ಕನ್ನಡಪ್ರಭ ವಾರ್ತೆ ಮಂಡ್ಯ
ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರ, ನಿರ್ದೇಶಕ ಎಂ.ಎಸ್.ರಘುನಂದನ್ ನೇತೃತ್ವದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರು ಸಹಾಯಕ ನಿಬಂಧಕರ ಕಚೇರಿ ಸೂಪರಿಂಟೆಂಡೆಂಟ್ ಮುತ್ತುರಾಜು ಎಂಬುವರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಎಂ.ಎಸ್.ರಘುನಂದನ್ ಮಾತನಾಡಿ, ಬನ್ನಹಟ್ಟಿ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆ ೨೩ ಮೇ ೨೦೨೫ರಲ್ಲಿ ನಡೆದಿತ್ತು. ಈ ಸಂಬಂಧ ಕೆಲವು ಅನರ್ಹ ಮತದಾರರು ಹೈಕೋರ್ಟ್‌ನಿಂದ ಮಧ್ಯಂತರ ಆದೇಶ ತಂದು ಚುನಾವಣೆಯಲ್ಲಿ ಮತ ಚಲಾಯಿಸಿದ್ದರು. ಹೈಕೋರ್ಟ್ ಚುನಾವಣೆ ಸಂಬಂಧ ಅಂತಿಮ ಆದೇಶವೇ ಅಂತಿಮ ಎಂದು ಹೇಳಿತ್ತು. ೨೯ ಅಕ್ಟೋಬರ್ ೨೦೨೫ರಂದು ಹೈಕೋರ್ಟ್ ಅಂತಿಮ ಆದೇಶ ಹೊರಡಿಸಿ ೧೨ ಮಂದಿ ಸದಸ್ಯರನ್ನು ಅನರ್ಹಗೊಳಿಸಿತ್ತು. ಇದರ ನಡುವೆ ನ.೨೮ರಂದು ಸಂಘದ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ಘೋಷಿಸಿದಾಗ ಹೈಕೋರ್ಟ್ ಚುನಾವಣೆಯನ್ನು ಮಾತ್ರ ನಡೆಸಿ ಫಲಿತಾಂಶ ಪ್ರಕಟಿಸದಂತೆ ಅಂತಿಮ ಆದೇಶದಲ್ಲಿ ತಿಳಿಸಿತ್ತು ಎಂದು ಹೇಳಿದರು.ನ್ಯಾಯಾಲಯದ ಆದೇಶ ಪ್ರತಿಯಲ್ಲಿ ಮುದ್ರಣ ದೋಷವಾಗಿದ್ದರಿಂದ ಅದನ್ನು ಸರಿಪಡಿಸಿಕೊಡಲು ಅರ್ಜಿ ಹಾಕಲಾಗಿತ್ತು. ಈ ವಿಷಯವನ್ನು ದೂರವಾಣಿ ಮೂಲಕ ಸೂಪರಿಂಟೆಂಡೆಂಟ್ ಮುತ್ತುರಾಜು ಅವರಿಗೆ ತಿಳಿಸಲಾಗಿತ್ತು. ಆದರೆ, ಕಾಂಗ್ರೆಸ್ ಪಕ್ಷದವರ ಒತ್ತಡಕ್ಕೆ ಮಣಿದು ತರಾತುರಿಯಲ್ಲಿ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಸಿ ಫಲಿತಾಂಶ ಪ್ರಕಟಿಸಿದ್ದಾರೆ. ಮುತ್ತುರಾಜು ಕಾಂಗ್ರೆಸ್ ಏಜೆಂಟರಂತೆ ವರ್ತಿಸಿದ್ದಾರೆ ಎಂದು ಆರೋಪಿಸಿದರು.
ಇದೇ ವೇಳೆ ಮಳವಳ್ಳಿ ತಾಲೂಕು ಹಲಗೂರು ಹೋಬಳಿಯ ಕೊನ್ನಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆ ಸಂಬಂಧ ಇದೇ ಮಾದರಿಯ ಪ್ರಕರಣ ಹೈಕೋರ್ಟ್‌ನಲ್ಲಿ ದಾಖಲಿಸಲಾಗಿತ್ತು. ಸರ್ಕಾರದ ವಕೀಲರ ಮೂಲಕ ಚುನಾವಣಾಧಿಕಾರಿಗೆ ನಿರ್ದೇಶನ ನೀಡಿ ಚುನಾವಣೆ ನಡೆಯದಂತೆ ತಡೆಹಿಡಿಯಲಾಗಿತ್ತು ಎಂದು ಹೇಳಿದರು.
ಸ್ಥಳಕ್ಕೆ ಆಗಮಿಸಿದ ಸಹಕಾರ ನಿಬಂಧಕಿ ಶೀಲಾ ಅವರು ಪ್ರತಿಭಟನಾ ನಿರತರೊಂದಿಗೆ ಮಾತುಕತೆ ನಡೆಸಿದರು. ಹೈಕೋರ್ಟ್ ತೀರ್ಪಿನ ಸಂಬಂಧ ಸರ್ಕಾರಿ ವಕೀಲರೊಂದಿಗೆ ಮಾತುಕತೆ ನಡೆಸಿ ಮುಂದಿನ ಕ್ರಮ ವಹಿಸುವ ಭರವಸೆ ನೀಡಿದ ನಂತರ ಪ್ರತಿಭಟನಾಕಾರರು ಸ್ಥಳದಿಂದ ನಿರ್ಗಮಿಸಿದರು.