ಜೆಡಿಎಸ್ ಪ್ರತಿಭಟನೆಗೆ ನೈತಿಕತೆ ಇಲ್ಲ ಶಾಸಕ ಸ್ವರೂಪ್‌ಗೆ ಪ್ರೀತಂ ಗೌಡ ಟಾಂಗ್‌

KannadaprabhaNewsNetwork |  
Published : Oct 20, 2025, 01:02 AM IST
19ಎಚ್ಎಸ್ಎನ್15 :  | Kannada Prabha

ಸಾರಾಂಶ

ಹಾಸನಾಂಬೆ ಉತ್ಸವದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಶಾಸಕ ಸ್ವರೂಪ್ ಪ್ರಕಾಶ್ ಅವರನ್ನು ಕಡೆಗಣಿಸಲಾಗಿದೆ ಎಂಬ ಆರೋಪದ ಮೇಲೆ ಜೆಡಿಎಸ್ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಪ್ರೀತಂ ಗೌಡ ಅವರು ತೀವ್ರ ಟೀಕೆ ಮಾಡಿದ್ದಾರೆ. ಸ್ಥಳೀಯ ಶಾಸಕನಾಗಿ ಉತ್ಸವವನ್ನು ತಮ್ಮ ವೈಯಕ್ತಿಕ ಕಾರ್ಯಕ್ರಮದಂತೆ ನೋಡಿಕೊಳ್ಳಬೇಕಾದವರು ವಿದೇಶದ ಪ್ರವಾಸ ಮುಗಿಸಿ ಉತ್ಸವದ ಹಿಂದಿನ ದಿನ ಮಾತ್ರ ಹಾಜರಾದರು. ಈಗ ತಮ್ಮನ್ನ ಕಡೆಗಣಿಸಲಾಗಿದೆ ಎಂದು ಹೇಳುವುದು ಹಾಸ್ಯಾಸ್ಪದ ಎಂದು ವಾಗ್ದಾಳಿ ಮಾಡಿದರು.

ಕನ್ನಡಪ್ರಭ ವಾರ್ತೆ ಹಾಸನ

ಹಾಸನಾಂಬೆ ಉತ್ಸವದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಶಾಸಕ ಸ್ವರೂಪ್ ಪ್ರಕಾಶ್ ಅವರನ್ನು ಕಡೆಗಣಿಸಲಾಗಿದೆ ಎಂಬ ಆರೋಪದ ಮೇಲೆ ಜೆಡಿಎಸ್ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಪ್ರೀತಂ ಗೌಡ ಅವರು ತೀವ್ರ ಟೀಕೆ ಮಾಡಿದ್ದಾರೆ.

ನಗರದಲ್ಲಿ ಖಾಸಗಿ ಹೋಟೆಲೊಂದರಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನಾಂಬೆ ಉತ್ಸವದ ಪೂರ್ವಭಾವಿ ಸಭೆಗಳಿಗೆ ಶಾಸಕ ಸ್ವರೂಪ್ ಪ್ರಕಾಶ್ ಅವರು ಭಾಗವಹಿಸದೇ ನಿರ್ಲಕ್ಷ್ಯ ತೋರಿರುವುದು ಸರಿಯಲ್ಲ. ಸ್ಥಳೀಯ ಶಾಸಕನಾಗಿ ಉತ್ಸವವನ್ನು ತಮ್ಮ ವೈಯಕ್ತಿಕ ಕಾರ್ಯಕ್ರಮದಂತೆ ನೋಡಿಕೊಳ್ಳಬೇಕಾದವರು ವಿದೇಶದ ಪ್ರವಾಸ ಮುಗಿಸಿ ಉತ್ಸವದ ಹಿಂದಿನ ದಿನ ಮಾತ್ರ ಹಾಜರಾದರು. ಈಗ ತಮ್ಮನ್ನ ಕಡೆಗಣಿಸಲಾಗಿದೆ ಎಂದು ಹೇಳುವುದು ಹಾಸ್ಯಾಸ್ಪದ ಎಂದು ವಾಗ್ದಾಳಿ ಮಾಡಿದರು.

