ಅರಸೀಕೆರೆ ಜನತೆಯನ್ನು ಹಣದ ಆಧಾರದಲ್ಲಿ ಅಳೆಯುವಂತಹ ಹೇಳಿಕೆಗಳನ್ನು ಸಾರ್ವಜನಿಕವಾಗಿ ನೀಡಿರುವುದು ಜನಪ್ರತಿನಿಧಿಗೆ ಶೋಭಿಸುವುದಲ್ಲ. ಹಿರಿಯ ನಾಯಕ ದೇವೇಗೌಡರ ಸಮ್ಮುಖದಲ್ಲಿಯೇ ಇಂತಹ ಮಾತುಗಳನ್ನು ಆಡಿರುವುದು ಕ್ಷೇತ್ರದ ಜನರ ಗೌರವಕ್ಕೆ ಧಕ್ಕೆ ತಂದಿದೆ ಎಂದು ಆರೋಪಿಸಿದ ಅವರು, ಕ್ಷೇತ್ರದ ಅಭಿವೃದ್ಧಿಗೆ ತಮ್ಮದು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ದೇವೇಗೌಡರ ಸಹಕಾರ ದೊರಕಿಲ್ಲವೆಂದು ಯಾರಾದರೂ ಹೇಳುವುದಾದರೆ ಜೇನುಕಲ್ ಸಿದ್ದೇಶ್ವರಸ್ವಾಮಿ ಮುಂದೆ ಬಂದು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದರು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ಅರಸೀಕೆರೆ ವಿಧಾನಸಭಾ ಕ್ಷೇತ್ರದ ರಾಜಕೀಯದಲ್ಲಿ ಉಂಟಾಗಿರುವ ಅಸಮಾಧಾನ, ಒಳಗಲಭೆ ಮತ್ತು ಅಸಹ್ಯಕರ ಬೆಳವಣಿಗೆಗಳ ಕುರಿತು ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಮೊದಲ ಬಾರಿಗೆ ಬಹಿರಂಗವಾಗಿ ಗಂಭೀರ ಮಾತುಗಳನ್ನು ಆಡಿದ್ದು, ತಮ್ಮ ರಾಜಕೀಯ ಬದುಕಿನಲ್ಲಿನ ಅತ್ಯಂತ ನೋವಿನ ನಿರ್ಧಾರವೊಂದು ಇಂದು ಪಶ್ಚಾತ್ತಾಪವಾಗಿ ಕಾಡುತ್ತಿದೆ ಎಂದು ಭಾವನಾತ್ಮಕವಾಗಿ ಹೇಳಿಕೊಂಡರು.ನಗರದ ಬಂಜಾರ ಸೇವಾಲಾಲ್ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆ ಸಂದರ್ಭದಲ್ಲಿ ತಾಲೂಕಿನಲ್ಲೇ ದೊಡ್ಡ ಸಂಖ್ಯೆಯಲ್ಲಿ ಇರುವ ವೀರಶೈವ ಸಮಾಜದ ಹಿರಿಯರ ಅಭಿಪ್ರಾಯಗಳನ್ನು ಸಮರ್ಪಕವಾಗಿ ಪರಿಗಣಿಸದೇ ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ಪರೋಕ್ಷವಾಗಿ ಒಪ್ಪಿಕೊಂಡರು. ಕಾರ್ಯಕರ್ತರು ಹಾಗೂ ಮುಖಂಡರ ಶ್ರಮದಿಂದ ಆ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡರೂ, ನಂತರ ಅವರು ಪಕ್ಷದ ಹಾಗೂ ನಾಯಕರ ನಂಬಿಕೆಗೆ ಧಕ್ಕೆ ತಂದಿರುವುದು ನೋವುಂಟು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.