುರ್ತು ಪತ್ರಿಕಾಗೋಷ್ಠಿಯಲ್ಲಿ ತಮ್ಮ ಈ ನಿರ್ಧಾರ ಪ್ರಕಟಿಸಿದರು. ಬಿಜೆಪಿ ಜೊತೆ ನಮ್ಮ ಪಕ್ಷದ (ಜೆಡಿಎಸ್‌) ನಾಯಕರು ಮೈತ್ರಿ ಮಾಡಿಕೊಂಡಿದ್ದಾರಾದರೂ, ಬಿಜೆಪಿ ನಾಯಕರು ನಮ್ಮನ್ನು ನಿರ್ಲಕ್ಷಿಸುತ್ತ ಬಂದಿದ್ದರು. ಇದು ಸಹಜವಾಗಿ ನನಗೆ ಹಾಗೂ ಕಾರ್ಯಕರ್ತರಿಗೆ ಮೈತ್ರಿ ಧರ್ಮ ಪಾಲನೆ ಆಗುತ್ತಿರಲಿಲ್ಲ ಎಂಬ ನೋವು ಕಾಡುತ್ತಿತ್ತು. ಇದನ್ನು ನಮ್ಮ ನಾಯಕರ ಗಮನಕ್ಕೆ ತಂದಿದ್ದೇನಲ್ಲದೆ, ಬೇಸರವನ್ನೂ ವ್ಯಕ್ತಪಡಿಸಿದ್ದೆ. ನಮ್ಮ ನಾಯಕರು ಹಾಗೂ ಮಾಜಿ ಸಿಎಂ ಎಚ್ಡಿಕೆ ಅವರು ಈ ಗೊಂದಲ ನಿವಾರಿಸಿದ್ದಾರೆ. ದೇಶ ಮತ್ತು ಪಕ್ಷ ಮುಖ್ಯ ಎಂಬ ಕಾರ್ಯಕರ್ತರ ಅಭಿಪ್ರಾಯಕ್ಕೆ ನಾನು ಬದ್ಧನಾಗಿದ್ದು, ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವೆ ಎಂದು ಶಾಸಕ ಕಂದಕೂರು ಹೇಳಿದರು. ಈ ಹಿಂದೆ 2019ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿತ್ತು. ಆ ಸಂದರ್ಭದಲ್ಲಿ ನನ್ನ ತಂದೆ, ಮಾಜಿ ಶಾಸಕ ದಿ. ನಾಗನಗೌಡ ಕಂದಕೂರು ಅವರಿದ್ದರು. ಈಗ ನನ್ನ ತಂದೆಯವರು ಇಲ್ಲದ ಮೊದಲ ಚುನಾವಣೆ ಆಗಿದೆ. ಹಠಾತ್ ನಿರ್ಧಾರ ತೆಗೆದುಕೊಳ್ಳಲು ಒಂದಿಷ್ಟು ಕಾಲಾವಕಾಶ ಬೇಕಾಯಿತು. ಪಕ್ಷದ ವರಿಷ್ಠರ ಅದೇಶದ ಮೇರೆಗೆ, ಕಲಬುರಗಿ ಮತ್ತು ರಾಯಚೂರು ಲೋಕಸಭೆಯಲ್ಲಿ ಮೈತ್ರಿ ಅಭ್ಯರ್ಥಿಗಳನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿ ತರುವುದಕ್ಕೆ ನಾನು ನನ್ನ ಕಾರ್ಯಕರ್ತರು ಬದ್ಧರಾಗಿದ್ದೇವೆ. ಇದರಲ್ಲಿ ಯಾವುದೇ ಅನುಮಾನ, ಗೊಂದಲ ಬೇಡ ಎಂದು ಸ್ಪಷ್ಟ ಪಡಿಸಿದರು. ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿ ಬಿಜೆಪಿಯ ಡಾ.ಉಮೇಶ ಜಾಧವ ಅವರು ನಾಮಪತ್ರ ಸಲ್ಲಿಸಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಭಾಗಿಯಾಗಲಿದ್ದಾರೆ. ಅವರೇ ಖುದ್ದಾಗಿ ಫೋನ್ ಮಾಡಿ ಆಗಮಿಸುವಂತೆ ಮನವಿ ಮಾಡಿದ್ದಾರೆ. ನಾನು ಸೇರಿದಂತೆ ನನ್ನ ಬೆಂಬಲಿಗರು ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗಿಯಾಗುತ್ತೇವೆ. ಶರಣಗೌಡ ಕಂದಕೂರ, ಜೆಡಿಎಸ್ ಶಾಸಕರು, ಗುರುಮಠಕಲ್

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