ಉತ್ಸವದ ವೇಳೆ ಬೇಕಾದಷ್ಟು ಪಾಸ್‌ಗಳನ್ನು ಪಡೆದು ತಮ್ಮ ಕಾರ್ಯಕರ್ತರಿಗೆ ಹಂಚಿದಾಗ ಜಿಲ್ಲಾಡಳಿತ ಸರಿಯಾಗಿತ್ತು. ಈಗ ಮಾತ್ರ ಅದೇ ಆಡಳಿತದ ವಿರುದ್ಧ ಪ್ರತಿಭಟನೆ ನಡೆಸುವುದು ಯಾವ ನೈತಿಕತೆ? ಜನರ ಮುಂದೆ ಶಾಸಕರು ಈ ಪ್ರಶ್ನೆಗೆ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.

ಶಾಸಕರಿಂದಲೇ ಎಚ್ಡಿಕೆಗೆ ಅವಮಾನ:

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಜಿಲ್ಲಾಡಳಿತ ಅಪಮಾನ ಮಾಡಿಲ್ಲ. ನಿಜವಾದ ಅಪಮಾನ ಶಾಸಕರಿಂದಲೇ ಆಗಿದೆ. ಸ್ಥಳೀಯ ಶಾಸಕನಾಗಿ ಅವರು ಮೊದಲೇ ಆಗಮಿಸಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗಿತ್ತು. ಆದರೆ ಅವರು ಅತಿಥಿಯಂತೆ ಬಂದು ಪಾಲ್ಗೊಂಡರು. ಇದು ಅವರ ಕರ್ತವ್ಯ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಟೀಕಿಸಿದರು. ಇನ್ನು ಹಾಸನಾಂಬೆ ದೇವಿ ಬಾಗಿಲು ತೆಗೆಯುವ ಮೊದಲು ಸಭೆ ನಡೆಸಿದಾಗ ಪಾಲ್ಗೊಳ್ಳಬೇಕಾಗಿತ್ತು. ಆದರೇ ವಿದೇಶ ಪ್ರವಾಸ ಮಾಡಿ ಗೆಸ್ಟ್ ರೀತಿಯಲ್ಲಿ ಬಾಗಿಲು ತೆಗೆಯುವ ದಿನ ಬಂದು ಹಾಸನಾಂಬೆ ಉತ್ಸವದಲ್ಲಿ ಪಾಲ್ಗೊಂಡು ನಂತರ ೧೦ ದಿನವಾದ ಮೇಲೆ ಭಾನುವಾರ ಬಂದು ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ, ಜನಪ್ರತಿನಿಧಿಗಳಿಗೆ ಗೌರವ ಕೊಡುತ್ತಿಲ್ಲ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಗಳನ್ನ ಮತ್ತು ಉಸ್ತುವಾರಿ ಸಚಿವರನ್ನು ದೂರುವುದು ಸುಲಭ, ಇವರು ಆಗಾಗ್ಗೆ ಬದಲಾವಣೆ ಆಗುತ್ತಿರುತ್ತಾರೆ. ಆದರೆ ಐದು ವರ್ಷಕ್ಕೆ ಒಬ್ಬ ಶಾಸಕನನ್ನು