ಕ್ಷೇತ್ರದ ಅಭಿವೃದ್ಧಿ ಎಂಬ ಹೆಸರಿನಲ್ಲಿ ಸಾರ್ವಜನಿಕ ಹಿತಾಸಕ್ತಿಗಿಂತ ವೈಯಕ್ತಿಕ ಹಾಗೂ ಕುಟುಂಬ ಆಧಾರಿತ ಚಟುವಟಿಕೆಗಳೇ ಹೆಚ್ಚಾಗಿ ನಡೆದಿವೆ. ಕ್ರಷರ್, ಜಲ್ಲಿಕಲ್ಲು, ಇಟ್ಟಿಗೆ ಸಿಮೆಂಟ್ ವ್ಯಾಪಾರ ಮತ್ತು ಖಾಸಗಿ ವರ್ಕ್‌ಶಾಪ್‌ಗಳ ಮೂಲಕ ಕೆಲವರ ಆರ್ಥಿಕ ಬೆಳವಣಿಗೆ ಮಾತ್ರ ಕಂಡುಬಂದಿದ್ದು, ಅರಸೀಕೆರೆ ಕ್ಷೇತ್ರದ ಸಮಗ್ರ ಅಭಿವೃದ್ಧಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ಅವರು ತೀವ್ರವಾಗಿ ಟೀಕಿಸಿದರು.ಅರಸೀಕೆರೆ ಜನತೆಯನ್ನು ಹಣದ ಆಧಾರದಲ್ಲಿ ಅಳೆಯುವಂತಹ ಹೇಳಿಕೆಗಳನ್ನು ಸಾರ್ವಜನಿಕವಾಗಿ ನೀಡಿರುವುದು ಜನಪ್ರತಿನಿಧಿಗೆ ಶೋಭಿಸುವುದಲ್ಲ. ಹಿರಿಯ ನಾಯಕ ದೇವೇಗೌಡರ ಸಮ್ಮುಖದಲ್ಲಿಯೇ ಇಂತಹ ಮಾತುಗಳನ್ನು ಆಡಿರುವುದು ಕ್ಷೇತ್ರದ ಜನರ ಗೌರವಕ್ಕೆ ಧಕ್ಕೆ ತಂದಿದೆ ಎಂದು ಆರೋಪಿಸಿದ ಅವರು, ಕ್ಷೇತ್ರದ ಅಭಿವೃದ್ಧಿಗೆ ತಮ್ಮದು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ದೇವೇಗೌಡರ ಸಹಕಾರ ದೊರಕಿಲ್ಲವೆಂದು ಯಾರಾದರೂ ಹೇಳುವುದಾದರೆ ಜೇನುಕಲ್ ಸಿದ್ದೇಶ್ವರಸ್ವಾಮಿ ಮುಂದೆ ಬಂದು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದರು.ಕೈಜಾರಿರುವ ಅರಸೀಕೆರೆ ವಿಧಾನಸಭಾ ಕ್ಷೇತ್ರವನ್ನು ಮರಳಿ ಪಡೆಯಲು ಜೆಡಿಎಸ್ ಪಕ್ಷದ ಎಲ್ಲ ಮುಖಂಡರು ಮತ್ತು ಕಾರ್ಯಕರ್ತರು ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಸಂಘಟಿತವಾಗಿ ಹೋರಾಟ ನಡೆಸಬೇಕಾಗಿದೆ ಎಂದು ಕರೆ ನೀಡಿದರು. ಈ ರೀತಿಯ ಒಗ್ಗಟ್ಟು ಮತ್ತು ಹೋರಾಟದ ಮೂಲಕ 2028ರ ವಿಧಾನಸಭಾ ಚುನಾವಣೆಯಲ್ಲಿ ಅರಸೀಕೆರೆಯಲ್ಲಿ ಜೆಡಿಎಸ್ ಅಭ್ಯರ್ಥಿಯ ಗೆಲುವು ಖಚಿತವೆಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.