ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ದೇಶ ಸೇರಿದಂತೆ ಸಾರ್ವಜನಿಕ ಆಸ್ತಿ ಪಾಸ್ತಿ ಸಂರಕ್ಷಣೆ ಮಾಡಿ, ಈ ನೆಲದ ಇತಿಹಾಸ ಹಾಗೂ ಪರಂಪರೆ ಮೇಲೆ ಬೆಳಕು ಚೆಲ್ಲುವ ಪತ್ರಗಳೇ ಅಮೂಲ್ಯವಾದ ದಾಖಲೆಗಳು. ಈ ಅಮೂಲ್ಯ ಪತ್ರಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಮೈಸೂರಿನ ವಿಭಾಗೀಯ ಪತ್ರಗಾರದ ಸಹಾಯಕ ನಿರ್ದೇಶಕ ಎಚ್.ಎಲ್.ಮಂಜುನಾಥ್ ಹೇಳಿದರು.ಪಟ್ಟಣದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ವಿದ್ಯಾರ್ಥಿನಿಯರಿಗೆ ಆಯೋಜಿಸಿದ್ದ ಪತ್ರಾಗಾರ ಕೂಟವನ್ನು ಉದ್ಘಾಟಿಸಿ ಚಾರಿತ್ರಿಕ ದಾಖಲೆಗಳ ಮಹತ್ವ ಮತ್ತು ಉಪಯೋಗ ಕುರಿತು ಮಾತನಾಡಿದರು.
ಸಾವಿರಾರು ವರ್ಷಗಳ ಹಿಂದೆ ನಡೆದಿರುವ ಚರಿತ್ರಾರ್ಹ ಘಟನೆಗಳು, ದೇಶದ ಅಮೂಲ್ಯ ದಾಖಲೆಗಳು ಹಾಗೂ ಸರ್ಕಾರದ ಆಸ್ತಿಪಾಸ್ತಿ ಕುರಿತ ಮಾಹಿತಿಗಳು ಪತ್ರಾಗಾರ ಇಲಾಖೆಯಲ್ಲಿ ಸುರಕ್ಷಿತವಾಗಿರುತ್ತವೆ. ನಾವು ಹುಟ್ಟಿನಿಂದ ಸಾಯುವವರೆಗೂ ನಡೆಯುವ ವಿವಿಧ ಹಂತಗಳ ಚಟುವಟಿಕೆಗಳನ್ನು ಸಂರಕ್ಷಿಸಿ ಜೋಪಾನ ಮಾಡಿ ನಮ್ಮ ಮುಂದಿನ ತಲೆಮಾರಿಗೆ ಜೋಪಾನ ಮಾಡುವುದು ಅತೀ ಅಗತ್ಯವಾಗಿದೆ ಎಂದರು.ವಿದ್ಯಾರ್ಥಿಗಳು ಪತ್ರಾಗಾರ ಇಲಾಖೆ ಮಹತ್ವದ ಬಗ್ಗೆ ತಿಳಿದುಕೊಂಡು ನಿಮ್ಮ ಕುಟುಂಬ ಸೇರಿದಂತೆ ಆಸ್ತಿಪಾಸ್ತಿಯ ದಾಖಲೆಗಳು ಹಾಗೂ ಶೈಕ್ಷಣಿಕ ಚಟುವಟಿಕೆಗಳ ದಾಖಲೆಗಳನ್ನು ಜೋಪಾನವಾಗಿಟ್ಟುಕೊಳ್ಳಬೇಕು. ಜನನ ಮರಣ ಪ್ರಮಾಣ ಪಾತ್ರಗಳು ಕೂಡಾ ಅಮೂಲ್ಯವಾದ ದಾಖಲೆಗಳು ಎಂಬುದನ್ನು ಅರ್ಥ ಮಾಡಿಕೊಳ್ಳಿ ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಕಿರಣ್ ಕುಮಾರ್ ಮಾತನಾಡಿ, ಸಾವಿರಾರು ವರ್ಷಗಳ ಹಿಂದೆ ನಿರ್ಮಾಣವಾದ ದೇವಾಲಯಗಳು ನಮ್ಮ ಸಂಸ್ಕೃತಿ ಹಾಗೂ ಪರಂಪರೆ ಮೇಲೆ ಬೆಳಕು ಚೆಲ್ಲುವ ಜೀವಂತ ಸ್ಮಾರಕಗಳಾಗಿವೆ ಎಂದರು.ಇತಿಹಾಸ ವಿಭಾಗದ ಮುಖ್ಯಸ್ಥರಾದ ಚೂಡಲಿಂಗಯ್ಯ ಪ್ರಾಸ್ತಾವಿಕ ನುಡಿದರು. ಕಾಲೇಜಿನ ಪ್ರಾಂಶುಪಾಲೆ ಡಾ.ಕೆ.ಪಿ.ಪ್ರತಿಮಾ ಅಧ್ಯಕ್ಷತೆ ವಹಿಸಿದ್ದರು. ಪಟ್ಟಣದ ಕೆಪಿಎಸ್ ಶಾಲೆ ಪ್ರಾಂಶುಪಾಲ ಡಿ.ಬಿ.ಸತ್ಯ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಮೋಹನ್, ಐಕ್ಯೂಏಸಿ ಸಂಚಾಲಕ ಮಧು, ಸಹಾಯಕ ಪ್ರಾಧ್ಯಾಪಕ ಕೃಷ್ಣಮೂರ್ತಿ ಇದ್ದರು.