ಹಾವೇರಿ: ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಖಜಾನೆ ಖಾಲಿಯಾಗಿದೆ ಎಂದು ಬಿಜೆಪಿ, ಜೆಡಿಎಸ್ ಮಾಡುತ್ತಿರುವ ಸುಳ್ಳು ಆರೋಪಗಳನ್ನು ನಂಬಬೇಡಿ. ನಮ್ಮ ಸರ್ಕಾರದ ವಿರುದ್ಧ ಜನಾಕ್ರೋಶ ಸಭೆ ನಡೆಸುತ್ತಿರುವ ಬಿಜೆಪಿಯವರಿಗೆ ಮಾನ, ಮರ್ಯಾದೆ ಇದ್ದಿದ್ದರೆ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ವಿರುದ್ಧ ಮಾಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಅಚ್ಚೆ ದಿನ ಆಯೇಗಾ ಎಂದು ಪ್ರಧಾನಿ ಮೋದಿ ಹೇಳಿದ್ದರು. ಆ ಅಚ್ಚೇ ದಿನ ಬರಲೇ ಇಲ್ಲ. ಸಬ್ ಕಾ ಸಾಥ್ ಎಂದ ಮೋದಿ, ಮುಸ್ಲಿಮರಿಗೆ ಉದ್ಯೋಗದಲ್ಲಿ ನೀಡುತ್ತಿದ್ದ ಶೇ. 4 ಮೀಸಲಾತಿಯನ್ನು ಕೈಬಿಟ್ಟಿದ್ದಾರೆ. ಇದೇನಾ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಪ್ರಶ್ನಿಸಿದ ಅವರು, ಮನಮೋಹನ್ ಸಿಂಗ್ ಸರ್ಕಾರವಿದ್ದಾಗ ಡಾಲರ್ ಬೆಲೆ ₹59 ಇದ್ದದ್ದು ಈಗ ₹86ಕ್ಕೆ ಏರಿಕೆ ಆಗಿದೆ. ಅಡುಗೆ ಅನಿಲ ₹450ರಿಂದ ₹879 ಆಗಿದೆ. ಪೆಟ್ರೋಲ್, ಡೀಸೆಲ್, ರಸಗೊಬ್ಬರ, ಔಷಧ, ಚಿನ್ನ, ಅಕ್ಕಿ, ಬೇಳೆ, ಎಣ್ಣೆ, ಕಾಳು ಸೇರಿ ಎಲ್ಲದರ ಬೆಲೆಯನ್ನೂ ಮೋದಿ ಆಕಾಶಕ್ಕೆ ಏರಿಸಿದ್ದಾರೆ. ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡ್ತೀವಿ ಎಂದು ಮೋದಿ ಭರವಸೆ ಕೊಟ್ಟಿದ್ದರು. ಈ 11 ವರ್ಷದಲ್ಲಿ 22 ಕೋಟಿ ಉದ್ಯೋಗ ಸೃಷ್ಟಿ ಆಗಬೇಕಿತ್ತು. ಅದಕ್ಕೇ ಹೇಳೋದು ಸುಳ್ಳು ಬಿಜೆಪಿಯ ಮನೆ ದೇವರು. ಆದ್ದರಿಂದ ಜನರ ಆಕ್ರೋಶ ಇರುವುದು ಬಿಜೆಪಿ ಮೇಲೆ, ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಎನ್ನುವುದನ್ನು ಆರ್. ಅಶೋಕ್, ವಿಜಯೇಂದ್ರ ಅರ್ಥ ಮಾಡಿಕೊಳ್ಳಲಿ ಎಂದರು.
ಹಾವೇರಿ ಜಿಲ್ಲೆ ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಅಧ್ಯಾತ್ಮಿಕವಾಗಿ ಶ್ರೇಷ್ಠತೆ ಪಡೆದಿರುವ ಜಿಲ್ಲೆ. ಈ ಜಿಲ್ಲೆಯ ಆರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹಾವೇರಿಯಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ. ನೀವು ಕಾಂಗ್ರೆಸ್‌ಗೆ, ಈ ಸರ್ಕಾರಕ್ಕೆ ಕೊಟ್ಟ ಮತಗಳಿಗೆ ನಾವು ಘನತೆಯಿಂದ ಗೌರವಿಸಿದ್ದೇವೆ. ಚುನಾವಣೆಗೆ ಮೊದಲು ಕೊಟ್ಟ ಮಾತಿನಂತೆ ಐದಕ್ಕೆ ಐದೂ ಗ್ಯಾರಂಟಿಗಳನ್ನೂ ಜಾರಿಗೊಳಿಸಿ ನಿಮ್ಮ ಮತಗಳ ತೂಕ ಹೆಚ್ಚಿಸಿದ್ದೇವೆ ಎಂದರು.ಡಿಸಿಎಂ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಶಾಸಕ ಶ್ರೀನಿವಾಸ ಮಾನೆ, ಸಲೀಂ ಅಹ್ಮದ್, ಯಾಸೀರ್‌ಖಾನ್ ಪಠಾಣ, ಪ್ರಕಾಶ ಕೋಳಿವಾಡ, ಅಜೀಮ್‌ಪೀರ್ ಖಾದ್ರಿ ಇತರರು ಇದ್ದರು.
ಶಾಸಕ ಮಾನೆಗೆ ಮುಂದೆ ಒಳ್ಳೆಯ ಭವಿಷ್ಯಶಾಸಕ ಮಾನೆ ಅವರು ಕ್ಷೇತ್ರಕ್ಕೆ ಮಾಡಿರುವ ಕೆಲಸ ಕಾಣುತ್ತಿದೆ. ಈ ಊರಿನ ಅಳಿಯ ಬೊಮ್ಮಾಯಿಯವರೇ ಕ್ಷೇತ್ರಕ್ಕೆ ಏನು ಮಾಡಿದ್ದೀರಿ, ಜನರಿಗೆ ಉತ್ತರಿಸಿ ಎಂದು ಸವಾಲು ಹಾಕಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಂದೆ ಶಾಸಕ ಮಾನೆ ಅವರಿಗೆ ರಾಜಕೀಯವಾಗಿ ಉತ್ತಮ ಭವಿಷ್ಯ ಇದೆ ಎಂದರು.