ಮಾಜಿ ಶಾಸಕ ಜಿ.ಎಸ್. ಪರಮೇಶ್ವರಪ್ಪ ಮಾತನಾಡಿ, ಅರಸೀಕೆರೆ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವು ವ್ಯಕ್ತಿ ಆಧಾರಿತವಲ್ಲದೆ ಜನಬೆಂಬಲ ಆಧಾರಿತ ರಾಜಕೀಯ ನೆಲೆಯನ್ನೇ ಹೊಂದಿದೆ ಎಂದು ಹೇಳಿದರು. ಪಕ್ಷದ ಬಲವು ಕಾಲಘಟ್ಟಕ್ಕನುಸಾರ ಬದಲಾಗಿಲ್ಲ; ಜನರೊಂದಿಗೆ ಕಟ್ಟಿಕೊಂಡ ನಂಟಿನ ಫಲವಾಗಿ ಜೆಡಿಎಸ್ ಸದಾ ದೃಢವಾಗಿ ನಿಂತಿದೆ ಎಂದು ಅಭಿಪ್ರಾಯಪಟ್ಟರು. ಹಿರಿಯ ನಾಯಕರಾದ ಎಚ್.ಡಿ. ದೇವೇಗೌಡರ ಮಾರ್ಗದರ್ಶನ ಮತ್ತು ಎಚ್.ಡಿ. ರೇವಣ್ಣ ಅವರ ಅನುಭವದ ಬೆಂಬಲದೊಂದಿಗೆ ಮುಖಂಡರು ಹಾಗೂ ಕಾರ್ಯಕರ್ತರು ಒಗ್ಗೂಡಿ ಕಾರ್ಯನಿರ್ವಹಿಸಿದರೆ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅರಸೀಕೆರೆ ಕ್ಷೇತ್ರವನ್ನು ಮತ್ತೆ ಜೆಡಿಎಸ್ ವಶಪಡಿಸಿಕೊಳ್ಳುವುದು ಸಾಧ್ಯವೆಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.ಪರಾಜಿತ ಅಭ್ಯರ್ಥಿ ಎನ್. ಆರ್. ಸಂತೋಷ್ ಮಾತನಾಡಿ, ಹಾಸನ ಜಿಲ್ಲೆಯ ರಾಜಕೀಯದಲ್ಲಿ ಎಚ್.ಡಿ. ರೇವಣ್ಣ ಅವರ ಪ್ರಭಾವ ಯಾವ ಸರ್ಕಾರ ಅಧಿಕಾರದಲ್ಲಿದ್ದರೂ ಸದಾ ಮುಂದುವರಿದೇ ಇರುತ್ತದೆ ಎಂದು ಹೇಳಿದರು. ಅವರ ಸಹಕಾರ ಮತ್ತು ಬೆಂಬಲದಿಂದ ಶಾಸಕರಾದವರು, ಭಸ್ಮಾಸುರನಂತೆ ವರ ಪಡೆದ ಬಳಿಕವೇ ಶಿವನಿಗೆ ತಿರುಗಿಬಿದ್ದಂತೆ, ತಮ್ಮನ್ನು ರಾಜಕೀಯವಾಗಿ ಬೆಳೆಸಿದ ರೇವಣ್ಣ ಕುಟುಂಬದ ವಿರುದ್ಧ ನಿಲುವು ತಾಳುತ್ತಿರುವುದು ಕೃತಜ್ಞತೆಯ ಕೊರತೆಯನ್ನೂ ರಾಜಕೀಯ ಶಿಷ್ಟಾಚಾರದ ಅವಮಾನವನ್ನೂ ತೋರಿಸುತ್ತದೆ ಎಂದು ತೀವ್ರವಾಗಿ ಟೀಕಿಸಿದರು. ಇಂತಹ ನಡೆ ಜನರ ವಿಶ್ವಾಸಕ್ಕೆ ಧಕ್ಕೆ ತರುವುದರ ಜೊತೆಗೆ ರಾಜಕೀಯ ಮೌಲ್ಯಗಳನ್ನು ಕುಸಿಯುವಂತೆ ಮಾಡುತ್ತದೆ ಎಂದು ಅವರು ಹೇಳಿದರು.