ಶಿವಮೊಗ್ಗ : ಜಿಲ್ಲೆಯಲ್ಲಿ ಬಾಲ್ಯ ವಿವಾಹ ಮತ್ತು ಪೋಕ್ಸೊ ಪ್ರಕರಣಗಳು ಹೆಚ್ಚು ದಾಖಲಾಗುತ್ತಿವೆ. ಇದರಲ್ಲಿ ಸರ್ಕಾರಿ ಶಾಲೆಯ 8, 9 ನೇ ತರಗತಿ ಹಾಗೂ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳೆ ಹೆಚ್ಚಾಗಿದ್ದಾರೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯೆ ಅಪರ್ಣಾ.ಎಂ ಕೊಳ್ಳಾ ಅಸಮಾಧಾನ ವ್ಯಕ್ತಪಡಿಸಿದರು.ನಗರದ ಜಿಲ್ಲಾ ಶೈಕ್ಷಣಿಕ ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಪಂ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಆರ್‌ಟಿಇ ಕಾಯ್ದೆಯ ಸಮರ್ಪಕ ಅನುಷ್ಠಾನದ ಕುರಿತು ಶಿಕ್ಷಣ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.ಸಮಾಜದಲ್ಲಿ ಈ ಪಿಡುಗನ್ನು ನಿವಾರಿಸಲು ಈಗಾಗಲೇ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಆಂದೋಲನ ಮಾಡುತ್ತಿದೆ. ಅದಕ್ಕೆ ಜಿಲ್ಲಾ ಶಿಕ್ಷಣ ಇಲಾಖೆಯು ಸಹಕಾರ ನೀಡುವ ಮೂಲಕ ಜಾಗೃತಿ ಮೂಡಿಸಬೇಕು. ಬಾಲ್ಯ ವಿವಾಹ ಮತ್ತು ಪೋಕ್ಸೋ ಪ್ರಕರಣಗಳಲ್ಲಿ ಹಿಂದಿಗಿಂತ 2024-25 ರಲ್ಲಿ ಹೆಚ್ಚಿನ ಪ್ರಕರಣಗಳು ಆಯೋಗದ ಗಮನಕ್ಕೆ ಬಂದಿವೆ. ಅದರಲ್ಲಿ ಸರ್ಕಾರಿ ಶಾಲೆಯ 8, 9 ನೇ ತರಗತಿ ಹಾಗೂ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳೆ ಹೆಚ್ಚಾಗಿದ್ದಾರೆ. ವಿದ್ಯಾರ್ಥಿಗಳು ಮನೆ ಬಿಟ್ಟರೆ ಶಾಲೆ- ಕಾಲೇಜಿನಲ್ಲಿ ಹೆಚ್ಚಿನ ಸಮಯ ಕಳೆಯುತ್ತಾರೆ. ಅವರೆಲ್ಲಾ ಹೊಣೆ, ರಕ್ಷಣೆ ಶಿಕ್ಷಣ ಇಲಾಖೆಯದ್ದಾಗಿದೆ ಎಂದರು.ಬಾಲ್ಯ ವಿವಾಹ ಹಾಗೂ ಪೋಕ್ಸೋ ಪ್ರಕರಣವನ್ನು ತಡೆಯುವಲ್ಲಿ ಶಿಕ್ಷಣ ಇಲಾಖೆ ಸಹಕರಿಸಬೇಕು. ಇದನ್ನು ತಡೆಗಟ್ಟುವಲ್ಲಿ ಜಿಲ್ಲಾ ಶಿಕ್ಷಣ ಇಲಾಖೆ ಮುಂದಾಗಬೇಕು. ಶಿಕ್ಷಣ ಇಲಾಖೆಯ ಅಡಿಯಲ್ಲಿ ಎಫ್‌ಐಆರ್ ದಾಖಲಾಗುವಂತೆ ಮಾಡಬೇಕು. ಆರ್‌ಟಿಇ ಕಾಯ್ದೆಯ ಬಗ್ಗೆ ಪ್ರತಿ ತಾಲೂಕಿನ ಬಿಇಒಗಳು ಗಮನಹರಿಸಬೇಕು. ಪ್ರತಿ ತಾಲೂಕಿನಲ್ಲಿ ಎಷ್ಟು ಮಕ್ಕಳು ಆರ್‌ಟಿಇ ಅಡಿಯಲ್ಲಿ ಶಾಲೆಗೆ ದಾಖಲಾಗಿದ್ದಾರೆ ಎಂಬ ಮಾಹಿತಿ ನೀಡಬೇಕು. ಖಾಸಗಿ ಮತ್ತು ಅನುದಾನಿತ ಶಾಲೆಗಳಲ್ಲಿ ಆರ್‌ಟಿಇ ಶಿಕ್ಷಣ ಸರಿಯಾದಕ್ರಮದಲ್ಲಿ ನೀಡುತ್ತಿದ್ದಾರೆಯೇ ಎಂದು ಪರಿಶೀಲನೆ ಮಾಡಬೇಕು. ಇದರಡಿಯಲ್ಲಿನ ಓದುವ ಮಕ್ಕಳಿಗೆ ಸರ್ಕಾರ ನೀಡುವ ಸೌಲಭ್ಯಗಳನ್ನು ಶಿಕ್ಷಣ ಇಲಾಖೆ ಸರಿಯಾಗಿ ತಲುಪಿಸಬೇಕು ಎಂದರು.
ಖಾಸಗಿ ಶಾಲೆಗಳಲ್ಲಿ ಆರ್‌ಟಿಇ ಮತ್ತು ಸಾಮಾನ್ಯ ವಿದ್ಯಾರ್ಥಿಗಳಿಗೆ ಫಲಿತಾಂಶದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ನನ್ನ ಗಮನಕ್ಕೆ ಬಂದಿದ್ದು, ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಗಮನ ಹರಿಸಬೇಕಿದೆ. ಸರ್ಕಾರವು ಇಂತಹ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಯ ಸೌಲಭ್ಯವನ್ನು ನೀಡಿದೆ. ಅದರ ಸರಿಯಾದ ಬಳಕೆ ಆಗುತ್ತಿದೆಯಾ ಎಂದು ಪರಿಶೀಲನೆ ಮಾಡಬೇಕು. ಇದಲ್ಲದೆ ಖಾಸಗಿ ಶಾಲೆಗಳು ಶುಲ್ಕದ ನೆಪದಲ್ಲಿ ಮಕ್ಕಳಿಗೆ ವರ್ಗಾವಣೆ ಪತ್ರ ನೀಡದಿದ್ದರೆ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.ಸಭೆಯಲ್ಲಿ ಡಿಡಿಪಿಐ ಎಸ್.ಆರ್.ಮಂಜುನಾಥ್, ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಯಾದ ಆರ್.ಮಂಜುನಾಥ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ತಾಜುದ್ದೀನ್ ಖಾನ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಕೃಷ್ಣಪ್ಪ, ಡಯಟ್ ಕಾಲೇಜ್ ಪ್ರಾಶುಂಪಾಲರಾದ ಬಿಂಬ ಮತ್ತಿತರರಿದ್ದರು.