ಕನ್ನಡಪ್ರಭ ವಾರ್ತೆ ಕೋಲಾರ
ವಿಧಾನಸಭಾ ಚುನಾವಣೆಗೆ ಇನ್ನು 3 ವರ್ಷ ಕಾಲಾವಕಾಶ ಇದೆಯಾದರೂ ನಿರಂತರ ಸಂಘಟನೆಯಿಂದ ಬೇರು ಮಟ್ಟದಿಂದ ಪಕ್ಷವನ್ನು ಸದೃಢಗೊಳಿಸಿದಾಗ ಮಾತ್ರ ಮುಂದೆ ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿಯಲು ಸಾಧ್ಯ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.ಜಿಲ್ಲಾ ಜೆಡಿಎಸ್ ಪಕ್ಷದಿಂದ ಬೈರೇಗೌಡರ ನಗರದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಮುಂಬರಲಿರುವ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಎದುರಿಸಬೇಕಾಗಿದೆ. ಈ ಹಿಂದೆ ಚುನಾವಣೆ 6 ತಿಂಗಳು ಇರುವಾಗ ಸಂಘಟನೆಗೆ ಮುಂದಾಗುತ್ತಿದ್ದ ಕಾಲ ಬದಲಾಗಿದ್ದು ಪ್ರಸ್ತುತ ಪಕ್ಷದ ಸಂಘಟನೆ ನಿರಂತರವಾಗಿರಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಕಳೆದ 2 ವರ್ಷದಿಂದ ನೀಡಿದ ಕೆಟ್ಟ ಆಡಳಿತವು ಐತಿಹಾಸಿಕ ದಾಖಲಾರ್ಹ. ಗ್ಯಾರಂಟಿಗಳ ನೆಪದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಈ ಕುರಿತು ಸ್ವತಃ ಕಾಂಗ್ರೆಸ್ ಪಕ್ಷದ ಶಾಸಕರೇ ಆತೃಪ್ತಿ ವ್ಯಕ್ತಪಡಿಸಿದ್ದಾರೆ. ಕಳೆದ ಎರಡು ವರ್ಷದಲ್ಲಿ ಪ್ರತಿ ಕ್ಷೇತ್ರಕ್ಕೆ ₹10 ಕೋಟಿ ನೀಡಿದ್ದಾರೆ. ಅಷ್ಟು ಹಣದಿಂದ ಕ್ಷೇತ್ರ ಅಭಿವೃದ್ಧಿ ಸಾಧ್ಯವೇ. ಗ್ಯಾರಂಟಿಗಳ ಮೂಲಕ ಆಮಿಷವುಡ್ಡಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿರುವುದಕ್ಕೆ ಜನರು ಸಹ ತಪ್ಪು ಮಾಡಿದ್ದೇವೆಂದು ಬೇಸರಪಡುತ್ತಿದ್ದಾರೆ ಎಂದು ಹೇಳಿದರು.ಕಾಂಗ್ರೆಸ್ ಸರ್ಕಾರವು ನುಡಿದಂತೆ ನಡೆಯುವ ಸರ್ಕಾರ ಎಂದು ಬೆನ್ನು ತಟ್ಟಿಕೊಳ್ಳುತ್ತಿದೆ, ಆದರೆ ಜನತೆಗೆ ನೀಡಿದ್ದ ಆಶ್ವಾಸನೆಯಂತೆ 5 ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವಲ್ಲಿ ವಿಫಲವಾಗಿದೆ. ಗ್ಯಾರಂಟಿ ಹಣವನ್ನು ಪ್ರತಿ ತಿಂಗಳು ನೀಡುತ್ತಿಲ್ಲ. ತಿಂಗಳಾನುಗಟ್ಟಲೇ ಬಾಕಿ ಉಳಿಸಿಕೊಂಡಿದ್ದಾರೆ. ಈ ಕುರಿತು ಮಾಧ್ಯಮವರು ಕೇಳಿದರೆ ಡಿಸಿಎಂ ನಾವು ಪ್ರತಿ ತಿಂಗಳು ನೀಡುತ್ತೇವೆಂದು ಹೇಳಿಲ್ಲ ಎಂದು ನುಣಿಚಿಕೊಳ್ಳುತ್ತಿದ್ದಾರೆ ಎಂದು ದೂರಿದರು.
ಕುಮಾರಸ್ವಾಮಿ ಅವರು ರಾಜ್ಯದಲ್ಲಿ 20+14 ತಿಂಗಳು ಮಾತ್ರ ಆಡಳಿತ ನೀಡಿದರೂ ಸಹ ಕಾಂಗ್ರೆಸ್ ಪಕ್ಷದ 60 ವರ್ಷದ ಆಡಳಿತದಲ್ಲಿ ಮಾಡಲಾಗದಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಿ ತೋರಿಸಿದ್ದಾರೆ.-ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಯುವ ಅಧ್ಯಕ್ಷ