ನಂದಿನಿ ಪಾರ್ಲರ್‌ನಿಂದ ಉದ್ಯೋಗ ಸೃಷ್ಟಿ

KannadaprabhaNewsNetwork | Published : May 5, 2025 12:48 AM

ಸಾರಾಂಶ

ಸಾಗರ: ನಂದಿನ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಇದ್ದು ಸ್ವಯಂ ಉದ್ಯೋಗಿಗಳು ಆರ್ಥಿಕ ಚೈತನ್ಯ ಹೊಂದಲು ಸಾಧ್ಯವಿದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಅಭಿಪ್ರಾಯಪಟ್ಟರು.

ಸಾಗರ: ನಂದಿನ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಇದ್ದು ಸ್ವಯಂ ಉದ್ಯೋಗಿಗಳು ಆರ್ಥಿಕ ಚೈತನ್ಯ ಹೊಂದಲು ಸಾಧ್ಯವಿದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಅಭಿಪ್ರಾಯಪಟ್ಟರು.

ಪಟ್ಟಣದ ಪಶು ವೈದ್ಯಕೀಯ ಆಸ್ಪತ್ರೆ ಬಳಿ ಭಾನುವಾರ ನೂತನ ನಂದಿನಿ ಸ್ಕೂಪ್ ಪಾರ್ಲರ್ ಉದ್ಘಾಟಿಸಿ ಮಾತನಾಡಿದ ಅವರು, ನಂದಿನಿ ಪಾರ್ಲರ್ ಮೂಲಕ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗುತ್ತಿದೆ ಎಂದು ಹೇಳಿದರು.ಪಟ್ಟಣದ ಬಿ.ಎಚ್.ರಸ್ತೆ, ತಾಯಿ ಮಗು ಆಸ್ಪತ್ರೆ, ಉಪವಿಭಾಗೀಯ ಆಸ್ಪತ್ರೆ, ಬಸ್ ನಿಲ್ದಾಣ ಹಾಗೂ ರಿಪ್ಪನಪೇಟೆಯಲ್ಲಿ ಎರಡು ಕಡೆ ನಂದಿನಿ ಪಾರ್ಲರ್ ಪ್ರಾರಂಭಿಸಲಾಗಿದೆ. ಆನಂದಪುರ, ಹೊಸನಗರ ಭಾಗಗಳಲ್ಲಿ ನಂದಿನಿ ಸ್ಕೂಪ್ ಪಾರ್ಲರ್ ಮಾಡಲು ಮನವಿ ಸಲ್ಲಿಸಲಾಗಿದೆ. ಶಿಮುಲ್ ಅಧ್ಯಕ್ಷ ವಿದ್ಯಾಧರ ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದು, ನಮ್ಮ ಕ್ಷೇತ್ರವ್ಯಾಪ್ತಿಗೆ ಹೆಚ್ಚಿನ ಪಾರ್ಲರ್ ನೀಡುವ ಮೂಲಕ ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದರು.ಶಿಮುಲ್ ಅಧ್ಯಕ್ಷ ವಿದ್ಯಾಧರ ಮಾತನಾಡಿ, ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಬೇಡಿಕೆಯಂತೆ ಸಾಗರ ವಿಧಾನಸಭಾ ಕ್ಷೇತ್ರಕ್ಕೆ ಹೆಚ್ಚಿನ ನಂದಿನಿ ಪಾರ್ಲರನ್ನು ನೀಡಲಾಗಿದೆ. ಪ್ರತಿ ಪಾರ್ಲರ್‌ನಲ್ಲಿ ನಂದಿನಿ ಹಾಲಿನ ೨೦೦ಕ್ಕೂ ಹೆಚ್ಚು ಉತ್ಪನ್ನಗಳು ಲಭ್ಯವಿರುತ್ತದೆ. ಬೆಳಿಗ್ಗೆ ೬ರಿಂದ ರಾತ್ರಿ ೧೧ರವರೆಗೆ ಪಾರ್ಲರ್ ತೆರೆದಿರುತ್ತದೆ. ಇದರಿಂದ ಹೆಚ್ಚು ಜನರಿಗೆ ಅನುಕೂಲವಾಗುತ್ತದೆ ಎಂದರು.ಶಿಮುಲ್ ವ್ಯವಸ್ಥಾಪಕ ನಿರ್ದೇಶಕ ಶೇಖರ್, ನಗರಸಭೆ ಸದಸ್ಯರಾದ ಗಣಪತಿ ಮಂಡಗಳಲೆ, ಅರವಿಂದ ರಾಯ್ಕರ್, ಜಾಕಿರ್, ಪ್ರಮುಖರಾದ ಕೆ.ಸಿದ್ದಪ್ಪ, ಚೇತನರಾಜ್ ಕಣ್ಣೂರು, ಸುರೇಶಬಾಬು, ಜಯರಾಮ್, ರವೀಂದ್ರ ಸಾಗರ್, ಭೀರೇಶ್ ಕಾಗೋಡು, ಅನಿಲಕುಮಾರ್ ಇನ್ನಿತರರು ಹಾಜರಿದ್ದರು. ಸುಹಾಸ್ ಶೆಟ್ಟಿ ಹತ್ಯೆಗೆ ಶಾಸಕರ ಖಂಡನೆ ಮಂಗಳೂರಿನಲ್ಲಿ ಸುಹಾಸ್ ಶೆಟ್ಟಿಯನ್ನು ಹತ್ಯೆ ಮಾಡಿರುವುದು ಖಂಡನೀಯ. ಯಾರನ್ನು ಯಾರೂ ಸಾಯಿಸುವಂತಹ ಕ್ರೂರಕೃತ್ಯಕ್ಕೆ ಇಳಿಯಬಾರದು ಎಂದು ಶಾಸಕ ಬೇಳೂರು ಹೇಳಿದರು.

ಹಿಂದೆ ಪ್ರವೀಣ್ ನೆಟ್ಯಾರ್ ಹತ್ಯೆ ನಡೆಯಿತು. ನಂತರ ಮುಸ್ಲಿಂ ಯುವಕನೊಬ್ಬನ ಹತ್ಯೆ ನಡೆಯಿತು. ಇದೀಗ ಹಿಂದಿನ ದ್ವೇಷವನ್ನು ಮನಸ್ಸಿನಲ್ಲಿ ಇರಿಸಿಕೊಂಡು ಸುಹಾಸ್ ಶೆಟ್ಟಿಯನ್ನು ಹತ್ಯೆ ಮಾಡಲಾಗಿದೆ. ಯಾವುದೇ ರಾಜಕೀಯ ಪಕ್ಷಗಳು ಇಂತಹ ಹತ್ಯೆ ಮುಂದಿಟ್ಟುಕೊಂಡು ರಾಜಕೀಯ ಮಾಡಬಾರದು. ಯಾರನ್ನೇ ಹತ್ಯೆ ಮಾಡಲಿ ತಕ್ಷಣ ಅಂಥವರನ್ನು ಬಂಧಿಸುವ ಜೊತೆಗೆ ಗುಂಡಿಟ್ಟು ಕೊಲ್ಲಬೇಕು. ಸಾಮರಸ್ಯ ಕೆಡಿಸುವವರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.

Share this article