ಕೊಪ್ಪಳ: ಕೊಪ್ಪಳ ಬಳಿ ಕಾರ್ಖಾನೆ ಸ್ಥಾಪನೆ ವಿರೋಧಿಸಿ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳ ನೇತೃತ್ವದಲ್ಲಿ ನಡೆದ ಹೋರಾಟಕ್ಕೆ ನಮ್ಮ ಪಕ್ಷವೂ ಬೆಂಬಲ ನೀಡಿದೆ. ಇದು, ರಾಜ್ಯ ಸರ್ಕಾರದ ಒಪ್ಪಂದದಿಂದ ಆಗಿರುವ ಕಾರ್ಖಾನೆಯಾಗಿದ್ದು, ಕೇಂದ್ರದ ಮುಂದೆ ಈ ಪ್ರಸ್ತಾವನೆಯೇ ಬಂದಿಲ್ಲ.
ಇದು, ಕೇಂದ್ರ ಉಕ್ಕು ಮತ್ತು ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕೊಪ್ಪಳ ಬಳಿ ಕಾರ್ಖಾನೆ ಸ್ಥಾಪಿಸುವ ಕುರಿತು ನೀಡಿದ ಪ್ರತಿಕ್ರಿಯೆ. ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೊಪ್ಪಳಕ್ಕೆ ಆಗಮಿಸಿದ್ದ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು.ಕಾರ್ಖಾನೆಗಳು ಜನವಸತಿ ಪ್ರದೇಶದಿಂದ ದೂರ ಇರಬೇಕು. ಜನರು ಸೇರಿದಂತೆ ಪರಿಸರಕ್ಕೆ ಧಕ್ಕೆಯಾಗದಂತೆ ಇರಬೇಕು. ಬಿಎಸ್‌ಪಿಎಲ್ ಕಾರ್ಖಾನೆಯನ್ನು ಕೊಪ್ಪಳ ಬಳಿ ಸ್ಥಾಪಿಸಲು ಮುಂದಾಗಿರುವುದನ್ನು ವಿರೋಧಿಸಿ ಈಗಾಗಲೇ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳ ನೇತೃತ್ವದಲ್ಲಿ ಪಕ್ಷಾತೀತವಾಗಿ ಹೋರಾಟ ನಡೆದಿದೆ. ಇದರಲ್ಲಿ ನಮ್ಮ ಪಕ್ಷದ ಸಿ.ವಿ. ಚಂದ್ರಶೇಖರ ಸೇರಿದಂತೆ ಅನೇಕರು ಭಾಗವಹಿಸಿದ್ದಾರೆ. ಅವರು ನಮ್ಮ ಅನುಮತಿ ಪಡೆದೇ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವುದರಿಂದ ಬಿಎಸ್‌ಪಿಎಲ್ ಕಾರ್ಖಾನೆ ಸ್ಥಾಪಿಸುವುದಕ್ಕೆ ನಮ್ಮ ಪಕ್ಷದ ವಿರೋಧ ಇದ್ದೆ ಇದೆ ಎಂದರು.
ಕೊಪ್ಪಳ ಬಳಿ ಕಾರ್ಖಾನೆ ಸ್ಥಾಪಿಸುವುದಕ್ಕೆ ಕೇಂದ್ರ ಸಚಿವರಾದ ನಿಮ್ಮ ನಿಲವು ಏನು ಎನ್ನುವುದಕ್ಕೆ ಉತ್ತರಿಸಿದ ಅವರು, ನಮ್ಮ ಪಕ್ಷದವರು ನಮ್ಮ ಅನುಮತಿಯೊಂದಿಗೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂದರು.ಇದು ರಾಜ್ಯ ಸರ್ಕಾರ ಮಾಡಿಕೊಂಡಿರುವ ಒಪ್ಪಂದವಾಗಿದೆ. ಆದರೆ, ಕೊಪ್ಪಳ ಬಳಿ ಕಾರ್ಖಾನೆ ಸ್ಥಾಪಿಸುವ ಸಂಬಂಧ ಕೇಂದ್ರದ ಮುಂದೆ ಯಾವುದೇ ಪ್ರಸ್ತಾಪ ಬಂದಿಲ್ಲ ಎಂದರು.
