ಸಚಿವ ಜಮೀರ ಅಹಮದ್‌ ವಜಾಕ್ಕೆ ಆಗ್ರಹಿಸಿ ಜೆಡಿಎಸ್‌ ಪ್ರತಿಭಟನೆ

KannadaprabhaNewsNetwork |  
Published : Jul 01, 2025, 12:48 AM IST
ಗದಗ ನಗರದ ಗಾಂಧಿ ವೃತ್ತದಲ್ಲಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.  | Kannada Prabha

ಸಾರಾಂಶ

ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ಆಡಳಿತ ವೈಫಲ್ಯ ಅನುಭವಿಸಿದ್ದು, ಭ್ರಷ್ಟಾಚಾರ, ಸ್ವಜನಪಕ್ಷಪಾತ ತಾಂಡವವಾಡುತ್ತಿದ್ದು, ಎಲ್ಲಾ ಇಲಾಖೆಗಳಲ್ಲೂ ಲಂಚಗುಳಿತನ ಮಿತಿ ಮೀರಿದೆ ಎಂದು ಆರೋಪಿಸಿ ಜಿಲ್ಲಾ ಜೆಡಿಎಸ್ ಕಾರ್ಯಕರ್ತರು ಸೋಮವಾರ ಗದಗ ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಗದಗ: ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ಆಡಳಿತ ವೈಫಲ್ಯ ಅನುಭವಿಸಿದ್ದು, ಭ್ರಷ್ಟಾಚಾರ, ಸ್ವಜನಪಕ್ಷಪಾತ ತಾಂಡವವಾಡುತ್ತಿದ್ದು, ಎಲ್ಲಾ ಇಲಾಖೆಗಳಲ್ಲೂ ಲಂಚಗುಳಿತನ ಮಿತಿ ಮೀರಿದೆ ಎಂದು ಆರೋಪಿಸಿ ಜಿಲ್ಲಾ ಜೆಡಿಎಸ್ ಕಾರ್ಯಕರ್ತರು ಸೋಮವಾರ ಗದಗ ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯ ವಕ್ತಾರ ವಿ.ಆರ್. ಗೋವಿಂದಗೌಡ್ರ, ಕಾಂಗ್ರೆಸ್ ಸರ್ಕಾರ ವ್ಯಾಪಕ ಭ್ರಷ್ಟಾಚಾರದಲ್ಲಿ ಮುಳುಗಿದೆ. ಅದರಲ್ಲಿಯೂ ವಸತಿ ಇಲಾಖೆಯಲ್ಲಿ ನಡೆದಿರುವ ಅಕ್ರಮಗಳನ್ನು ದಾಖಲೆಗಳ ಸಮೇತ ಕಾಂಗ್ರೆಸ್ ಶಾಸಕರೇ ಬಯಲು ಮಾಡಿದ್ದಾರೆ. ವಸತಿ ಸಚಿವ ಜಮೀರ್ ಅಹಮದ್ ಈ ಅಕ್ರಮದಲ್ಲಿ ನೇರವಾಗಿ ಭಾಗಿಯಾಗಿದ್ದು ಅವರನ್ನು ಸಚಿವ ಸಂಪುಟದಿಂದ ಕೂಡಲೇ ವಜಾಗೊಳಿಸಬೇಕು.

ಕಾಂಗ್ರೆಸ್‌ನ ಹಿರಿಯ ಶಾಸಕರು ಮತ್ತು ಮುಖಂಡರೇ ರಾಜ್ಯ ಸರ್ಕಾರದ ವಿರುದ್ಧ, ಅದರಲ್ಲೂ ಸಚಿವರ ವಿರುದ್ಧ ಮಾಧ್ಯಮಗಳಲ್ಲಿ ಸಾಕ್ಷಿ ಸಮೇತ ಆರೋಪ ಮಾಡಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ.

