ಕನ್ನಡಪ್ರಭ ವಾರ್ತೆ, ತುಮಕೂರುಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ ಜಲ್ ಜೀವನ್ ಮಿಷನ್ (ಜೆಜೆಎಂ) ಯೋಜನೆಗೆ ಸಂಬಂಧಿಸಿದಂತೆ ಬಾಕಿಯಿರುವ ಕಾರ್ಯಾದೇಶಗಳನ್ನು ಶೀಘ್ರವೇ ನೀಡಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಅವರು ಕಾರ್ಯನಿರ್ವಾಹಕ ಎಂಜಿನಿಯರ್ ಕುಮಾರಸ್ವಾಮಿ ಅವರಿಗೆ ಸೂಚಿಸಿದರು.ಮಂಗಳವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ವಿಡಿಯೋ ಸಂವಾದ ಬರಪೀಡಿತ ತಾಲೂಕುಗಳ ತುರ್ತು ಕುಡಿಯುವ ನೀರಿನ ಪೂರೈಕೆ ಕುರಿತು ನೀರು ಮತ್ತು ನೈರ್ಮಲ್ಯ ಸಭೆ ನಡೆಸಿ ಮಾತನಾಡಿದ ಅವರು, ಜಲ್ ಜೀವನ್ ಮಿಷನ್ ಯೋಜನೆಯಡಿ ಪ್ರತಿಯೊಂದು ಮನೆಗೂ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶವನ್ನು ಹೊಂದಲಾಗಿದ್ದು, ಕಾಮಗಾರಿಗೆ ಸಂಬಂಧಿಸಿದಂತೆ ಇನ್ನೂ 200 ಕಾರ್ಯಾದೇಶವನ್ನು ನೀಡಿರುವುದಿಲ್ಲ. ಕೂಡಲೇ ಕಾರ್ಯಾದೇಶ ನೀಡಿ ಕಾಮಗಾರಿಗಳನ್ನು ಪ್ರಾರಂಭಿಸಿ ಪೂರ್ಣಗೊಳಿಸಬೇಕು ಎಂದು ನಿರ್ದೇಶಿಸಿದರು.ಜಲ್ ಜೀವನ್ ಮಿಷನ್ ಕಾಮಗಾರಿಗಳನ್ನು ಕೈಗೊಳ್ಳುವಾಗ ಗುಣಮಟ್ಟವನ್ನು ಕಾಪಾಡಬೇಕು. ಅನುಷ್ಠಾನದಲ್ಲಿ ಯಾವುದೇ ರೀತಿಯ ಅಸಡ್ಡೆ ಅಥವಾ ಅಸಮರ್ಪಕ ಕಾರ್ಯನಿರ್ವಹಣೆಯನ್ನು ಸಹಿಸಲಾಗುವುದಿಲ್ಲ. ಪ್ರತಿಯೊಂದು ಕಾಮಗಾರಿ ಸ್ಥಳದಲ್ಲೂ ತಾಂತ್ರಿಕ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಬಳಕೆಯಾಗುವ ಸಾಮಗ್ರಿಗಳು ಗುಣಮಟ್ಟದ್ದಾಗಿರಬೇಕು ಹಾಗೂ ನೀರು ಪೂರೈಕೆ ಮಾರ್ಗಗಳಲ್ಲಿ ಸೋರಿಕೆ ಅಥವಾ ದೋಷ ಉಂಟಾಗದಂತೆ ನಿಗಾವಹಿಸಬೇಕು ಎಂದು ಹೇಳಿದರು.ಜಿಲ್ಲೆಯಲ್ಲಿ ಸಾರ್ವಜನಿಕ ನೀರು ಸರಬರಾಜು ಮಾಡುತ್ತಿರುವ ಕೊಳವೆಬಾವಿಗಳು ಬತ್ತಿ ಹೋದ ಸಂದರ್ಭಗಳಲ್ಲಿ ನೀರಿನ ಕೊರತೆಯಿಂದ ಜನತೆ ಸಂಕಷ್ಟ ಅನುಭವಿಸದಂತೆ ತಕ್ಷಣ ಕ್ರಮ ಕೈಗೊಳ್ಳಬೇಕು. ಕೊಳವೆಬಾವಿ ಬತ್ತಿರುವ ಸ್ಥಳಗಳಲ್ಲಿ ಹೊಸ ಸಾರ್ವಜನಿಕ ಕೊಳವೆಬಾವಿ ಕೊರೆಸಲು ಶೀಘ್ರವಾಗಿ ಪ್ರಸ್ತಾವನೆ ತಯಾರಿಸಿ ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಭೆಯಲ್ಲಿ ಶಾಸಕರ ಗಮನಕ್ಕೆ ತರಬೇಕು ಎಂದು ಹೇಳಿದರು.