ಸ್ಟೀಲ್ ತಯಾರು ಮಾಡುವಂತಹ ಕೇಂದ್ರ ಸರ್ಕಾರದ ಅನೇಕ ಕಾರ್ಖಾನೆಗಳಿಗೆ ನಾನು ಭೇಟಿ ನೀಡಿದ್ದೇನೆ. ಅವುಗಳು ಪರಿಸರವನ್ನು ಕಾಪಾಡಲು ಹಸಿರೀಕರಣ ಮಾಡಿದ್ದಾರೆ. 35 ಸಾವಿರ ಎಕರೆಗೆ ಹಸಿರು ಬೆಳೆಸಿದ್ದಾರೆ. ಅಲ್ಲಿ ಜನರಿಗೆ ತೊಂದರೆಯಾಗದಂತೆ ಟೌನ್‌ಶಿಪ್ ಸಹ ಮಾಡಿದ್ದಾರೆ. ಆದರೆ, ಇಲ್ಲಿ ಅದ್ಯಾವುದೂ ಕಾಣುತ್ತಿಲ್ಲ ಎಂದರು.ರಾಜ್ಯ ಸರ್ಕಾರ ಕೂಡಲೇ ಜನರಿಗೆ ತೊಂದರೆಯಾಗುತ್ತಿರುವುದನ್ನು ಆಲಿಸಿ ಪರಿಹರಿಸಬೇಕು. ಕೈಗಾರಿಕೆ ಸ್ಥಾಪಿಸಬೇಕು, ಆದರೆ, ಅದರಿಂದ ಜನರಿಗೆ ತೊಂದರೆಯಾಗದಂತೆ ನೋಡುವುದು ರಾಜ್ಯ ಸರ್ಕಾರದ ಜವಾಬ್ದಾರಿ ಎಂದರು. ಕೈಗಾರಿಕಾ ನೀತಿ ರೂಪಿಸಬೇಕು ಎನ್ನುವ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳ ಮಾತಿಗೆ ಸಂಪೂರ್ಣ ಬೆಂಬಲವಿದೆ ಎಂದರು.
ರಾಜ್ಯ ಸರ್ಕಾರದ ಬಳಿ ಹಣಕಾಸಿನ ತೊಂದರೆ ಇಲ್ಲ. ಆದರೆ, ದುರ್ಬಳಕೆಯೇ ಜಾಸ್ತಿಯಾಗುತ್ತಿದೆ. ಈ ಕಾರಣಕ್ಕಾಗಿಯೇ ಅವರು ತಾವೇ ಘೋಷಣೆ ಮಾಡಿದ ಗ್ಯಾರಂಟಿಗೂ ಅನುದಾನ ನೀಡದಂತಹ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸರ್ಕಾರ ಕೇವಲ ಕೇಂದ್ರ ಸರ್ಕಾರವನ್ನು ದೂಷಣೆ ಮಾಡುವುದರಲ್ಲಿಯೇ ಕಾಲಕಳೆಯುತ್ತಿದೆಯೇ ಹೊರತು, ಜನರು ಅಧಿಕಾರ ಕೊಟ್ಟಿರುವುದಕ್ಕೆ ತಾನೇನು ಮಾಡಬೇಕು ಎಂದು ಯೋಚಿಸುತ್ತಿಲ್ಲ ಎಂದರು.ಜನರಿಗೆ ಉದ್ಯೋಗ ನೀಡಬೇಕು ಎನ್ನುವ ಕಾರಣಕ್ಕಾಗಿಯೇ ನಾನು ಮೊದಲು ಟಾಯ್ ಕ್ಲಸ್ಟರ್ ಸ್ಥಾಪಿಸಲು ಮುಂದಾಗಿದ್ದೆ. ಇದಲ್ಲದೆ ರಾಜ್ಯದ 9 ಸ್ಥಳಗಳಲ್ಲಿ ಟಾಯ್ ಕ್ಲಸ್ಟರ್ ಸ್ಥಾಪಿಸಬೇಕು ಎನ್ನುವುದು ನನ್ನ ಕಳಕಳಿಯಾಗಿತ್ತು. ಟಾಯ್ ಕ್ಲಸ್ಟರ್‌ನಲ್ಲಿ ಚೀನಾ ದೇಶದ ಸಿಂಹಪಾಲು ಜಗತ್ತಿನಾದ್ಯಂತ ಇದ್ದು, ಅದನ್ನು ನಾವು ಪಡೆಯವಂತಾಗಬೇಕು ಎಂದರು.ನಟ್ಟು ಬೋಲ್ಟ್ ಟೈಟ್ ಮಾಡಲು ಅಧಿಕಾರ ನೀಡಿಲ್ಲ: ಡಿಕೆಶಿಗೆ ಟಾಂಗ್