ವಸತಿ ಇಲಾಖೆಯಲ್ಲಿ ಬಡ ಮತ್ತು ಹಿಂದುಳಿದ ಕುಟುಂಬಗಳಿಗೆ ಮೀಸಲಾದ ವಸತಿ ಯೋಜನೆಗಳನ್ನು ಲಂಚ ನೀಡುವವರಿಗೆ ಮಾತ್ರ ನೀಡಲಾಗುತ್ತಿದೆ ಎನ್ನುವುದು ಸಾಬೀತಾಗಿದೆ. ರಾಜ್ಯ ಸರ್ಕಾರ ಮೂಲಭೂತ ಸೌಕರ್ಯಗಳಾದ ರಸ್ತೆ, ಸೇತುವೆ, ಕೆರೆ ಕಟ್ಟೆಗಳ ಪುನಶ್ಚೇತನ, ಒಳಚರಂಡಿ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಲ್ಲಿ ವಿಫಲವಾಗಿದೆ. ಗುತ್ತಿಗೆದಾರರ ಬಾಕಿ ಹಣ ಪಾವತಿಸುವಲ್ಲಿ ವಿಳಂಬ ಮಾಡುತ್ತಿರುವುದು ಸರ್ಕಾರದ ಬಡವರ ಮತ್ತು ರೈತ ವಿರೋಧಿ ನೀತಿಯನ್ನು ಎತ್ತಿ ತೋರಿಸುತ್ತದೆ. ಪರಿಶಿಷ್ಟರಿಗೆ ಮೀಸಲಾದ ಹಣದಲ್ಲಿ ತಾರತಮ್ಯ ಎಸಗಿ ಆ ವರ್ಗಕ್ಕೆ ಅನ್ಯಾಯ ಮಾಡಲಾಗುತ್ತಿದೆ. ಕೇವಲ ತುಷ್ಟೀಕರಣ ರಾಜಕಾರಣ ಮಾಡುತ್ತಾ, ರಾಜ್ಯದ ಜನತೆಗೆ ಘೋರ ಅನ್ಯಾಯ ಮಾಡಲಾಗುತ್ತಿದೆ.

ಕಳೆದ ಎರಡು ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳದೆ, ಜನರನ್ನು ವಂಚಿಸಲಾಗುತ್ತಿದೆ ಎಂದು ಹಿರಿಯ ಕಾಂಗ್ರೆಸ್ ಶಾಸಕರೇ ಆರೋಪಿಸಿದ್ದಾರೆ ಎಂದರು. ಈ ಹಿನ್ನೆಲೆಯಲ್ಲಿ, ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿರುವ ಸಚಿವ ಜಮೀರ್ ಅಹಮದ್ ಅವರನ್ನು ತಕ್ಷಣವೇ ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಬಸವರಾಜ ಅಪ್ಪಣ್ಣವರ, ಸಂತೋಷ ಪಾಟೀಲ, ರಮೇಶ ಹುಣಸಿಮರದ, ಸಿದ್ದಯ್ಯ ಹೊಂಬಾಳಿಮಠ, ಪ್ರಫುಲ್ ಪುಣೇಕರ್, ಜಿ.ಕೆ.‌ಕೊಳ್ಳಿಮಠ, ಎಂ.ಎಸ್. ಪರ್ತಗೌಡ್ರ, ವೈ.ಡಿ. ಹೂಗಾರ, ಜಯರಾಜ ವಾಲಿ, ಮಂಜುಳಾ ಮೇಟಿ, ಅಭಿಷೇಕ ಕಂಬಳಿ, ಎಸ್.ಎಸ್ . ಪಾಟೀಲ, ಎಚ್.ವಿ. ಮರಿಗೌಡ್ರ, ಫಕೀರಪ್ಪ ತುಳಿ, ಎಸ್.ವೈ. ಹೂಗಾರ, ರಾಯಸಾಬ ಡಾಲಾಯತ, ಜಾವೇದ ಕಾಗದಗಾರ, ವಿನಾಯಕ ಕಮ್ಮಾರ, ಮುತ್ತು ಬಡಿಗೇರ, ಅಮರೇಶ ಅಂಗಡಿ, ಕುಮಾರ ಜಿಗಳೂರ, ಮೌಲಾಹುಸೇನ ತಾಂಬೋಳಿ, ಉಮೇಶ ಹಿರೇಮಠ, ಅಭಿಷೇಕ ದೇಸಾಯಿ ಇತರರು ಇದ್ದರು.

ರಾಜೀವ್ ಗಾಂಧಿ ವಸತಿ ನಿಗಮದಡಿ ಮನೆ ಹಂಚಿಕೆಯಲ್ಲೂ ಭ್ರಷ್ಟಾಚಾರ ನಡೆದಿದೆ ಎಂದು ಕಾಂಗ್ರೆಸ್ ಶಾಸಕರೇ ಸಚಿವ ಜಮೀರ್ ಅಹಮದ್ ವಿರುದ್ಧ ನೇರವಾಗಿ ಆರೋಪಿಸಿದ್ದಾರೆ. ಕೂಡಲೇ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಜೆಡಿಎಸ್‌ ರಾಜ್ಯ ವಕ್ತಾರ ವಿ.ಆರ್. ಗೋವಿಂದಗೌಡ್ರ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ಷೇತ್ರದ ಕೆಲಸವನ್ನು ತಲೆಮೇಲೆ ಹೊತ್ತು ಮಾಡುವೆ
ಜಾತಿ ವೈಷಮ್ಯಕ್ಕೆ ಅವಕಾಶವಿಲ್ಲ:ಡಾ. ತೌಫೀಕ್‌ ಪಾರ್ಥನಳ್ಳಿ