ಹಾವೇರಿ: ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸುವುದಕ್ಕಾಗಿ ಸಂವಿಧಾನ ಬದಲಾವಣೆ ಕುರಿತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೀಡಿದ ಹೇಳಿಕೆ ಖಂಡಿಸಿ ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ನೇತೃತ್ವದಲ್ಲಿ ಜೆಡಿಎಸ್ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಈ ವೇಳೆ ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ಮಾತನಾಡಿ, ಕೇವಲ ಮುಸ್ಲಿಮರ ಓಲೈಕೆಗಾಗಿ ಕಾಂಗ್ರೆಸ್ ಸರ್ಕಾರ ಗುತ್ತಿಗೆಯಲ್ಲಿ ಶೇ. 4ರಷ್ಟು ಮೀಸಲಾತಿ ನೀಡಿದೆ. ಇದು ಸಂವಿಧಾನ ಬಾಹಿರವಾಗಿದ್ದು, ಇದರ ಅರಿವಿದ್ದರೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ತಮ್ಮ ಅನುಕೂಲತೆಗಾಗಿ ಸಂವಿಧಾನವನ್ನೇ ತಿದ್ದುಪಡಿ ಮಾಡುವ ಹೇಳಿಕೆ ನೀಡುತ್ತಿದ್ದಾರೆ. ಇದು ಅವರ ಕೆಳಮಟ್ಟದ ಬುದ್ಧಿಯನ್ನು, ಕಾಂಗ್ರೆಸ್‌ನ ಮನಸ್ಥಿತಿಯನ್ನು ತೋರಿಸುತ್ತದೆ. ಕೂಡಲೇ ಸರ್ಕಾರ ಇದನ್ನೆಲ್ಲ ಕೈಬಿಟ್ಟು ನೈಜ, ಜನಪರ ಆಡಳಿತ ನೀಡುವಂತೆ ಒತ್ತಾಯಿಸಿದರು. ಜೆಡಿಎಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಸಿದ್ದಣ್ಣ ಗುಡಿಮುಂದ್ಲರ ಮಾತನಾಡಿ, ನೂರಾರು ಪುಸ್ತಕಗಳನ್ನು ಓದಿ ಈ ದೇಶದ ಎಲ್ಲ ಸಮಾಜದ ಒಳಿತಿಗಾಗಿ ಡಾ. ಅಂಬೇಡ್ಕರ್ ಸಂವಿಧಾನವನ್ನು ಬರೆದಿದ್ದಾರೆ. ಆದರೆ ಒಂದೆರಡು ಪುಸ್ತಕ ಓದಿಕೊಂಡಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅದರ ಬದಲಾವಣೆಗೆ ಮುಂದಾಗಿರುವುದು ಸರಿಯಲ್ಲ. ಇದರ ವಿರುದ್ಧ ದೇಶಾದ್ಯಂತ ಜನರು ದಂಗೆ ಏಳಬೇಕಾಗುತ್ತದೆ. ಅಂಥ ಕಾರ್ಯಕ್ಕೆ ಡಿ.ಕೆ. ಶಿವಕುಮಾರ ಕಾರಣರಾಗಬಾರದು. ಇಂಥ ಬೇಜವಾಬ್ದಾರಿ ಹೇಳಿಕೆ ನೀಡಿರುವ ಡಿ.ಕೆ. ಶಿವಕುಮಾರ ಅವರನ್ನು ಸಿಎಂ ಸಿದ್ದರಾಮಯ್ಯ ಅವರು ಸಚಿವ ಸಂಪುಟದಿಂದ ವಜಾ ಮಾಡಬೇಕೆಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಎಸ್ಸಿ ವಿಭಾಗದ ತಾಲೂಕಾಧ್ಯಕ್ಷ ಹನುಮಂತಪ್ಪ ಭಿಷ್ಟಣ್ಣನವರ, ಮುಖಂಡರಾದ ನಿಂಗಪ್ಪ ಸಣ್ಣಕೊಟ್ರಪ್ಪನವರ, ರವೀಂದ್ರನಾಥ ಶಿವಪ್ಪನವರ, ಮೈಲಾರೆಪ್ಪ ಹರಿಜನ, ಮಲ್ಲೇಶಪ್ಪ ಬುಡ್ಡಣ್ಣನವರ, ಮೂಕಪ್ಪ ಪಡಿಯಪ್ಪನವರ, ಎಸ್.ಎಲ್. ಕಾಡದೇವರಮಠ, ರಾಮನಗೌಡ ಪಾಟೀಲ, ರವೀಂದ್ರ, ರಮೇಶ ಮಾಕನೂರ, ಮಾಲತೇಶ ಬಡಿಗೇರ, ಬಸವರಾಜ ಲಘುಬಿಗಿ, ಶಿವಾನಂದ ಹಿರೇಬಿದರಿ, ನಾಗರಾಜ ಕ್ಯಾವಿಕೇರಿ, ಮುತ್ತಪ್ಪ ಸೇರಿದಂತೆ ಇತರರು ಇದ್ದರು.
ನಗರದ ಪುರದ ಓಣಿಯ ಬಸವಣ್ಣನ ದೇವಸ್ಥಾನದಲ್ಲಿ ವೀರಾಪೂರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಸಹಯೋಗದೊಂದಿಗೆ ನಡೆದ ಉಚಿತ ಕಣ್ಣಿನ ಹಾಗೂ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.