ಹೊಸ ಕೊಳವೆಬಾವಿ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಪರ್ಯಾಯವಾಗಿ ಹತ್ತಿರದ ಕೊಳವೆಬಾವಿ ಮೂಲಗಳಿಂದ ಸಾರ್ವಜನಿಕರಿಗೆ ತಾತ್ಕಾಲಿಕ ಕುಡಿಯುವ ನೀರು ಪೂರೈಕೆ ಮಾಡುವ ವ್ಯವಸ್ಥೆ ಮಾಡಬೇಕು. ಯಾವುದೇ ಗ್ರಾಮದಲ್ಲಿ ನೀರಿನ ತೊಂದರೆ ಉಂಟಾದರೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ಇದೇ ವೇಳೆ ಸಭೆಗೆ ಗೈರಾಗಿದ್ದ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಂಜೀವಪ್ಪ ಅವರಿಗೆ ಸೂಚನೆ ನೀಡಿದರಲ್ಲದೆ, ಸಭೆಗೆ ಹಾಜರಾಗುವುದು ಪ್ರತಿಯೊಬ್ಬ ಅಧಿಕಾರಿಯ ಜವಾಬ್ದಾರಿ. ಸರ್ಕಾರದ ಯೋಜನೆಗಳು ಪರಿಣಾಮಕಾರಿಯಾಗಿ ಜಾರಿಯಾಗಬೇಕಾದರೆ ಸಮನ್ವಯ ಅಗತ್ಯ ಎಂದು ಹೇಳಿದರು. ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಸುಸ್ಥಿತಿಯಲ್ಲಿರುವಂತೆ ಗಮನವಿಡಬೇಕು. ಘಟಕಗಳಲ್ಲಿ ನಿಯಮಿತವಾಗಿ ನೀರಿನ ಗುಣಮಟ್ಟ ಪರೀಕ್ಷೆ ನಡೆಸಿ, ಕ್ಲೋರಿನೇಷನ್ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಜಿಲ್ಲೆಯ ಎಲ್ಲಾ ಇಒಗಳಿಗೆ ಸೂಚನೆ ನೀಡಿದರು.ಘಟಕಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುವಂತೆ ತಿಳಿಸಿದರಲ್ಲದೆ, ಯಾವುದೇ ಘಟಕ ಕಾರ್ಯರಹಿತವಾಗಿರುವ ಮಾಹಿತಿ ಬಂದ ಕೂಡಲೇ ಸ್ಥಳೀಯ ಪಂಚಾಯಿತಿ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ ನೀರು ಪೂರೈಕೆ ವ್ಯತ್ಯಯವಾಗದಂತೆ ಕ್ರಮ ಕೈಗೊಳ್ಳಬೇಕು. ಜನರಿಗೆ ಶುದ್ಧ ನೀರಿನ ಪೂರೈಕೆ ನಿರಂತರವಾಗಿರಬೇಕು ಎಂದು ತಿಳಿಸಿದರು.ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾಧಿಕಾರಿ ಸಣ್ಣಮುಸಿಯಪ್ಪ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರಮೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಡಾ. ಸಿದ್ರಾಮಣ್ಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಡಾ. ಚಂದ್ರಶೇಖರ್, ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.