ಆಯ್ಕೆ ಮಾಡುತ್ತಾರೆ. ಗೌರವವನ್ನು ಕೇಳಿ ಪಡೆಯುವಂತದಲ್ಲ, ದುಡಿಮೆ ಮಾಡಿ ಪಡೆಯಬೇಕು. ಹಾಸನಾಂಬೆ ಬಗ್ಗೆ ಮಾಹಿತಿ ಪಡೆಯಲು ಎಷ್ಟು ಬಾರಿ ಜಿಲ್ಲಾ ಉಸ್ತುವಾರಿ ಸಚಿವರನ್ನ ಭೇಟಿ ಮಾಡಿದ್ದೀರಿ!, ಏನು ಮನವಿ ಮಾಡಿದ್ದೀರಿ, ಡಿಸಿ ಜೊತೆ ಚರ್ಚಿಸಿದ್ದೀರಿ ಹೇಳಿ ಮೊದಲು. ಆಮೇಲೆ ಸ್ಪಂದಿಸಿಲ್ಲ ಗೌರವ ಕೊಟ್ಟಿಲ್ಲ ಎಂದರೇ ಪಕ್ಷಾತೀತವಾಗಿ ಇಡೀ ಹಾಸನದ ಜನ ನಿಮ್ಮ ಜೊತೆ ನಿಲ್ಲುತ್ತಾರೆ. ನಿಮ್ಮ ಕೆಲಸ ಆಗಬೇಕು ಎಂದಾಗ ಸರ್ಕಾರದ ಎಲ್ಲಾ ಮಂತ್ರಿಗಳ ಬಳಿ ಹೋಗುತ್ತೀರಿ, ಸಂಜೀವಿನಿ ಬ್ಯಾಂಕಿನ, ಆಸ್ಪತ್ರೆಯ, ಸೌಹಾರ್ದ ಬ್ಯಾಂಕಿನ ಸಮಸ್ಯೆ ಆದರೇ ಉಸ್ತುವಾರಿ ಸಚಿವರಗಳ ಮನೆಗೆ ಹೋಗಿ ನಿಮ್ಮ ವೈಯಕ್ತಿಕ ಕೆಲಸ ಎಲ್ಲಾ ಮಾಡಿಕೊಳ್ಳುತ್ತೀರಿ, ಹಾಸನಾಂಬೆ ಜಾತ್ರಾ ಮಹೋತ್ಸವ ಎಂದರೆ ಎಲ್ಲಾ ಮಾಡುತ್ತಾರೆ ನಾನು ಹೋಗಿ ಉದ್ಘಾಟನೆಗೆ ಮುಂದೆ ನಿಲ್ಲುವುದು ಬೇಜವಾಬ್ದಾರಿತನ ತೋರಿಸುತ್ತದೆ. ಈಗಾಗಲೇ ನಿಮಗೆ ಮೂರನೇ ಜಾತ್ರಾ ಮಹೋತ್ಸವ. ನೀವು ಬೇಜವಾಬ್ದಾರಿ ಅರಿಯದೇ ಈಗ ಅತಿಥಿಯ ರೀತಿ ನಡೆದುಕೊಂಡು ಗೌರವ ಕೊಡುತ್ತಿಲ್ಲ ಎಂದರೆ ಹೇಗೆ? ಉಸ್ತುವಾರಿ ಸಚಿವರೇ ಬೆಳಿಗ್ಗೆ ೪ ಗಂಟೆಗೆ ಬಂದು ಹೋಗುತ್ತಿದ್ದಾರೆ. ನಮಗೆ ಕಾಂಗ್ರೆಸ್ ಎಂದರೇ ವಿರೋಧ ಪಕ್ಷವೇ ಸರಿ. ಆದರೆ ಒಳ್ಳೆ ಕೆಲಸಕ್ಕೆ ನಾವು ಟೀಕಿಸಬಾರದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ ಇತರರು ಇದ್ದರು.

PREV

Recommended Stories

ಖಾಸಗಿ ಸಂಘಟನೆಗಳಿಗೆ ನಿಷೇಧ ಹೇರಿದ್ದು ಜಗದೀಶ್‌ ಶೆಟ್ಟರ್‌ : ಪರಂ
ಕರ್ನಾಟಕಕ್ಕೆ ₹385 ಕೋಟಿ ಕೇಂದ್ರೀಯ ನೆರೆ ಪರಿಹಾರ