ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಸೇರಿದ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಮೆರವಣಿಗೆ ಮೂಲಕ ಡಿಸಿ ಕಚೇರಿವರಿಗೆ ತೆರಳಿ, ಕಾಂಗ್ರೆಸ್ ಪಕ್ಷದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಕೇಂದ್ರ ಸರಕಾರದ ಮಹತ್ವಾಕಾಂಕ್ಷಿಯ ಮಹಿಳೆಯರಿಗೆ ಶೇ.33 ರಷ್ಟು ಮೀಸಲು ನೀಡಲು ವಿಧೇಯಕವನ್ನು ಲೋಕಸಭೆಯಲ್ಲಿ ಕೇಂದ್ರ ಸರಕಾರ ಮಂಡಿಸಿದ ಬಿಲ್ ಪ್ರತಿ ಪಕ್ಷಗಳ ವಿರೋಧದಿಂದ 2/3 ರಷ್ಟು ಬಹುಮತದ ಕೊರತೆಯಿಂದ ಬಿದ್ದು ಹೋಯಿತು. ಮಹಿಳೆಯರಿಗೆ ಸಿಗಬೇಕಾದ ಹಕ್ಕು ನೀಡಲು ಪ್ರತಿ ಪಕ್ಷಗಳು ಅದರಲ್ಲೂ ಕಾಂಗ್ರೆಸ್ ಪಕ್ಷ ವಿಧೇಯಕದ ಸೋಲಿಗೆ ಪ್ರಮುಖ ಕಾರಣವಾಗಿದೆ. ಈ ವಿಧೇಯಕದ ಸೋಲನ್ನು ವಿಜಯೋತ್ಸವವನ್ನಾಗಿ ಆಚರಿಸುವ ವಿರೋಧ ಪಕ್ಷಗಳ ನೀತಿ ಖಂಡನೀಯವಾದದ್ದು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ಮಾತನಾಡಿ, ಜೆಡಿಎಸ್ ಪಕ್ಷದ ವರಿಷ್ಠರಾಧ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾಗ, ಮಹಿಳೆಯರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಶೇ.33 ರಷ್ಟು ಮೀಸಲಾತಿ ನೀಡಿದ್ದರು. ಅವರು ದೇಶದ ಪ್ರಧಾನಿಯಾಗಿದ್ದಾಗ ಪ್ರಥಮ ಬಾರಿಗೆ ಮಹಿಳಾ ಮೀಸಲು ವಿಧೇಯಕವನ್ನು ಸಂಸತ್ ನಲ್ಲಿ ಮಂಡಿಸಿದ್ದರು. ಆದರೆ, ಬೆಂಬಲದ ಕೊರತೆ ಮತ್ತು ರಾಜಕೀಯ ಪಕ್ಷಗಳಲ್ಲಿ ಒಡಂಬಡಿಕೆ ಇಲ್ಲದ ಕಾರಣ ವಿಧೇಯಕ ಅಂಗೀಕಾರವಾಗಲಿಲ್ಲ ಎಂದ ಅವರು, ದೇಶದ ಮಹಿಳೆಯ ಸಬಲೀಕರಣಕ್ಕೆ ಸದಾ ವಿರೋಧಿ ನಿಲುವು ತೋರುತ್ತಿರುವ ಕಾಂಗ್ರೆಸ್ ಪಕ್ಷ ಮತ್ತು ವಿರೋಧ ಪಕ್ಷಗಳ ದೋರಣೆ ಖಂಡನಾರ್ಹ ಎಂದು ಹರಿಹಾಯ್ದರು.