ಮೇಕೆದಾಟು ಹೋರಾಟದಲ್ಲಿ ಚಿತ್ರರಂಗದ ಕಲಾವಿದರು ಪಾಲ್ಗೊಂಡಿಲ್ಲ ಎನ್ನುವ ಕುರಿತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ನಟ್ ಬೋಲ್ಟ್ ಟೈಟ್ ಮಾಡಬೇಕು ಎಂದು ಹೇಳಿರುವುದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು, ಜನರು ಅಧಿಕಾರ ನೀಡಿರುವುದು ನಟ್-ಬೋಲ್ಟ್ ಟೈಟ್ ಮಾಡಲು ಅಲ್ಲ ಎಂದು ವ್ಯಂಗ್ಯವಾಡಿದ್ದಾರೆ.ಕೊಪ್ಪಳದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಅದರ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ. ಯಾರು ಬೆಂಬಲ ಕೊಟ್ಟಿದ್ದಾರೋ ಬಿಟ್ಟಿದ್ದಾರೆ ಅನ್ನುವುದಲ್ಲ. ಅವರಿಗೆ ರಾಜ್ಯದ ಜನರು 138 ಸ್ಥಾನಗಳನ್ನು ನೀಡಿರುವುದು ನಟ್-ಬೋಲ್ಟ್ ಟೈಟ್ ಮಾಡಲು ಅಲ್ಲ, ಜನರ ಸೇವೆ ಮಾಡಲು ಎಂದರು.
ರಾಜ್ಯ ರಾಜಕೀಯದ ಬಗ್ಗೆ ನಾನು ಹೇಳಲು ಹೋಗುವುದಿಲ್ಲ. ಯಾವಾಗ ಏನಾಗಬೇಕು ಅದು ಆಗುತ್ತದೆ. ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರುತ್ತಾರೆ ಎಂದು ಸಚಿವ ಜಮೀರ್ ಅಹಮದ್ ಹೇಳಿರುವುದಕ್ಕೆ ನೇರವಾಗಿ ಪ್ರತಿಕ್ರಿಯೆ ನೀಡದ ಅವರು, ಯಾರು ಏನಾಗುತ್ತಾರೆ, ಎಲ್ಲಿ ಸೇರುತ್ತಾರೆ ಎನ್ನುವುದು ಕಾಲವೇ ನಿರ್ಧರಿಸುತ್ತದೆ ಎಂದರು.ಇದೆಲ್ಲವನ್ನು ಮಾತನಾಡುವ ಕಾಂಗ್ರೆಸ್ ನಾಯಕರು, ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತೆ ಮಾಡುತ್ತಿಲ್ಲ. ಕಲ್ಯಾಣ ಕರ್ನಾಟಕ ಭಾಗಕ್ಕೆ ಘೋಷಣೆ ಮಾಡಿದ ₹5 ಸಾವಿರ ಕೋಟಿ ಪೈಕಿ ನಯಾ ಪೈಸೆ ನೀಡಿಲ್ಲ ಎಂದರು.