ಅಭಿವೃದ್ಧಿಯ ಅರ್ಥವನ್ನು ಕೇವಲ ಕಾಂಕ್ರಿಟ್ ರಸ್ತೆ, ಕಟ್ಟಡಗಳು ಹಾಗೂ ಭೌತಿಕ ಮೂಲಸೌಕರ್ಯಗಳಿಗೆ ಸೀಮಿತಗೊಳಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟ ಅವರು, ತಾಲೂಕಿನ ಮಕ್ಕಳಿಗೆ ಉತ್ತಮ ಶಿಕ್ಷಣ, ಸರ್ಕಾರಿ ಉದ್ಯೋಗಗಳಲ್ಲಿ ಅವಕಾಶ ಹಾಗೂ ಗೌರವಯುತ ಬದುಕಿಗೆ ಪೂರಕ ವಾತಾವರಣ ನಿರ್ಮಿಸುವುದೇ ನಿಜವಾದ ಮತ್ತು ದೀರ್ಘಕಾಲೀನ ಅಭಿವೃದ್ಧಿ ಎಂದು ಹೇಳಿದರು. ಈ ನಿಟ್ಟಿನಲ್ಲಿ ಚಿಂತನೆ ಬದಲಿಸಿಕೊಳ್ಳದಿದ್ದರೆ ಮುಂದಿನ ಚುನಾವಣೆಯಲ್ಲಿ ಜನತೆಯೇ ತಕ್ಕ ಉತ್ತರ ನೀಡಲಿದೆ ಎಂದು ಎಚ್ಚರಿಸಿದರು.ಈ ಸಂದರ್ಭದಲ್ಲಿ ಯಾದವ ಸಮಾಜದ ಮುಖಂಡರು ಹಾಗೂ ಗ್ಯಾರಂಟಿ ಸಮಿತಿಯ ಉಪಾಧ್ಯಕ್ಷರಾದ ಜವನಪ್ಪ ಅವರು ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು. ಅವರೊಂದಿಗೆ ಇಂಬ್ರಾನ್, ನಾಸಿರ್ ಅಹಮದ್, ಮುನ್ನ ಸೇರಿದಂತೆ ಹಲವಾರು ಕಾರ್ಯಕರ್ತರು ಕೂಡ ಜೆಡಿಎಸ್‌ಗೆ ಸೇರಿದರು.ಸಭೆಯಲ್ಲಿ ಜೆಡಿಎಸ್ ಮುಖಂಡರಾದ ಬಾಣಾವರ ಅಶೋಕ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಶೇಖರಪ್ಪ, ಹೊಸೂರು ಗಂಗಾಧರ್, ಜಿಪಂ ಮಾಜಿ ಉಪಾಧ್ಯಕ್ಷ ಬಂಡಿಗೌಡ್ರ ರಾಜಣ್ಣ ಮಾತನಾಡಿದರು. ಈ ವೇಳೆ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಸ್.ಲಿಂಗೇಶ್, ಕರ್ನಾಟಕ ಕುರುಬರ ಸಂಘದ ರಾಜ್ಯ ಉಪಾಧ್ಯಕ್ಷ ಕೆಂಕೆರೆ ಕೇಶವಮೂರ್ತಿ, ನಗರಸಭೆ ಮಾಜಿ ಅಧ್ಯಕ್ಷ ಗಿರೀಶ್, ತಾಲೂಕು ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್, ಮುಖಂಡರಾದ ವೇಣು, ಲಾಳನಕೆರೆ ಯೋಗೇಶ್, ನಗರಸಭೆ ಮಾಜಿ ಸದಸ್ಯರಾದ ವಿದ್ಯಾಧರ್ ಹರ್ಷವರ್ಧನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.